ಕರ್ನಾಟಕ

ಸಿನೆಮಾ ರಂಗಕ್ಕೂ ಮಂಡ್ಯ ರಾಜಕಾರಣಕ್ಕೂ ಬಿಡದ ನಂಟು …!

Pinterest LinkedIn Tumblr


ಮಂಡ್ಯ: ಮಂಡ್ಯ ರಾಜಕಾರಣಕ್ಕೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. ಇದು ನಿನ್ನೆ ಮೊನ್ನೆಯ ಕಥೆಯಲ್ಲ. 65 ವರ್ಷಗಳ ಸುದೀರ್ಘ ಚುನಾವಣಾ ಇತಿಹಾಸವನ್ನು ಅವಲೋಕಿಸಿದರೆ ಮಂಡ್ಯ ರಾಜಕಾರಣಕ್ಕೂ, ಸಿನಿಮಾ ರಂಗಕ್ಕೂ ಬಲವಾದ ನಂಟು ಇದೆ ಎಂಬುದು ಸ್ಪಷ್ಟವಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಅಂಬರೀಷ್ ಪತ್ನಿ ಸುಮಲತಾ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ನಡುವಣ ಸ್ಪರ್ಧೆ ರಾಜ್ಯ ರಾಜಕೀಯದಲ್ಲಿ ಭಾರೀ ಧೂಳೆಬ್ಬಿಸಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಎರಡು ಹಂತದಲ್ಲಿ ನಡೆಯುತ್ತಿದ್ದರೂ ಮಂಡ್ಯ ಲೋಕಸಭಾ ಚುನಾವಣೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.

ಮಂಡ್ಯ ರಾಜಕಾರಣದಲ್ಲಿ ಅಂಬರೀಷ್‌ ಮಿಂಚಿ ಮೆರೆದು ತಮ್ಮ ಸಾಮರ್ಥ್ಯ ತೋರಿ ಮಂಡ್ಯದ ಗಂಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಮಂಡ್ಯದಿಂದ ಚಿತ್ರನಟಿ ರಮ್ಯ ಕೂಡ ಸಂಸತ್ತಿಗೆ ಆಯ್ಕೆಯಾಗಿದ್ದರು.

ಈ ಹಿಂದೆ ಜೆಡಿಎಸ್‌ ನಿಂದ ಸ್ಪರ್ಧೆ ಮಾಡಿ ಸಂಸದರಾಗಿ ಆಯ್ಕೆಯಾಗಿದ್ದ ಎನ್‌.ಚೆಲುವರಾಯಸ್ವಾಮಿ ಅವರಿಗೂ ಚಿತ್ರರಂಗದ ನಂಟಿದೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಜೆಡಿಎಸ್‌ ನಿಂದ ಕಾಂಗ್ರೆಸ್‌ ಗೆ ಜಿಗಿದಿರುವ ಚೆಲುವರಾಯಸ್ವಾಮಿ ಅವರು, ‘ಹ್ಯಾಪಿ ಬರ್ತ್‌ ಡೇ’ ಸಿನಿಮಾ ನಿರ್ಮಾಪಕರಾಗಿದ್ದಾರೆ. ಈ ಚಿತ್ರದಲ್ಲಿ ಅವರ ಪುತ್ರ ಸಚಿನ್ ನಾಯಕನ ಪಾತ್ರವನ್ನು ನಿರ್ವಹಣೆ ಮಾಡಿದ್ದಾರೆ. ಹೀಗಾಗಿ ರಾಜಕಾರಣಕ್ಕೂ, ಚಿತ್ರರಂಗಕ್ಕೂ ಬಹಳ ಸುದೀರ್ಘವಾದ ನಂಟು ಬೆಳೆದುಕೊಂಡು ಬಂದಿದೆ.

ಮಂಡ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೆ.ವಿ.ಶಂಕರೇಗೌಡ ಅವರೂ ಕೂಡ ಸಾಹಿತ್ಯ, ರಂಗಭೂಮಿ ಮತ್ತು ಚಿತ್ರರಂಗಕ್ಕೆ ಬಹಳ ಹತ್ತಿರವಾಗಿದ್ದರು. ‘ಕೂಡಿ ಬಾಳೋಣ’ ಎಂಬ ಚಲನಚಿತ್ರಕ್ಕೆ ಅವರೇ ನಿರ್ದೇಶನ ಮಾಡಿ, ಸಂಭಾಷಣೆ ಬರೆದಿದ್ದಾರೆ, ಜೊತೆಗೆ ನಿರ್ಮಾಪಕರೂ ಆಗಿದ್ದರು ಎಂಬುದು ಗಮನಿಸಬೇಕಾದ ವಿಚಾರವಾಗಿದೆ.

ಎರಡು ಬಾರಿ ಕಾಂಗ್ರೆಸ್ ನಿಂದ, ಒಂದು ಬಾರಿ ಜೆಡಿಎಸ್ ನಿಂದ ಅಂಬರೀಷ್ ಸಂಸತ್ತಿಗೆ ಆಯ್ಕೆಯಾಗಿ ಸುದೀರ್ಘ ಅವಧಿಯ ಸಂಸದ ಎಂಬ ಕೀರ್ತಿ ಪಡೆದುಕೊಂಡಿದ್ದರು.

ಮಂಡ್ಯ ಜಿಲ್ಲೆಯ ಸೊಸೆ, ಚಿತ್ರನಟಿ ರಮ್ಯ ಸಮಕಾಲೀನ ನಟಿ ರಕ್ಷಿತಾ ಹೆಸರೂ ಕೂಡ 2013ರ ಉಪಚುನಾವಣೆ ಮತ್ತು 2014ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪ್ರಬಲವಾಗಿ ಕಂಡು ಬಂದಿತ್ತು. ಹೇಳಿ ಕೇಳಿ ರಕ್ಷಿತಾ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಿರ್ದೇಶಕ ಪ್ರೇಮ್ ಅವರ ಪತ್ನಿ ಎಂಬುದು ಕೂಡ ಮರೆಯುವಂತಿಲ್ಲ.

ಹೀಗೆ ಇತಿಹಾಸವನ್ನು ಕೆದಕುತ್ತಾ ಹೋದರೆ ಪ್ರತಿ ಚುನಾವಣೆಯಲ್ಲೂ ಚಿತ್ರನಟರ ಸದ್ದು, ಆರ್ಭಟ ಕೇಳಿ ಬಂದಿದೆ. ಇದು ಹೊಸದೇನಲ್ಲ.

ಹಾಲಿ ಸಂಸದರಾಗಿರುವ ಎಲ್‌.ಆರ್‌.ಶಿವರಾಮೇಗೌಡ ಕೂಡ ಸಿನಿಮಾ, ಗ್ಲಾಮರ್ ಜಗತ್ತಿಗೆ ಹತ್ತಿರವಾಗಿದ್ದಾರೆ. ಅವರ ಪುತ್ರಿ ಭವ್ಯಾ ಗೌಡ ಅವರು 2010 ರಲ್ಲಿ ಯುಕೆಯ ಮಿಸ್ ಅರ್ತ್ ಆಗಿ ಬಣ್ಣದ ಲೋಕಕ್ಕೆ ಹತ್ತಿರವಾಗಿದ್ದಾರೆ. ಅವರು ಯುಕೆಯ ಹಲವಾರು ಸಾಕ್ಷ್ಯಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.

ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್‌.ಎಮ್‌.ಕೃಷ್ಣ ಅವರು ಚಿತ್ರರಂಗಕ್ಕೆ ಹತ್ತಿರವಾಗಿದ್ದವರೇ ಆಗಿದ್ದರು.

ಸುಮಲತಾ ಮತ್ತು ನಿಖಿಲ್ ಸ್ಪರ್ಧೆಯಿಂದ ಇಡೀ ಚಿತ್ರರಂಗವೇ ಮಂಡ್ಯ ಕ್ಷೇತ್ರವನ್ನು ಆಕ್ರಮಿಸಿಕೊಂಡಿದೆ. ಸಾಲು ಸಾಲು ನಟ, ನಟಿಯರು ನೆತ್ತಿ ಸುಡುವ ರಣ ಬಿಸಿಲನ್ನು ಲೆಕ್ಕಿಸದೇ ಮಂಡ್ಯ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

Comments are closed.