ಕರ್ನಾಟಕ

ಪ್ರತ್ಯೇಕ ಧರ್ಮ ಹೋರಾಟ ನಿಲ್ಲಿಸದಿದ್ದಲ್ಲಿ ತಕ್ಕ ಪಾಠ – ಕಾಂಗ್ರೆಸ್​ಗೆ ವೀರಶೈವ ಮಠಾಧೀಶರ ಎಚ್ಚರಿಕೆ

Pinterest LinkedIn Tumblr


ಕಲಬುರ್ಗಿ: ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಲೋಕಸಭಾ ಚುನಾವಣೆಯಲ್ಲಿಯೂ ಮಹತ್ವ ಪಡೆದುಕೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸಿಕೊಳ್ಳಲಾರಂಭಿಸಿವೆ. ಕಾಂಗ್ರೆಸ್ ಮುಖಂಡರು ವೀರಶೈವ-ಲಿಂಗಾಯತ ಸಮುದಾಯದ ಸಭೆ ಕರೆದ ಬೆನ್ನ ಹಿಂದೆಯೇ ವೀರಶೈವ ಮಠಾಧೀಶರು ಸಭೆ ನಡೆಸಿದ್ದಾರೆ. ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬುದನ್ನು ಒಪ್ಪಿಕೊಂಡು, ಮಠಾಧೀಶರ ಕ್ಷಮಾಪಣೆ ಕೇಳಿದಲ್ಲಿ ಕ್ಷಮಿಸಲಾಗುವುದು. ಇಲ್ಲದೇ ಇದ್ದಲ್ಲಿ ಧರ್ಮ ಒಡೆಯಲು ಹೋದವರಿಗೆ ಈ ಬಾರಿಯೂ ತಕ್ಕ ಪಾಠ ಕಲಿಸುವಂತೆ ಭಕ್ತರಿಗೆ ಕರೆ ನೀಡುವುದಾಗಿ ವೀರಶೈವ ಮಠಾಧೀಶರು ಪರೋಕ್ಷವಾಗಿ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಚರ್ಚಿತ ವಿಷಯವಾಗಿತ್ತು. ಪ್ರತ್ಯೇಕ ಲಿಂಗಾಯತ ಧರ್ಮದ ನೇತೃತ್ವದ ವಹಿಸಿದ್ದ ಕೆಲ ನಾಯಕರಿಗೆ ಸೋಲಿನ ಅನುಭವ ಆಗಿತ್ತು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿಯೂ ವೀರಶೈವ-ಲಿಂಗಾಯತ ಚರ್ಚೆ ಸದ್ದಿಲ್ಲದೆ ಮುನ್ನಲೆಗೆ ಬಂದಿದೆ. ವೀರಶೈವ-ಲಿಂಗಾಯತರನ್ನು ತಮ್ಮತ್ತ ಸೆಳೆದುಕೊಳ್ಳಲು ವಿವಿಧ ಪಕ್ಷಗಳು ನಡೆಸಿರುವ ಪ್ರಯತ್ನವೇ ಇದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ನಾಳೆ ಶುಕ್ರವಾರ ವೀರಶೈವ-ಲಿಂಗಾಯತರ ಸಮಾವೇಶ ನಡೆಸಲು ಮುಂದಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಈಗ ಮುಗಿದ ಅಧ್ಯಾಯ, ಅದರ ಬಗ್ಗೆ ಸದ್ಯಕ್ಕೇನು ಮಾತನಾಡೋದಿಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಶರಣಪ್ರಕಾಶ ಪಾಟೀಲ, ಬಿ.ಆರ್. ಪಾಟೀಲ ಮತ್ತಿತರರು ಸ್ಪಷ್ಟಪಡಿಸಿದ್ದಾರೆ.

ಇದರ ಬೆನ್ನ ಹಿಂದೆಯೇ ವೀರಶೈವ ಮಠಾಧೀಶರು ಸಭೆ ನಡೆಸಿ ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕೈಬಿಟ್ಟಿರೋದಾಗಿ ಸ್ಪಷ್ಟಪಡಿಸಬೇಕು. ವೀರಶೈವ-ಲಿಂಗಾಯತ ಎರಡೂ ಒಂದೇ. ಇವುಗಳ ನಡುವೆ ಮುಂದಿನ ದಿನಗಳಲ್ಲಿ ಒಡಕು ತರುವುದಿಲ್ಲ ಎಂಬುದನ್ನು ಖಾತ್ರಿಪಡಿಸಬೇಕು. ಬಹಿರಂಗ ಕ್ಷಮೆಯಾಚನೆ ಜೊತೆಗೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕೈಬಿಟ್ಟಿರೋದಾಗಿ ಜಾಗತಿಕ ಲಿಂಗಾಯತ ಮಹಾಸಭಾ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡಿದ ನಾಯಕರಿಗೆ, ಅದಕ್ಕೆ ಕುಮ್ಮಕ್ಕು ನೀಡಿದ ಪಕ್ಷಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಾಗಿ ಸರಡಗಿಯ ರೇವಣಸಿದ್ಧ ಶಿವಾಚಾರ್ಯ, ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಮತ್ತಿತರ ಮಠಾಧೀಶರು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ನಾಳೆ ನಡೆಸಲು ಉದ್ದೇಶಿಸಿರುವ ವೀರಶೈವ-ಲಿಂಗಾಯತ ಸಮಾವೇಶದಲ್ಲಿ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ, ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ ಸೇರಿದಂತೆ ಸಮಾಜದ ಘಟಾನುಘಟಿ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಆ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೆಲ್ಲಿಸಲು ಬಹಿರಂಗ ಪ್ರಚಾರ ಕೈಗೊಳ್ಳಲಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹೋರಾಟ ನಡೆಸಿದವರು ಮತ್ತು ಅದಕ್ಕೆ ವಿರೋಧಿಸಿದ ನಾಯಕರು ಒಟ್ಟಾಗಿ ಸಮಾವೇಶ ಮಾಡುತ್ತಿದ್ದು, ಸಮಾಜವನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್​ಗೆ ಪರೋಕ್ಷ ಎಚ್ಚರಿಕೆ ನೀಡಿರುವ ಸ್ವಾಮೀಜಿಗಳು, ಸೂಕ್ತ ನಿರ್ಣಯ ಪ್ರಕಟಿಸದೇ ಇದ್ದಲ್ಲಿ, ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವಂತೆ ಭಕ್ತ ವೃಂದಕ್ಕೆ ಸಂದೇಶ ನೀಡೋದಾಗಿ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

Comments are closed.