ಕ್ರೀಡೆ

ಪೊಲ್ಲಾರ್ಡ್​ ಆರ್ಭಟ; ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ ರೋಚಕ ಗೆಲುವು

Pinterest LinkedIn Tumblr

ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಕಿಂಗ್ಸೆ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಎಸೆತದಲ್ಲಿ ಗೆಲುವಿನ ರನ್ ಗಳಿಸಿ 3 ವಿಕೆಟ್ ರೋಚಕ ಗೆಲುವು ಸಾಧಿಸಿದೆ.

ಕಿಂಗ್ಸ್ ಇಲೆವನ್ ಪಂಜಾಬ್ ತಂಡ ನೀಡಿದ 198 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಮುಂಬೈ ತಂಡ ಹಂಗಾಮಿ ನಾಯಕ ಕೀರನ್ ಪೊಲಾರ್ಡ್ (83 ರನ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದಾಗಿ ನಿಗದಿತ 20 ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು.

ಅಂತಿಮ ಓವರ್ ನಲ್ಲಿ ಗೆಲ್ಲಲು 15 ರನ್ ಗಳ ಅವಶ್ಯಕತೆ ಇದ್ದಾಗ ರಜಪೂತ್ ಎಸೆದ ಮೊದಲ ಎಸೆತ ನೋಬಾಲ್ ಆಗಿತ್ತು. ಈ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ ಹಂಗಾಮಿ ನಾಯಕ ಪೊಲಾರ್ಡ್ ಬಳಿಕದ ಎಸೆತವನ್ನೂ ಬೌಂಡರಿಗೆ ಅಟ್ಟುವ ಮೂಲಕ ಅದಾಗಲೇ ತಂಡಕ್ಕೆ ಗೆಲುವಿನ ಸೂಚನೆ ನೀಡಿದ್ದರು. ಆದರೆ ಬಳಿಕದ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಪೊಲಾರ್ಡ್ ಮಿಲ್ಲರ್ ಕ್ಯಾಚ್ ನೀಡಿ ಔಟ್ ಆದರು. ಈ ವೇಳೆ ಮುಂಬೈ ಪಾಳಯದಲ್ಲಿ ಸೋಲಿನ ಕಾರ್ಮೋಡ ಕವಿಯಿತು.

ಈ ವೇಳೆ ಮುಂಬೈ ತಂಡಕ್ಕೆ ಗೆಲಲ್ಲು 3 ಎಸೆತದಲ್ಲಿ ನಾಲ್ಕು ರನ್ ಗಳ ಅವಶ್ಯಕತೆ ಇತ್ತು. ಬಳಿಕ ಕ್ರೀಸ್ ಗೆ ಬಂದ ಅಲ್ಜಾರಿ ಜೋಸೆಫ್ ಫುಲ್ ಟಾಸ್ ಎಸೆತವನ್ನು ಆಡುವಲ್ಲಿ ವಿಫಲರಾದರು. ಬಳಿಕದ ಎಸೆತದಲ್ಲಿ ಜೋಸೆಫ್ ಸಿಂಗಲ್ ರನ್ ಪಡೆದರು. ಬಳಿಕ ಕ್ರೀಸ್ ಗೆ ಬಂದ ಚಹರ್ ಕೂಡ ಸಿಂಗಲ್ ರನ್ ಪಡೆದು ಮತ್ತಷ್ಟು ರೋಚಕತೆ ಹುಟ್ಟುಹಾಕಿದರು. ಅಂತಿಮ ಎಸೆತದಲ್ಲಿ ಗೆಲ್ಲಲು 2ರನ್ ಬೇಕಿದ್ದಾಗ ಈ ಪಂದ್ಯ ಸೂಪರ್ ಓವರ್ ಗೆ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಜೋಸೆಫ್ ರಜಪೂತ್ ಎಸೆದ ಫುಲ್ ಟಾಸ್ ಎಸೆತವನ್ನು ಲಾಂಗ್ ಆನ್ ನತ್ತ ಬಾರಿಸಿ 2 ರನ್ ಓಡಿದರು. ಅಷ್ಟು ಹೊತ್ತಿಗಾಗಲೇ ಮುಂಬೈ ಪಾಳಯದಲ್ಲಿ ಗೆಲುವಿನ ಸಂಭ್ರಮಾಚರಣೆಯ ಕಟ್ಟೆ ಒಡೆದಿತ್ತು. ಮುಂಬೈ ತಂಡ ಮೂರು ವಿಕೆಟ್ ಗಳ ರೋಚಕ ಜಯ ದಾಖಲಿಸಿತು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕನ್ನಡಿಗ ಕೆಎಲ್ ರಾಹುಲ್ (ಅಜೇಯ 100 ರನ್)ಅಮೋಘ ಶತಕ ಹಾಗೂ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ (63 ರನ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 197 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಮುಂಬೈ ಪರ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರೆ, ಜೇಸನ್ ಬೆಹಂಡ್ರಾಫ್ ಮತ್ತು ಜಸ್ ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.

Comments are closed.