ಕರ್ನಾಟಕ

ಪ್ರಚಾರದ ವೇಳೆ ಅನುಚಿತ ವರ್ತನೆ: ಯುವಕನಿಗೆ ಕಪಾಳ ಮೋಕ್ಷ ಮಾಡಿದ ನಟಿ ಖುಷ್ಬೂ!

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಅನುಚಿತ ವರ್ತನೆ ತೋರಿದ ಯುವಕನಿಗೆ ಖ್ಯಾತ ನಟಿ ಹಾಗೂ ಎಐಸಿಸಿ ವಕ್ತಾರೆ ಖುಷ್ಬೂ ಅವರು ಕಪಾಳ ಮೋಕ್ಷ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಇಂದಿರಾನಗದ ಹೊಯ್ಸಳನಗರದಲ್ಲಿ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ನಟಿ ಖುಷ್ಬೂ ಅವರು ಪ್ರಚಾರ ನಡೆಸಿದರು. ಬಳಿಕ ಪ್ರಚಾರದ ವಾಹನದತ್ತ ತೆರಳುತ್ತಿದ್ದ ವೇಳೆ ಜನ ಸಮೂಹದಲ್ಲಿದ್ದ ಓರ್ವ ಯುವಕ ಖುಷ್ಬೂ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.

ಇದರಿಂದ ರೊಚ್ಚಿಗೆದ್ದ ಖುಷ್ಬೂ ಕೂಡಲೇ ಅತನ ಕಪಾಳಕ್ಕೆ ಭಾರಿಸಿದ್ದಾರೆ. ಅಂತೆಯೇ ಪಕ್ಕದಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಕೂಡಲೇ ಯುವಕನನ್ನು ಹಿಡಿದು ಥಳಿಸಿ ಪಕ್ಕಕ್ಕೆ ಎಳೆದುಕೊಂಡು ಹೋಗಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು ಮಾತನಾಡಿದ್ದು, ಖುಷ್ಬೂ ಅವರೊಂದಿಗೆ ಆತ ಅಸಭ್ಯವಾಗಿ ವರ್ತಿಸಿದ್ದರಿಂದಲೇ ಅವರು ಕಪಾಳಕ್ಕೆ ಹೊಡೆದಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ನಾನು ಖುಷ್ಬೂ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಆತ ಅನುಚಿತವಾಗಿ ವರ್ತಿಸಿದ. ಹೀಗಾಗಿ ಹೊಡೆದೆ ಎಂದು ಖುಷ್ಬೂ ಅವರು ಹೇಳಿದ್ದಾರೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಅಂತೆಯೇ ಸಾವಿರಾರು ಜನರಿದ್ದ ಸಂದರ್ಭದಲ್ಲಿ ಇಂತಹ ಕಿಡಿಗೇಡಿ ಕೃತ್ಯ ಸಾಮಾನ್ಯ. ಅಂತೆಯೇ ಈತ ಯಾರು ಎಂದು ನಮಗೆ ತಿಳಿದಿಲ್ಲ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ರಿಜ್ವಾನ್ ಅರ್ಷದ್ ಹೇಳಿದರು.

Comments are closed.