ಕರ್ನಾಟಕ

ಖಮರುಲ್ ಪತ್ನಿ ಮತ್ತು ಶಿಷ್ಯನ ಮಧ್ಯೆ ಘರ್ಷಣೆ; ಚುಲ್ ಬುಲ್ ಮೇಲೆ ಫಾತಿಮಾ ಬೆಂಬಲಿಗರಿಂದ ಹಲ್ಲೆ

Pinterest LinkedIn Tumblr


ಕಲಬುರ್ಗಿ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಮೊನ್ನೆ ರಾತ್ರಿ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹ್ಮದ್ ಅಸಗರ್ ಚುಲ್ ಬುಲ್ ಮೇಲೆ ಹಲ್ಲೆ ಮಾಡಿ, ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಸ್ ಫಾತಿಮಾ ಬೇಗಂ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಖಮರುಲ್ ಇಸ್ಲಾಂ ಸಾವು ಮತ್ತು ಖನೀಸ್ ಫಾತಿಮಾ ಬೇಗಂ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಹೇಳಿಕೆ ಹಾಕಿದ್ದುದೇ ಘಟನೆಗೆ ಕಾರಣ ಎನ್ನಲಾಗಿದೆ. ಅಪಹರಣ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ರೋಜಾ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ದುಷ್ಕರ್ಮಿಗಳು ಮನೆಯಲ್ಲಿ ಕುರ್ಚಿಗಳನ್ನು ಎಸೆದು ಪುಡಿ ಪುಡಿ ಮಾಡಿ, ಕಾರಿನ ಗಾಜು ಜಖಂಗೊಳಿಸಿದ್ದಾರೆ. ತನ್ನನ್ನು ಅಪಹರಿಸಿ, ರಿಂಗ್ ರಸ್ತೆಯಲ್ಲಿ ಸುತ್ತಾಡಿಸಿ, ನಂತರ ಕೊಲೆ ಮಾಡಲು ಯತ್ನಿಸಲಾಗಿದೆ. ಇದರ ಹಿಂದೆ ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಸ್ ಫಾತಿಮಾ ಬೇಗಂರ ಕೈವಾಡವಿದೆ. ಅವರ ಬೆಂಬಲಿಗರೇ ತನ್ನ ಮೇಲೆ ಹಲ್ಲೆ ಮಾಡಿದ್ದು, ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ಮಹ್ಮದ್ ಅಸಗರ್ ಚುಲ್ ಬುಲ್ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಸ್ ಫಾತಿಮಾ ಬೇಗಂರ ಕುರಿತು ಹೇಳಿಕೆ ನೀಡಿದ್ದುದೇ ಘಟನೆಗೆ ಕಾರಣ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ನೂರ್ ಭಾಗ್ ಪ್ರದೇಶಕ್ಕೆ ಭೇಟಿ ನೀಡಿದ ಎಸ್.ಪಿ. ಯಡಾ ಮಾರ್ಟಿನ್, ಪರಿಶೀಲನೆ ನಡೆಸಿದರು. ರಾಜಕೀಯ ದುರುದ್ದೇಶದಿಂದ ಕೆಲ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್.ಪಿ. ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ.

ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ಅವರ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಪರೋಕ್ಷ ಕಾರಣ. ಹೀಗೆ ಖಮರುಲ್ ಇಸ್ಲಾಂ ಸಾವಿಗೆ ಕಾರಣರಾದವರನ್ನೇ ಅವರ ಪತ್ನಿ ಖನೀಸ್ ಫಾತಿಮಾ ಬೇಗಂ ತಲೆಮೇಲೆ ಹೊತ್ತು ಕುಳಿತಿದ್ದಾರೆ. ಅಲ್ಲದೆ ಶಾಸಕಿಯಾದ ಮೇಲೆ ಯಾವುದೇ ಕೆಲಸಗಳನ್ನು ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಖನೀಸ್ ಫಾತಿಮಾ ಕುರಿತು ಮಹ್ಮದ್ ಅಸಗರ್ ಚುಲ್ ಬುಲ್ ಏಕ ವಚನದಲ್ಲಿ ಹೇಳಿಕೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇದರಿಂದ ಕುಪಿತಗೊಂಡ ಖಮರುಲ್ ಇಸ್ಲಾಂ ಅಭಿಮಾನಿಗಳು ಚುಲ್ ಬುಲ್ ಅವರನ್ನು ಪ್ರಶ್ನಿಸಿದಾಗ ಅವರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡು ಕೆಲವರು ಚುಲ್ ಬುಲ್ ಮನೆಯ ಮೇಲೆ ದಾಳಿ ಮಾಡಿಬಹುದು. ಆದರೆ ದಾಳಿಯ ಹಿಂದೆ ನನ್ನ ಕುಮ್ಮಕ್ಕಿಲ್ಲ. ನನ್ನನ್ನು ತೇಜೋವಧೆ ಮಾಡುವ ಹೇಳಿಕೆಗಳನ್ನು ನೀಡಿ, ಖಮರುಲ್ ಇಸ್ಲಾಂ ಅವರಿಗೆ ಕೆಟ್ಟ ಹೆಸರು ತರುವ ಕೆಲಸವನ್ನು ಚುಲ್ ಬುಲ್ ಮಾಡುತ್ತಿದ್ದಾರೆ. ನಮ್ಮವರ ಮೇಲೂ ಅವರು ಹಲ್ಲೆ ಮಾಡಿದ್ದು, ಈ ಕುರಿತು ದೂರು ನೀಡಿದ್ದೇವೆ ಎಂದು ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಸ್ ಫಾತಿಮಾ ಬೇಗಂ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿರುವಾಗಲೇ ಕಾಂಗ್ರೆಸ್​ನಲ್ಲಿ ಉಂಟಾದ ಆಂತರಿಕ ಭಿನ್ನಮತ ಮುಂದಿನ ದಿನಗಳಲ್ಲಿ ದೊಡ್ಡ ಎಫೆಕ್ಟ್ ಆಗುವ ಸಾಧ್ಯತೆಗಳಿವೆ. ಖಮರುಲ್ ಇಸ್ಲಾಂ ಶಿಷ್ಯ ಅಸಗರ್ ಚುಲ್ ಬುಲ್ ಮತ್ತು ಖಮರುಲ್ ಇಸ್ಲಾಂ ಪತ್ನಿ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಘಟನೆ ನಡೆದಿದ್ದರೂ, ಅದರ ದುಷ್ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮೇಲಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಖಮರುಲ್ ಇಸ್ಲಾಂ ದತ್ತುಪುತ್ರ ಶೋಹೇಬ್, ಅಳಿಯ ಆದಿಲ್ ಸುಲೇಮಾನ್ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ರೋಜಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments are closed.