ಕರ್ನಾಟಕ

ಚುನಾವಣಾ ಸೋಲು-ಗೆಲುವಿನ ನಂತರ ಮುಂದಿನ ರಾಜಕೀಯ ತೀರ್ಮಾನ: ಸುಮಲತಾ

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳುವಾಗ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ; ಇದು ಮಂಡ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರ ಅಸಮಾಧಾನ ಹೆಚ್ಚಾಗಲು ಕಾರಣವಾಯಿತು ಎಂದು ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಜನರ ಭಾವನೆಗಳಿಗೆ ಬೆಲೆಕೊಟ್ಟು ರಾಜಕೀಯ ಪ್ರವೇಶಿಸಿದೆ. ರಾಜಕೀಯಕ್ಕೆ ಬರಬೇಕೆಂಬ ಉದ್ದೇಶ ಅಥವಾ ಮನಸ್ಥಿತಿ ನನಗೆ ಇರಲಿಲ್ಲ. ಮಂಡ್ಯ ಜನರ ಒತ್ತಾಯಕ್ಕೆ ಮಣಿದು ಚುನಾವಣೆ ಸ್ಪರ್ಧಿಸುವ ಅನಿವಾರ್ಯತೆ ನಿರ್ಮಾಣವಾಯಿತು” ಎಂದರು.
“ಅನ್ಯಾಯದ ವಿರುದ್ದ ಹೋರಾಟ ಮಾಡಬೇಕಾದರೆ ಪ್ರತಿಯೊಬ್ಬ ಮಹಿಳೆಯೂ ಕಾಳಿ ಆಗಬೇಕಾಗುತ್ತದೆ. ಅವರ ಬಗ್ಗೆ ಮಾತನಾಡಿದರೆ ಸಹಿಸಿಕೊಳ್ಳಬಹುದು, ಆದರೆ ಮಕ್ಕಳ ಬಗ್ಗೆ ಮಾತನಾಡಿದರೆ ಎಂತಹ ತಾಯಿಯದರೂ ರಕ್ಷಣೆಗಾಗಿ ಕಾಳಿಯಾಗಬೇಕಾಗುತ್ತದೆ. ಪ್ರತಿಯೊಬ್ಬ ಹೆಣ್ಣಿನಲ್ಲಿ ಕಾಳಿಯ ಗುಣಗಳಿರುತ್ತವೆ. ಸಂಕಷ್ಟ ಎದುರಾದಾಗ ಕಾಳಿಯಾಗುತ್ತಾಳೆಂದು ಸೂಚ್ಯವಾಗಿ ಹೇಳಿದರು.
ಕಬ್ಬಿನ‌ ಬೆಳೆಗಾರ ಸಮಸ್ಯೆ, ಹೈನುಗಾರರ ಸಮಸ್ಯೆ, ಮಹಿಳೆಯರು, ಯುವಕರ ನಿರುದ್ಯೋಗ, ಕುಡಿಯುವ ನೀರಿನ‌ ಸಮಸ್ಯೆ ಬಗ್ಗೆ ಚುನಾವಣೆಯಲ್ಲಿ ಚರ್ಚೆಯಾಗಬೇಕಿದೆ. ಕಾವೇರಿ ವಿಚಾರ, ರೈತರ ಸಮಸ್ಯೆ ಬಗ್ಗೆ ದನಿ ಎತ್ತಬೇಕಿದೆ. ಮಹಿಳೆಯರು ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದು ಸ್ಥಳೀಯವಾಗಿಯೇ ಗಾರ್ಮೆಂರ್ಟ್ಸ್ ,ಸ್ಟಾರ್ಟ್‌ ಅಪ್ ಗಳು ಸೇರಿದಂತೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ ಎಂದ ಸುಮಲತಾ, ತಮಗೆ ಏಳು ವರ್ಷ ವಯಸ್ಸಾಗಿದ್ದಾಗ ತಂದೆ ತೀರಿಕೊಂಡರು. ಐದು ಮಕ್ಕಳನ್ನು ಅವರ ತಾಯಿಯೇ ಸಾಕಿ ಸಲಹಿ, ವಿದ್ಯೆ ಕಲಿಸಿ, ಸಮಾಜದಲ್ಲಿ ಬದುಕುವ ಕಲೆಯನ್ನು ಕಲಿಸಿದರು ಎಂದರು. ಕೇವಲ ೧೦ನೇ ತರಗತಿವರೆಗೆ ಕಲಿಯಲು ಸಾಧ್ಯವಾಯಿತು. ಆದರೆ ಬದುಕು ಸಾಕಷ್ಟು ಕಲಿಸಿದೆ ಎಂದು ತಮ್ಮ ಬಾಲ್ಯದ ಕಷ್ಟದ ಜೀವನವನ್ನು ಸ್ಮರಿಸಿದರು..
ಇಡೀ ದೇಶದಲ್ಲಿ ಲೋಕಸಭಾ ಚುನಾವಣೆ ಕಾವೇರಿದ್ದರೂ ರಾಜ್ಯದ ಮಂಡ್ಯ ಕ್ಷೇತ್ರ ಹೆಚ್ಚು ಬಿಂಬಿತವಾಗುತ್ತಿದೆ. ಮಂಡ್ಯಕ್ಕೆ ತನ್ನದೇ ವೈಶಿಷ್ಟ್ಯವಿದೆ. ಭಾವನಾತ್ಮಕ ಜಿಲ್ಲೆ ವೈವಿಧ್ಯತೆಯಿಂದ ಕೂಡಿದೆ. ಇದೇ ಅಂಬರೀಶ್ ಅವರನ್ನು ಬೆಳೆಸಿದ್ದು, ಅಂಬಿ ತಮ್ಮ ವರ್ಚಸ್ಸನ್ನು ರಾಜಕೀಯವಾಗಿ ಬಳಸಿಕೊಂಡಿದ್ದರೆ ಮುಖ್ಯಮಂತ್ರಿ ಅಥವಾ ಅದಕ್ಕಿಂತ ಮೇಲ್ಪಟ್ಟ ಸ್ಥಾನಕ್ಕೆ ಏರಬಹುದಿತ್ತು. ಆದರೆ ಅವರು ತಮ್ಮ ಅಧಿಕಾರ, ವರ್ಚಸ್ಸನ್ನು ದುರುಪಯೋಗ ಮಾಡಿಕೊಳ್ಳಲಿಲ್ಲ. ಜನರ ಋಣ ತೀರಿಸಲು, ಅಂಬರೀಶ್ ಕನಸಿನ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ರಾಜಕೀಯಕ್ಕೆ ಧುಮುಕಲು ತೀರ್ಮಾನಿಸಿದ ಭಾವನಾತ್ಮಕ ಅಂಶಗಳನ್ನು ಸುಮಲತಾ ವಿವರಿಸಿದರು.
ಚುನಾವಣೆಗೆ ನಿಲ್ಲಬೇಕೇ ಬೇಡವೇ ಎಂಬ ಭಯದ ನಡುವೆಯೂ ಪ್ರಯೋಗಾತ್ಮಕವಾಗಿ ಹಳ್ಳಿ ಹಳ್ಳಿಗಳಿಗೆ ತೆರಳಿ ಜನರ ಬಳಿ ಹೋಗಿ ಅಭಿಪ್ರಾಯ ಪಡೆದು ಬಂದುದಾಗಿ ಅವರು ಹೇಳಿದರು. ಚುನವಾಣೆಗೆ ನಿಲ್ಲಬೇಡ ಅಂದರೆ ಹೇಗೆ? ಚುನಾವಣೆಗೆ ಸ್ಪರ್ಧಿಸಬೇಕು ಎಂದರೆ ಹೇಗೆ? ಎಂಬ ವಿಚಾರಗಳು ಚರ್ಚೆಗಳು ಬಂದವು, ಜನರ ಅಭಿಪ್ರಾಯಕ್ಕೆ ಹಾಗೂ ಒತ್ತಾಯಕ್ಕೆ ಮಣಿದು ಸ್ಪರ್ಧಿಸಲು ತೀರ್ಮಾನಿಸಿದೆ ಎಂದು ಸುಮಲತಾ ವಿವರಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯ ಮಾಡಿ ತಮ್ಮನ್ನು ರಾಜಕೀಯಕ್ಕೆ ಕರೆ ತಂದಿದ್ದರು. ಅಂಬರೀಶ್ ಅವರು ವಸತಿ‌ ಸಚಿವ ಖಾತೆ ಸಿಕ್ಕಾಗ ಖುಷಿ ಪಟ್ಟಿದ್ದರು. ಮಂಡ್ಯದ ಬಗ್ಗೆ ಸಾಕಷ್ಟು ಕನಸುಗಳಿದ್ದವು. ಅದನ್ನು ಈಡೇರಿಸಬೇಕಾಗಿದೆ. ಜಿಲ್ಲೆಯನ್ನು ಸಿಂಗಾಪುರ ಅಥವಾ ಅಮೆರಿಕಾ ಮಾಡುವುದಾಗಿ ಅಲ್ಲ, ಆದರೆ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಅವರು ಭರವಸೆ ನೀಡಿದರು. ಸ್ಥಳೀಯ ಮಟ್ಟದಲ್ಲಿ ಗುಡಿ ಕೈಗಾರಿಕೆ, ಕೃಷಿ ಉತ್ಸಾದನೆ ಪೂರಕ ಕೈಗಾರಿಕೆಗಳನ್ನು ಪ್ರಯತ್ನಿಸುವ ಮೂಲಕ ಗ್ರಾಮಗಳ ಸಬಲೀಕರಣ, ಮಹಿಳೆಯರು ಆರ್ಥಿಕ ಭದ್ರತೆ, ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕಿದೆ ಎಂದು ಅವರು ಹೇಳಿದರು.
ನಾಮಪತ್ರ ಸಲ್ಲಿಕೆ ಬಳಿಕ ಬಿಜೆಪಿ ಪಕ್ಷ ತಮಗೆ ಬೆಂಬಲ‌ ಸೂಚಿಸಿದೆ. ಯಾವುದೇ ಷರತ್ತು ವಿಧಿಸದೇ ಬೇಷರತ್ತು ಬೆಂಬಲ ನೀಡಿದೆ. ಮೈತ್ರಿ ಸರ್ಕಾರವನ್ನು ಎದುರು ಹಾಕಿಕೊಂಡು ಚುನಾವಣೆ ನಡೆಸಬೇಕಿದೆ. ಏಕಾಂಗಿಯಾಗಿ ಚುನಾವಣೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಬಿಜೆಪಿಯ ಬೆಂಬಲ ಕೋರಿದ್ದು ಬೇಸರತ್ ಬೆಂಬಲ ದೊರೆತಿದೆ. ಎಂದ ಸುಮಲತಾ ಬೆಂಬಲ ಸಿಕ್ಕ ಮಾತ್ರಕ್ಕೆ ಬಿಜೆಪಿ ಪಕ್ಷಕ್ಕೆ ಸೇರುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ಕರ್ನಾಟಕ ‌ರಾಜ್ಯ ರೈತ ಸಂಘ ತಮಗೆ ಬೆಂಬಲ ನೀಡಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ತಮ್ಮನ್ನು ಬೆಂಬಲಿಸಿದ್ದಾರೆ. ಅವರಿಗೆ ಪಕ್ಷದ ಗುರುತಿನ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್ ಪಕ್ಷದ ಧ್ವಜದೊಂದಿಗೆ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಅವರು ತಿಳಿಸಿದರು.
.
ಮೈತ್ರಿ ಸರ್ಕಾರದಿಂದ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಯಿಂದ ಇಂದಿನ ತನಕ ಏನೆಲ್ಲಾ ನಡೆದಿದೆ ಎಂಬುದನ್ನು ತಾವು ಗಮನಿಸಿದ್ದು ಇಡೀ ಸರ್ಕಾರ, ಮೂವರು ಸಚಿವರು,8 ಶಾಸಕರು, ಮುಖ್ಯಮಂತ್ರಿ ತಮ್ಮ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆ. ತಮ್ಮನ್ನು ಕಟ್ಟಿಹಾಕುವ ಎಲ್ಲಾ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು. ನಾಮಪತ್ರ ಸಲ್ಲಿಸುವ ತನಕ ವೈಯಕ್ತಿಕವಾಗಿ ಟೀಕೆ ಟಿಪ್ಪಣಿ ಮೂಲಕ ತಮ್ಮನ್ನು ಗುರಿಯಾಗಿಸಬಹುದು ಎಂಬ ಭಯವಿತ್ತು. ತಮಗೆ ಮತ್ತು ತಮ್ಮ ಮಗನಿಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಹುದು ಎಂಬ ಆತಂಕವೂ ಇತ್ತು. ಆದರೆ ಜನರ ಬೆಂಬಲ, ಆಶೀವಾರ್ದದಿಂದ ಪರಿಸ್ಥಿತಿ ಎದುರಿಸುವ ಧೈರ್ಯ ಬಂದಿದೆ ಎಂದರು
. .
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಎಸ್.ಯಡಿಯೂರಪ್ಪ ಅವರನ್ನು ಚುನಾವಣಾ ಪ್ರಚಾರಕ್ಕೆ ತಾವು ಕರೆದಿಲ್ಲ. ಹಾಗೆಯೇ ರಜನಿಕಾಂತ್ ಮತ್ತು ಚಿರಂಜೀವಿ ಅವರನ್ನು ಕರೆದಿಲ್ಲ ಎಂದರು. ಅಭಿಮಾನ ಮತಗಳಾಗಿ ಬದಲಾಗದು ಎಂಬ ಮಾತುಗಳು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಶ್ ಮತ್ತು ದರ್ಶನ್ ಅಭಿಮಾನಿಗಳ ಅಭಿಮಾನ ಮತಗಳಾಗಿ ಪರಿವರ್ತನೆ ಆಗಲಿವೆ ಎಂಬ ನಂಬಿಕೆಯಿಲ್ಲ. ಅಂಬರೀಶ್ ಅಭಿಮಾನವನ್ನು ಜನರು ರಾಜಕೀಯಕ್ಕಾಗಿ ಮತ್ತೊಬ್ಬರಿಗೆ ಬಿಟ್ಟುಕೊಡಲು ಸಿದ್ಧರಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ನಾಮಪತ್ರ ಸಲ್ಲಿಕೆಯಲ್ಲಿ ಆದ ಎಡವಟ್ಟುಗಳು, ಅಧಿಕಾರಿಗಳ ಮುಖ್ಯಮಂತ್ರಿ ಪರ ಕೆಲಸ ನಿರ್ವಹಣೆ, ಅಧಿಕಾರ ದುರ್ಬಳಕೆ ನಡೆಯುತ್ತಿರುವ ಸಾಕಷ್ಟು ದೂರುಗಳನ್ನು ಸಲ್ಲಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದರು.

ಅಂಬರೀಶ್ ಮೂರು ತಿಂಗಳು ಕೇಂದ್ರ ಸಚಿವರಾಗಿದ್ದಾಗ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಕಾವೇರಿ ವಿವಾದದಿಂದ ಮನನೊಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಂಸದರ ನಿಧಿಯನ್ನು ಸಾಮಾನ್ಯ ಕೆಲಸಕ್ಕೆ ಬಳಸಿದರು. ಸಮುದಾಯ ಭವನ, ಶಾಲಾ ಕಟ್ಟಡ, ಕೆರೆ ಹೂಳೆತ್ತುವುದು, ಕೆರೆ ತುಂಬಿಸಲು, ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದರು.
ರೈತರ ಸಾಲ ಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಮಂಡ್ಯದಲ್ಲಿ ಪ್ರವಾಸ ಕೈಗೊಂಡಾಗ ಜನರು ಸಾಲಮನ್ನಾ ಸೌಲಭ್ಯ ತಮಗೆ ಸಿಕ್ಕಿಲ್ಲ ಎಂದಿದ್ದಾರೆ. ಅಂತೆಯೇ ಸ್ತ್ರೀಶಕ್ತಿ ಸಂಘಗಳಿಗೆ ಸಹಾಯ ಧನ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದರು. ಇದುವರೆಗೂ ಅದು ಈಡೇರಿಲ್ಲ. ಜಿಲ್ಲೆಯ ಅಭಿವೃದ್ದಿಗೆ ಅನುದಾನ ನೀಡಿದ್ದಾರೆಯೇ ಅಥವಾ ಮಗನ ಚುನಾವಣೆ ಗೆಲ್ಲಿಸಲು ಫಂಡ್ ಮಾಡಿದ್ದಾರೆಯೇ ಎಂಬುದು ಸ್ಪಷ್ಟವಿಲ್ಲ. ಇದುವರೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ? ಎಷ್ಟು ಡಿಪಿಆರ್ ಆಗಿದೆ? ಎಷ್ಟು ಕಾಮಗಾರಿ ಆರಂಭವಾಗಿದೆ? ಎಷ್ಟು ಕಾಮಗಾರಿ ಪ್ರಗತಿಯಲ್ಲಿವೆ ಎಂಬುದರ ಮಾಹಿತಿ ನೀಡಿ ಎಂದು ಮುಖ್ಯಮಂತ್ರಿ ಹಾಗೂ ಜಿಲ್ಲಾ ಸಚಿವರಿಗೆ ಸುಮಲತಾ ಅಂಬರೀಶ್ ಸವಾಲೆಸದರು.
ಅಂಬರೀಶ್ ಬಳಿ ಸರ್ಕಾರದ ಹಣಕಾಸು ಇಲಾಖೆ ಕಾರ್ಯದರ್ಶಿ ಐ.ಎನ್.ಎಸ್. ಪ್ರಸಾದ್ ಭೇಟಿ ನೀಡಿದ ವೇಳೆ ಸಾಲಮನ್ನಾ ಮಾಡದಂತೆ ಮುಖ್ಯಮಂತ್ರಿಗೆ ತಿಳಿಸಲಾಗಿತ್ತು. ರಾಜ್ಯದ ಸರ್ಕಾರಿ‌ ಖಜಾನೆ ಖಾಲಿಯಾಗಿದೆ. ಸರ್ಕಾರಿ ನೌಕರರಿಗೆ ವೇತನ ಪಾವತಿಸಲು ಕಷ್ಟವಾಗಿರುವ ಸಂದರ್ಭದಲ್ಲಿ ಹಣ ಹೊಂದಿಸುವುದು ಕಷ್ಟ. ಸಾಲಮನ್ನಾ ಯೋಜನೆ ಚಿಂತನೆ ಕೈಬಿಡಿ ಎಂದು ಕುಮಾರಸ್ವಾಮಿಗೆ ತಿಳಿಸಿ ಎಂದು ಮನವಿ ಮಾಡಿದ್ದರು. ಆದರೆ ಅದೆಲ್ಲವನ್ನೂ ಬಹಿರಂಗಪಡಿಸಲಾಗುವುದಿಲ್ಲ. ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆ ಸಮರ್ಪಕ ಜಾರಿಯಾಗಿಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ಳು ಭರವಸೆ ನೀಡಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು,.
ಸುಮಲತಾ ವಿರುದ್ಧ ದೇವೇಗೌಡರು ಪ್ರಚಾರ ಮಾಡಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಅಂಬರೀಶ್ ಹಾಗೂ ತಮಗೂ ದೇವೇಗೌಡರು ತಂದೆ ಸ್ಥಾನದಲ್ಲಿದ್ದಾರೆ. ಹಿಂದೆ ಅಂಬರೀಶ್ ವಿರುದ್ಧ ಚುನಾವಣೆಯಲ್ಲಿ ಪ್ರಚಾರ ಮಾಡಿದರು. ಅಂಬಿ ಬಗ್ಗೆ ಅವರೆಲ್ಲೂ ಟೀಕೆ ಟಿಪ್ಪಣಿ ಮಾಡಿರಲಿಲ್ಲ. ಪ್ರಸಕ್ತ ಚುನಾವಣೆಯಲ್ಲಿಯೂ ಪ್ರಚಾರ ಮಾಡುತ್ತಾರೆ ಎಂಬುದು ಸಂಶಯ ಎಂದರು. ಪ್ರತಿಸ್ಪರ್ಧಿಯನ್ನು ಅಥವಾ ಸರ್ಕಾರವನ್ನು ಟೀಕಿಸದೆ ಚಾಕಚಕ್ಯತೆಯಿಂದ ನಡೆದುಕೊಳ್ಳುವುದು ನೈಪುಣ್ಯತೆ ಅಲ್ಲ ಎಂದು ಅವರು ಅಭಿಪ್ರಾಯಪಟ್ಟರು.

Comments are closed.