ಅಂತರಾಷ್ಟ್ರೀಯ

ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಜನಕ್ರಾಂತಿ: 30 ವರ್ಷದ ನಂತರ ಸೂಡಾನ್ ಅಧ್ಯಕ್ಷ ಪದಚ್ಯುತಿ; ಸೇನೆಯಿಂದ ಅಧಿಕಾರ

Pinterest LinkedIn Tumblr


ಕೈರೋ: ವಾರದ ಹಿಂದಷ್ಟೇ ಜನರ ಪ್ರತಿಭಟನೆಗೆ ಮಣಿದು ಅಲ್ಜೀರಿಯಾದ ಅಧ್ಯಕ್ಷ ಅಬ್ದೆಲ್ ಅಜೀಜ್ ಬೌಟೆಫ್ಲಿಕಾ ಅವರು ಅಧಿಕಾರ ಕಳೆದುಕೊಂಡಿದ್ದರು. ಈಗ ಅಂಥದ್ದೇ ಬೆಳವಣಿಗೆ ಸೂಡಾನ್ ದೇಶದಲ್ಲಾಗಿದೆ. ಸೂಡಾನ್​ನಲ್ಲಿ ಕಳೆದ ಮೂರು ದಶಕಗಳಿಂದ ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಒಮರ್ ಹಸನ್ ಅಲ್-ಬಷೀರ್ ಅವರನ್ನು ಪದಚ್ಯುತಗೊಳಿಸಲಾಗಿದೆ. ಹಲವು ತಿಂಗಳಿಂದಲೂ ಅಲ್-ಬಷೀರ್ ಅವರನ್ನು ಕೆಳಗಿಳಿಸಲು ಬೃಹತ್ ಸಾರ್ವಜನಿಕ ಹೋರಾಟ ನಡೆಯುತ್ತಲೇ ಬಂದಿದ್ದವು. ಇದೀಗ ಅಧ್ಯಕ್ಷರನ್ನು ಪದಚ್ಯುತಗೊಳಿಸಿರುವ ಸೂಡಾನ್ ಮಿಲಿಟರಿ ಅಧಿಕಾರ ಹಿಡಿದಿದೆ. ಸೇನೆಯು ಪದಚ್ಯುತ ಅಧ್ಯಕ್ಷ ಅಲ್-ಬಷೀರ್ ಅವರನ್ನು ಅಜ್ಞಾತ ಸ್ಥಳವೊಂದರಲ್ಲಿರಿಸಿದೆ.

ಸೂಡಾನ್ ಸೇನೆಯು ಎರಡು ವರ್ಷಗಳ ಕಾಲ ದೇಶದ ಆಡಳಿತ ವಹಿಸಿಕೊಳ್ಳುವ ಸಾಧ್ಯತೆ ಇದೆ. ಅದಾದ ನಂತರ ಚುನಾವಣೆ ನಡೆದು ಪ್ರಜಾಪ್ರಭುತ್ವವನ್ನು ಮರಳಿ ತರುವ ಉದ್ದೇಶವಿದೆ. ಇದೇ ವೇಳೆ, ಅಧ್ಯಕ್ಷರನ್ನು ಪದಚ್ಯುತಗೊಳಿಸಿದ ನಂತರ ಎಲ್ಲಿಯೂ ಗಲಭೆ ಅಥವಾ ಅವಘಡ ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ಮೂರು ತಿಂಗಳ ಕಾಲ ತುರ್ತು ಪರಿಸ್ಥಿತಿಯನ್ನು ಹೇರಲಾಗುತ್ತಿದೆ ಎಂದು ಆ ದೇಶದ ರಕ್ಷಣಾ ಸಚಿವ ಅಹ್ಮದ್ ಅವಾದ್ ಐಬನ್ ಔಫ್ ತಿಳಿಸಿದ್ದಾರೆ.

ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಜನಕ್ರಾಂತಿ ಮುಂದುವರಿದಂತಾಗಿದೆ. 2011ರಿಂದ ಲಿಬಿಯಾ, ಈಜಿಪ್ಟ್, ಯೆಮೆನ್ ಮತ್ತು ಟುನಿಶಿಯಾ ದೇಶಗಳ ಸರ್ವಾಧಿಕಾರಿಗಳನ್ನು ಅಲ್ಲಿಯ ಜನರು ಕಿತ್ತೊಗೆದಿದ್ದಾರೆ. ಅಲ್ಜೀರಿಯಾದಲ್ಲೂ ಕೂಡ ಇದೇ ರೀತಿಯ ಪ್ರತಿಭಟನೆಗಳು ಕಳೆದ ವಾರ ಅಲ್ಲಿಯ ಅಧ್ಯಕ್ಷರ ತಲೆದಂಡಕ್ಕೆ ಕಾರಣವಾಗಿದ್ದವು. 20 ವರ್ಷಗಳಿಂದ ಅಧಿಕಾರದಲ್ಲಿದ್ದ ಅಬ್ದೆಲಜೀಜ್ ಬೌತೆಫ್ಲಿಕಾ ಅವರು ಅಧ್ಯಕ್ಷ ಪದವಿ ಬಿಟ್ಟು ಹೊರಬರಬೇಕಾಯಿತು. ಇದೀಗ ಈ ಜನಕ್ರಾಂತಿಗೆ ಸೂಡಾನ್ ಸರ್ವಾಧಿಕಾರಿ ಅಧಿಕಾರ ಕಳೆದುಕೊಂಡಿದ್ದಾರೆ.

Comments are closed.