ಕರ್ನಾಟಕ

ಸ್ಟ್ರಾ ಇಲ್ಲದೆ ಎಳನೀರು ಕುಡಿದ ನಿಖಿಲ್ ಮತ್ತು ಕುಮಾರಸ್ವಾಮಿ!

Pinterest LinkedIn Tumblr


ಇಲ್ಲಿನ ಜನರು ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಆತ್ಮೀಯರು, ನಮ್ಮವರು ಎಂಬ ಭಾವನೆ ಬಂದರೆ ಮಾತ್ರ ಅವರ ಕೈ ಹಿಡಿದು ಮೇಲೆತ್ತುತ್ತಾರೆ. ಆತ್ಮೀಯತೆ ಮರೆತು, ಮೆರೆದರೆ ಮೇಲಿದ್ದವರನ್ನು ಕೆಳಗೆ ಬೀಳಿಸುತ್ತಾರೆ ಎಂಬುದಕ್ಕೆ ಈ ಕ್ಷೇತ್ರದ ರಾಜಕೀಯ ಇತಿಹಾಸ ಸಾಕ್ಷಿಯಾಗಿದೆ. ಇದನ್ನು ಅರಿತೇ ಎರಡು ಪಕ್ಷಗಳ ಅಭ್ಯರ್ಥಿಗಳು ತಮ್ಮ ಪ್ರತಿಷ್ಠೆ ಎಲ್ಲವನ್ನೂ ಬಿಟ್ಟು ಮಂಡ್ಯ ಜನರೊಂದಿಗೆ ಆತ್ಮೀಯವಾಗಿ, ಸರಳವಾಗಿ ಬೆರೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಯುಗಾದಿಯ ಮರುದಿನ ಮದ್ದೂರು ತಾಲೂಕಿನಲ್ಲಿ ಪ್ರಚಾರ ಮಾಡಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ, ಹಳ್ಳಿಯ ಜನರಿಗೆ “ಅಂಬರೀಷಣ್ಣನಿಗೆ ಯಾವ ಊಟ ಇಷ್ಟ ನಿಮಗೆ ಗೊತ್ತಾ?” ಎಂದು ಪ್ರಶ್ನಿಸಿದ್ದರು. ಅದಕ್ಕೆ ಜನರು, “ನಾಟಿ ಕೋಳಿ, ಮುದ್ದೆ, ಮಟನ್​, ಚಿಕನ್…” ಎಂದು ಗುಂಪಿನಲ್ಲಿ ಕೂಗಿದ್ದರು. “ಅಲ್ಲಾ, ಅಂಬರೀಷ್​ಗೆ ಕೈಮಾ, ಮುದ್ದೆ ಎಂದರೆ ಬಹಳ ಇಷ್ಟ. ನೀವು ನನಗೆ ಮತ ನೀಡಿ ಗೆಲ್ಲಿಸಿ, ನಂತರ ನಿಮ್ಮ ಊರಿಗೆ ಬಂದು, ಕೈಮಾ ತಿನ್ನುತ್ತೇನೆ.” ಎಂದು ಹೇಳಿದ್ದರು.

ಕಳೆದ ವಾರ ನಿಖಿಲ್ ಕುಮಾರಸ್ವಾಮಿ ಅವರು ಮೇಲುಕೋಟೆ ಭಾಗದ ಹಳ್ಳಿಗಳಲ್ಲಿ ಪ್ರಚಾರ ಮಾಡುವಾಗ ಅಭಿಮಾನಿಯೊಬ್ಬರು ನೀಡಿದ ಎಳನೀರನ್ನು ಸ್ಟ್ರಾ ಇಲ್ಲದೆ ಕುಡಿದಿದ್ದು ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿತ್ತು. ‘ಸ್ಟ್ರಾ ಇಲ್ಲದೆ, ಮಂಡ್ಯ ಸ್ಟೈಲ್​ನಲ್ಲಿ ಒಂದೇ ಏಟಿಗೆ ಎಳನೀರು ಕುಡಿದ ನಿಖಿಲ್’ ಎಂಬ ಶೀರ್ಷಿಕೆಯಡಿ ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿರುವ ಇಬ್ಬರು ಹೈಪ್ರೊಫೈಲ್​ ನಾಯಕರು ಹೀಗೆ ಜನರೊಂದಿಗೆ ಅವರದೇ ಭಾಷೆಯಲ್ಲಿ ಆತ್ಮೀಯವಾಗಿ, ಸರಳವಾಗಿ ಬೆರೆಯಲು ಸಾಕಷ್ಟು ಕಾರಣಗಳಿವೆ. ಮಂಡ್ಯ ಮತದಾರರ ವಿಷಯ ಇತರೆ ಕ್ಷೇತ್ರಗಳ ಜನರಂತೆ ಅಲ್ಲ. ಇಲ್ಲಿನ ಜನರು ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಆತ್ಮೀಯರು, ನಮ್ಮವರು ಎಂಬ ಭಾವನೆ ಬಂದರೆ ಮಾತ್ರ ಅವರ ಕೈ ಹಿಡಿದು ಮೇಲೆತ್ತುತ್ತಾರೆ. ಆತ್ಮೀಯತೆ ಮರೆತು, ಮೆರೆದರೆ ಮೇಲಿದ್ದವರನ್ನು ಕೆಳಗೆ ಬೀಳಿಸುತ್ತಾರೆ ಎಂಬುದಕ್ಕೆ ಈ ಕ್ಷೇತ್ರದ ರಾಜಕೀಯ ಇತಿಹಾಸ ಸಾಕ್ಷಿಯಾಗಿದೆ. ಇದನ್ನು ಅರಿತೇ ಎರಡು ಪಕ್ಷಗಳ ಅಭ್ಯರ್ಥಿಗಳು ತಮ್ಮ ಪ್ರತಿಷ್ಠೆ ಎಲ್ಲವನ್ನೂ ಬಿಟ್ಟು ಮಂಡ್ಯ ಜನರೊಂದಿಗೆ ಆತ್ಮೀಯವಾಗಿ, ಸರಳವಾಗಿ ಬೆರೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಅದರಲ್ಲೂ ನಿಖಿಲ್​ ಕುಮಾರಸ್ವಾಮಿ ಸ್ಟ್ರಾ ಇಲ್ಲದೇ ಎಳನೀರು ಕುಡಿದ ವಿಚಾರ ಹೆಚ್ಚು ಸದ್ದು ಮಾಡಿದ್ದು, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ದಿವಂಗತ ಅನಂತ್​ಕುಮಾರ್ ಅವರ ಹೆಂಡತಿ ತೇಜಸ್ವಿನಿ ಅನಂತ್​ಕುಮಾರ್​ ಅವರು ನಿಖಿಲ್​ರನ್ನು ಹೊಗಳಿ ಮಾಡಿದ್ದ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದರ ಹಿಂದೆ ರಾಜಕೀಯ ಉದ್ದೇಶವಿರದೆ ಪರಿಸರ ಕಾಳಜಿ ವ್ಯಕ್ತವಾಗಿದ್ದು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು.

“ಸ್ಟ್ರಾಗಳನ್ನು ಮರುಸಂಸ್ಕರಣೆ ಮಾಡಲು ಸಾಧ್ಯವಿಲ್ಲ. ಒಮ್ಮೆ ಇವುಗಳನ್ನು ಬಳಸಿ ಬಿಸಾಡುವುದರಿಂದ ಪರಿಸರ ಮತ್ತು ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಏನೇ ಆಗಲಿ ನಿಖಿಲ್ ಸ್ಟ್ರಾ ಇಲ್ಲದೆ ಎಳನೀರು ಕುಡಿದಿದ್ದನ್ನು ನೋಡಿ ನಾವೆಲ್ಲ ಕಲಿಯಬೇಕು” ಎಂದು ಪಕ್ಷಭೇದ ಮರೆತು, ಪರಿಸರ ಕಾಳಜಿ ಉದ್ದೇಶದಲ್ಲಿ ಟ್ವೀಟ್ ಮಾಡಿದ್ದರು.

ಜೆಡಿಎಸ್​ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ನಿಖಿಲ್​ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ಕ್ಷೇತ್ರಗಳಲ್ಲಿ (ಕೆ.ಆರ್.ನಗರ ಸೇರಿದಂತೆ) ಜೆಡಿಎಸ್​ನವರೇ ಶಾಸಕರು ಇದ್ದಾರೆ. ಅಷ್ಟೇ ಅಲ್ಲದೇ ತಮ್ಮ ಮಗನೇ ಅಭ್ಯರ್ಥಿಯಾಗಿರುವುದರಿಂದ ಸಿಎಂ ಕುಮಾರಸ್ವಾಮಿಗೆ ಇದು ಪ್ರತಿಷ್ಠೆಯ ವಿಷಯವೂ ಕೂಡ ಆಗಿದೆ. ಆದರೆ, ಇಲ್ಲಿನ ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇಂದು ಮಂಡ್ಯದಲ್ಲಿ ಮಗನ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕುಮಾರಸ್ವಾಮಿ ಅವರು ಕೂಡ ಸ್ಟ್ರಾ ಇಲ್ಲದೇ ಎಳನೀರು ಕುಡಿದಿದ್ದಾರೆ. ಇದು ಕೂಡ ಇಲ್ಲಿನ ಜನರನ್ನು ಆತ್ಮೀಯವಾಗಿ ಸೆಳೆಯುವ ತಂತ್ರಗಾರಿಕೆಯ ಒಂದು ಭಾಗ ಎನ್ನಬಹುದು. ಒಬ್ಬ ಮುಖ್ಯಮಂತ್ರಿ ಸಾಮಾನ್ಯರಂತೆ ಎಳನೀರು ಕುಡಿತ್ತಾರೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವ ಉದ್ದೇಶ ಕೂಡ ಇದರ ಹಿಂದೆ ಇರಬಹುದು.

ಒಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಯಾರು ಏನು ಮಾಡಿ ಇಲ್ಲಿಯ ಜನರನ್ನು ಗೆದ್ದಿದ್ದಾರೆ ಎಂಬುದು ಮುಂದಿನ ತಿಂಗಳು ಮತ ಎಣಿಕೆಯ ದಿನ ತಿಳಿಯಲಿದೆ.

Comments are closed.