ಕರ್ನಾಟಕ

ಮತದಾನದ ತರಬೇತಿ ಸಂದರ್ಭ ಹೃದಯಾಘಾತದಿಂದ ಶಿಕ್ಷಕ ಸಾವು!

Pinterest LinkedIn Tumblr


ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತರಬೇತಿ ಪಡೆಯುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ವಿವೇಕಾನಂದ ಶಾಲೆಯಲ್ಲಿಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಏರ್ಪಡಿಸಿದ್ದ ಚುನಾವಣಾ ತರಬೇತಿಯ ಅವಧಿಯಲ್ಲೇ ಈ ದಾರುಣ ಘಟನೆ ಸಂಭವಿಸಿದೆ. ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದ ನಿವಾಸಿ ಬಿ. ರಮೇಶ್ (46) ಎಂಬುವರೇ ಹೃದಯಾಘಾತಕ್ಕೆ ಮೃತಪಟ್ಟ ದುರ್ದೈವಿ ಶಿಕ್ಷಕರು. ಸರ್ಕಾರಿ ಶಾಲೆಯಲ್ಲಿ‌ ದೈಹಿಕ ಶಿಕ್ಷಣದ ಶಿಕ್ಷಕರಾಗಿದ್ದ ರಮೇಶ್ ಅವರನ್ನ ಲೋಕಸಭಾ ಚು‌ನಾವಣಾ ಪೋಲಿಂಗ್ ಆಫೀಸರ್ ಆಗಿ‌ ನೇಮಕ ಮಾಡಲಾಗಿತ್ತು.‌‌ ಬೆಳಗ್ಗೆಯಿಂದ ನಡೆದ ಚುನಾವಣಾ ತರಬೇತಿಯಲ್ಲೇ ಸಕ್ರಿಯರಾಗಿ ಪಾಲ್ಗೊಂಡಿದ್ದರು.

ಮಧ್ಯಾಹ್ನ 2.30ರ ಸುಮಾರಿಗೆ ತರಬೇತಿಗೆ ಹಾಜರಾಗಿದ್ದ ರಮೇಶ್, ಕುರ್ಚಿ ಮೇಲೆ ಕುಳಿತುಕೊಂಡೇ ತಮ್ಮ ಕತ್ತಿನ ಭಾಗವನ್ನ ಕುರ್ಚಿ‌ ಹಿಂದೆ ಭಾಗಿಸಿದ್ದಾರೆ. ಅನುಮಾನಗೊಂಡ ಅಧಿಕಾರ ವರ್ಗ ಅವರನ್ನ ಮೇಲೇಳಿಸಲು ಪ್ರಯತ್ನಿಸಿದ್ದಾರೆ. ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯದ ಕಾರಣ, ‌ಸಹಾಯಕ ಚುನಾವಣಾ ಅಧಿಕಾರಿ ದಯಾನಂದ ಪಾಟೀಲರು ಅವರು ಆಂಬುಲೆನ್ಸ್ ಕರೆಸಿದ್ದಾರೆ. ಆ ತರಬೇತಿ ಕೇಂದ್ರದ ಮುಂದೆ ನಿಂತಿದ್ದ ಆಂಬ್ಯುಲೆನ್ಸ್ ವಾಹನವನ್ನ ಕರೆಯಿಸಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆ ಮಾರ್ಗಮಧ್ಯೆ ರಮೇಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Comments are closed.