ನವದೆಹಲಿ: ಕೇಂದ್ರ ಗದ್ದುಗೆ ಏರಲು ಸಾಕಷ್ಟು ತಯಾರಿ ಮಾಡಿಕೊಂಡಿರುವ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಲೋಕಸಭಾ ಚುನಾವಣಾದ ಭಾಗವಾಗಿ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ ತಮ್ಮ ಮುಂದಿನ ಗುರಿಯನ್ನು ಮತದಾರರ ಮುಂದಿಟ್ಟಿವೆ. ಉಭಯ ಪಕ್ಷಗಳು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಸಾಮ್ಯತೆಯಿರುವ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ.
ಬಿಜೆಪಿ ತನ್ನ ಪ್ರಣಾಳಿಕೆಯನ್ನು ಸೋಮವಾರವಾದ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಸಮ್ಮುಖದಲ್ಲಿ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಕೂಡ ಕಳೆದ ಬುಧವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಮುಖವಾದ ‘ನ್ಯಾಯ್’ ಯೋಜನೆಯನ್ನು ಕಾಂಗ್ರೆಸ್ ರೂಪಿಸಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಹಲವಾರು ಅಳತೆಗೋಲಿನ ಮೂಲಕ ದೇಶದ ವಿವಿಧ ವಲಯಗಳ ಜನರನ್ನು ಗಮನದಲ್ಲಿಟ್ಟುಕೊಂಡು ಭರವಸೆಗಳ ಮಹಾಪೂರವನ್ನೇ ಹೊಂದಿರುವ ಪ್ರಣಾಳಿಕೆಯನ್ನು ಹೊತ್ತುತಂದಿವೆ. ಉಭಯ ಪಕ್ಷಗಳ ಪ್ರಣಾಳಿಕೆಯನ್ನು ನೋಡಿದಾಗ ಪ್ರಮುಖ ಐದು ವ್ಯತ್ಯಾಸಗಳನ್ನು ಕಾಣಬಹುದಾಗಿದೆ.
1. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ಪ್ರತ್ಯೇಕವಾಗಿ ಕಿಸಾನ್ ಬಜೆಟ್ ಅನ್ನು ಪರಿಚಯಿಸುವುದಾಗಿ ಹೇಳಿದೆ. ಇತ್ತ ಬಿಜೆಪಿ 60 ವರ್ಷ ಮೇಲ್ಪಟ್ಟ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ಸೇವೆ ಒದಗಿಸುವುದಾಗಿ ಭರವಸೆ ನೀಡಿದ್ದು, 2020ರ ವೇಳೆಗೆ ರೈತರ ಆದಾಯವನ್ನು ದ್ವಿಗುಣ ಮಾಡುವ ಸಂಕಲ್ಪವನ್ನು ಮಾಡಿದೆ.
2. ಸೇನೆಗೆ ಕೊಟ್ಟಿರುವ ವಿಶೇಷ ಅಧಿಕಾರ ಕಾಯಿದೆಯನ್ನು ತಡೆದು ಮಾತುಕತೆ ಮೂಲಕ ಕಾಶ್ಮೀರದಲ್ಲಿ ಶಾಂತಿ ನಿರ್ವಹಣೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಇತ್ತ ಬಿಜೆಪಿ ಸಂವಿಧಾನ 370ನೇ ಮತ್ತು 35ಎ ವಿಧಿಯನ್ನು ವಜಾ ಮಾಡುವುದಾಗಿ ಪುನರುಚ್ಚರಿಸಿದೆ.
3. 2030ರ ವೇಳೆಗೆ ರಾಷ್ಟ್ರದಲ್ಲಿ ಬಡತನ ನಿರ್ಮೂಲನೆ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದು, ಇದಕ್ಕಾಗಿ ‘ನ್ಯಾಯ್’ ಹೆಸರಿನ ಯೋಜನೆಯನ್ನು ರೂಪಿಸಿದೆ. ಈ ಯೋಜನೆ ಅಡಿಯಲ್ಲಿ ಕನಿಷ್ಠ ಆದಾಯ ಹೊಂದಿರುವ ಜನರಿಗೆ ವರ್ಷಕ್ಕೆ 72,000 ರೂ. ನೀಡುವುದಾಗಿ ಘೋಷಿಸಿದೆ. ಇತ್ತ ಬಿಜೆಪಿ ಕೂಡ ಬಿಪಿಎಲ್ ಕುಟುಂಬಗಳ ಸಂಖ್ಯೆಯನ್ನು ಒಂದಂಕಿಗೆ ಕಡಿತಗೊಳಿಸುವುದಾಗಿ ತಿಳಿಸಿದೆ.
4. 2020ರ ಅಂತ್ಯಕ್ಕೆ ಸುಮಾರು 22 ಲಕ್ಷ ಉದ್ಯೋಗವನ್ನು ಸೃಷ್ಟಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದ್ದರೆ, ಬಿಜೆಪಿ ಕೂಡ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ್ದು, 22 ಪ್ರಮುಖ ವಲಯಗಳನ್ನು ಬಲಪಡಿಸುವುದಾಗಿ ಹೇಳಿದೆ.
5. ಕಾಂಗ್ರೆಸ್ ರಾಮ ಮಂದಿರ ಹಾಗೂ ತ್ರಿವಳಿ ತಲಾಕ್ ವಿಚಾರವಾಗಿ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಆದರೆ, ಬಿಜೆಪಿ ರಾಮ ಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಕಾದು ನೋಡುವುದಾಗಿ ತಿಳಿಸಿದ್ದು, ಮುಸ್ಲಿಂರಲ್ಲಿ ಸಂಪೂರ್ಣವಾಗಿ ತ್ರಿವಳಿ ತಲಾಕ್ ಅಭ್ಯಾಸವನ್ನು ನಿಲ್ಲಿಸುವ ಗುರಿಯ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
Comments are closed.