ಕರ್ನಾಟಕ

ಸೋಲಿನ ಭೀತಿಯಲ್ಲಿ ಕುಮಾರಸ್ವಾಮಿ; ಇಂದಿನಿಂದ ನಿಖಿಲ್​ ಪರ ಅಬ್ಬರದ ಪ್ರಚಾರ

Pinterest LinkedIn Tumblr


ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಗ ನಿಖಿಲ್​ರನ್ನು ಗೆಲ್ಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಸಾಕಷ್ಟು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇದರ ಭಾಗವಾಗಿ ಇಂದಿನಿಂದ ಎರಡು ದಿನಗಳ ಕಾಲ ಅವರು ಮಂಡ್ಯದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಕೆಆರ್​ಎಸ್​​ ಬಳಿ ಇರುವ ಹಳ್ಳಿಕಟ್ಟೆ ಸರ್ಕಲ್​​ನಿಂದ ಕುಮಾರಸ್ವಾಮಿ ಪ್ರಚಾರ ಆರಂಭವಾಗಲಿದೆ. ಹಳ್ಳಿ ಸರ್ಕಲ್‌ ನಿಂದ ಶ್ರೀರಂಗಪಟ್ಟಣದವರೆಗೂ ಅವರು ರೋಡ್ ಶೋ ನಡೆಸಲಿದ್ದಾರೆ. ಕೆಆರ್​​​ಎಸ್​​ನಿಂದ ಶ್ರೀರಂಗಪಟ್ಟಣದವರೆಗೆ ಹಾದು ಹೋಗುವ ರಸ್ತೆಯ ಊರುಗಳಲ್ಲಿ ಸಿಎಂ ಪ್ರಚಾರ ನಡೆಸಲಿದ್ದಾರೆ. ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು, ಶ್ರೀರಂಗಪಟ್ಟಣ ಶಾಸಕ ರವಿ ಶ್ರೀಕಂಠಯ್ಯ ಮೊದಲಾದವರು ಕುಮಾರಸ್ವಾಮಿ ಅವರ ಜೊತೆಗೂಡಲಿದ್ದಾರೆ.

ಕುಮಾರಸ್ವಾಮಿ ಪ್ರಚಾರಕ್ಕೆ ಕೆಆರ್​ಎಸ್​​ನ ಹಳ್ಳಿಕಟ್ಟೆ ವೃತ್ತ ಸಜ್ಜಾಗಿದೆ. ಹಳ್ಳಿಕಟ್ಟೆ ಸರ್ಕಲ್ ಬಳಿ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿದೆ. ಪ್ರಚಾರಕ್ಕೂ‌ ಮುನ್ನ ಹಳ್ಳಿ ಕಟ್ಟೆ ಸರ್ಕಲ್ ಬಳಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಎಂ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ತಡರಾತ್ರಿವರೆಗೂ ಸಿಎಂ ಸಭೆ:

ಮಂಡ್ಯದಲ್ಲಿ ನಿಖಿಲ್ ಗೆಲ್ಲಿಸಲು ಸಿಎಂ ಎಚ್​ಡಿ ಕುಮಾರಸ್ವಾಮಿ ಶತಪ್ರಯತ್ನ ನಡೆಸುತ್ತಿದ್ದಾರೆ. ಅವರಿಗೆ ಈಗ ಸೋಲಿನ ಭೀತಿ ಎದುರಾಗಿದೆ ಎನ್ನಲಾಗಿದೆ. ಹಾಗಾಗಿ, ತಡರಾತ್ರಿಯವರೆಗೂ ಕೆಆರ್​ಎಸ್​ ಬಳಿ ಇರುವ ರಾಯಲ್ ಆರ್ಕೆಡ್ ಹೋಟೆಲ್‌ನಲ್ಲಿ ಮಂಡ್ಯ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಈಗಿನ ಮಂಡ್ಯದ ಚಿತ್ರಣದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರಂತೆ.

ಸುಮಲತಾ ಅಂಬರೀಶ್ ಹಾಗೂ ಸ್ಟಾರ್ ನಟರ ಪ್ರಚಾರದಿಂದ ಆಗುತ್ತಿರುವ ಪರಿಣಾಮ, ಮತದಾರರನ್ನು ಸೆಳೆಯುವುದಕ್ಕೆ ಮಾಡಿಕೊಳ್ಳಬೇಕಾದ ತಂತ್ರಗಳು, ಯಾವ ಕಡೆಗಳಲ್ಲಿ ಹೆಚ್ಚು ಪ್ರಚಾರ ನಡೆಸಿದರೆ ಹೆಚ್ಚು ಲಾಭ ಆಗುತ್ತೆ, ಮತದಾರರನ್ನು ತಮ್ಮ ಕಡೆ ಒಲಿಸಿಕೊಳ್ಳಲು ಏನು ಕಾರ್ಯತಂತ್ರ ರೂಪಿಸಬೇಕು ಎನ್ನುವುದರ ಬಗ್ಗೆ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನುವುದು ಮೂಲಗಳ ಮಾತು.

Comments are closed.