ಕರ್ನಾಟಕ

ಇಂದಿರಾ ಗಾಂಧಿಯನ್ನು ವಾಜಪೇಯಿ ದುರ್ಗೆ ಎಂದಿದ್ದರು: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ 1 ಲಕ್ಷ ಪಾಕ್‌ ಸೈನಿಕರನ್ನು ಸೆರೆಹಿಡಿದು, ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದರು. ಬಿಜೆಪಿಯವರೇ ಆದ ಅಟಲ್‌ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಹೊಗಳಿದ್ದರು. ಆದರೂ ಇದನ್ನು ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡಿಕೊಂಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗರ ಚುನಾವಣಾ ಪ್ರಚಾರದ ವಿಚಾರಗಳ ಬಗ್ಗೆ ಟೀಕಿಸಿದ್ದಾರೆ. ಈಶ್ವರಪ್ಪನವರು ಮುಸ್ಲಿಮರ ಮತ ಬಿಜೆಪಿಗೆ ಬೇಡವೇ ಬೇಡ ಎಂದಿದ್ದಾರೆ. ಮುಸ್ಲಿಮರಿಗೆ ಬಿಜೆಪಿಯ ಟಿಕೆಟ್‌ ಬೇಕಾದರೆ ತಮ್ಮ ಕಚೇರಿಯ ಕಸ ಗುಡಿಸಲಿ ಎಂದು ಇಡೀ ಮುಸ್ಲಿಮ್‌ ಸಮುದಾಯವನ್ನೇ ಅವಮಾನಿಸಿದ್ದಾರೆ. ಬಿಜೆಪಿಯವರು ತೋರಿಕೆಗಷ್ಟೇ ಸರ್ವ ಧರ್ಮವನ್ನು ಗೌರವಿಸುತ್ತಾರೆ. ಬಿಜೆಪಿಗರ ಮುಖವಾಡ ಹಿಂದೆ ಅಲ್ಪ ಸಂಖ್ಯಾತ ವಿರೋಧಿ ಕರಾಳ ಮುಖವಿದೆ ಎಂದು ಹರಿಹಾಯ್ದಿದ್ದಾರೆ.

ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪ ಇವರೆಲ್ಲರು ಹೆಸರಿಗೆ ಮಾತ್ರ ಚೌಕಿದಾರರು. ಯಾರು ದೇಶದ ಮೇಲಿನ ಅಭಿಮಾನದಿಂದ ಮೋದಿಯನ್ನು ವಿರೋಧಿಸುತ್ತಾರೋ, ಯಾರು ಪ್ರಜಾಪ್ರಭುತ್ವದ ಉಳಿವಿಗಾಗಿ ಮೋದಿಯನ್ನು ವಿರೋಧಿಸುತ್ತಾರೋ ಅವರು ನಿಜವಾದ ಚೌಕಿದಾರರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕುವವರು ನಿಜವಾದ ದೇಶದ್ರೋಹಿಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೋದ್ರಾ ಹತ್ಯಾಕಾಂಡದಲ್ಲಿನ ಸಾವಿರಾರು ಅಮಾಯಕರ ಸಾವಿಗೆ ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕಾರಣರಲ್ಲವೇ? ನಾನು ಮುಖ್ಯಮಂತ್ರಿಯಾಗಿ ಧರ್ಮ-ಜಾತಿಗಳ ಬೇಧವಿಲ್ಲದೆ ಅನ್ನಭಾಗ್ಯ, ವಿದ್ಯಾಸಿರಿ, ಮೈತ್ರಿ, ಮನಸ್ವಿನಿ, ಕೃಷಿಭಾಗ್ಯ, ಸಾಲಮನ್ನಾ, ಶೂಭಾಗ್ಯ ಯೋಜನೆ ನೀಡಿದ್ದೆ. ಹಾಗಾದರೆ ನಿಜವಾದ ‘ಸಬ್‌ ಕ ಸಾಥ್‌ ಸಬ್‌ ಕ ವಿಕಾಸ್‌’ ಯಾರದ್ದು ಎಂದು ಪ್ರಶ್ನಿಸಿದ್ದಾರೆ.

Comments are closed.