ಕರ್ನಾಟಕ

ಮಧು ಬಂಗಾರಪ್ಪ ಗೆದ್ದರೆ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ; ಶಿವಮೊಗ್ಗ ಜನತೆಗೆ ಕುಮಾರಸ್ವಾಮಿ ಭರವಸೆ

Pinterest LinkedIn Tumblr


ಶಿವಮೊಗ್ಗ: ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿದರೆ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು. ಇದರಿಂದಾಗಿ ಕಾಗೋಡು ತಿಮ್ಮಪ್ಪ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ. ಈ ಮೂಲಕ ಅರಣ್ಯಕಾಯ್ದೆ ಸೇರಿ ಮಲೆನಾಡಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಮಲೆನಾಡಿನ ಜನಕ್ಕೆ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಇಂದು ಬೃಹತ್​ ರೋಡ್​ ಶೋ ಮೂಲಕ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ನಾಮಪತ್ರ ಸಲ್ಲಿಕೆ ಬಳಿಕ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಅರಣ್ಯ ಕಾಯ್ದೆ ಪ್ರದೇಶದ ಜನರಿಗೆ ಒಕ್ಕಲು ಎಬ್ಬಿಸುವ ಕಾರ್ಯವನ್ನು ಮೋದಿ ಮಾಡುತ್ತಿದ್ದಾರೆ. ಇದರಿಂದಾಗಿ ಮಲೆನಾಡಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ನೀತಿ ವಿರುದ್ಧ ಹರಿಹಾಯ್ದರು.

ಈ ಬಾರಿ ಮಧು ಬಹುಮತದಿಂದ ಆಯ್ಕೆಯಾಗುವ ಆತ್ಮವಿಶ್ವಾಸವಿದೆ. ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳಿಂದ ಜನ ಆಶೀರ್ವದಿಸುತ್ತಾರೆ. ಬಜೆಟ್​​​ಗಿಂತಲೂ ದೊಡ್ಡ ಪ್ರಣಾಳಿಕೆ ಬೇಕಾಗಿಲ್ಲ. ಈ ನಮ್ಮ ಪ್ರಣಾಳಿಕೆಯಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆಂಬ ವಿಶ್ವಾಸವಿದೆ ಎಂದರು.

ಇದೇ ವೇಳೆ ಕೈ ಮುಖಂಡ ಆತ್ಮಾನಂದ ಮನೆ ಮೇಲೆ ಐಟಿ ದಾಳಿ ಕುರಿತು ಮಾತನಾಡಿದ ಸಿಎಂ, ಐಟಿ ಅಧಿಕಾರಿಗಳಿಗೆ ಕಾಂಗ್ರೆಸ್​-ಜೆಡಿಎಸ್​ ಮನೆಗಳು ಬಿಟ್ಟು ಬೇರೆಯವರ ಮನೆಗಳು ಕಾಣಲ್ಲ. ಕಾಂಗ್ರೆಸ್, ಜೆಡಿಎಸ್​​​​ನವರ ಮನೆಗಳ ಮೇಲೆ ಮಾತ್ರ ದಾಳಿಯಾಗುತ್ತದೆ. ಬಿಜೆಪಿ ನಾಯಕರ ಮನೆಗಳ ಮೇಲೆ ದಾಳಿ ಆಗುತ್ತಿಲ್ಲ. ಬಿಜೆಪಿಯವರೇನು ಭಿಕ್ಷೆ ಎತ್ತಿ ಚುನಾವಣೆ ಮಾಡ್ತಿದ್ದಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಬಿಎಸ್​ವೈ ಮಾಡದೇ ಇರುವಂತಹ ಕೆಲಸವನ್ನು ನಾನು, ಡಿಕೆಶಿ ಮಾಡುತ್ತಿದ್ದೇವೆ. ಶಿಕಾರಿಪುರದ ಶಿರಾಳಕೊಪ್ಪದಲ್ಕಿ ನೀರಾವರಿ ಯೋಜನೆ ತಂದಿದ್ದೇವೆ. ಶಿವಮೊಗ್ಗ ಜಿಲ್ಲೆಯ ಋಣ ತೀರಿಸುತ್ತೇವೆ ಎಂದರು.

ಡಿಕೆಶಿ-ಎಚ್​ಡಿಕೆ ಸಹಕಾರದಿಂದ ಗೆಲ್ಲುವ ಭರವಸೆ ಇದೆ

ಡಿಕೆಶಿ, ಎಚ್​ಡಿಕೆ ಸಹಕಾರದಿಂದ ಈ ಬಾರಿ ಗೆಲ್ಲುತ್ತೇನೆ. ದೇವೇಗೌಡರು, ಕಾಗೋಡು ತಿಮ್ಮಪ್ಪ ಅವರ ಆಶೀರ್ವಾದ ನನ್ನ ಮೇಲಿದೆ. ಬಂಗಾರಪ್ಪನವರ ಭಕ್ತನಾಗಿ ಸಚಿವ ಡಿ.ಕೆ.ಶಿವಕುಮಾರ್, ನನ್ನ ಸಹೋದರನಾಗಿ ಕುಮಾರಸ್ವಾಮಿ ಬಂದಿದ್ದಾರೆ. ಇಬ್ಬರ ಸಹಕಾರದಿಂದ ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ. ಶಿವಮೊಗ್ಗ ಜನತೆ ನನ್ನ ಭರವಸೆ ಹುಸಿ ಮಾಡುವುದಿಲ್ಲ. ಉಪಚುನಾವಣೆಯ ಕಾಲಮಿತಿ ಅರ್ಥಮಾಡಿಕೊಳ್ಳುವೆ. ಕಾಂಗ್ರೆಸ್ ಮಿತ್ರರ ವಿಶ್ವಾಸ ಪಡೆದು ಮುಂದೆ ಹೋಗುತ್ತೇನೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಗಮನ ಸೆಳೆದ ‘ಬಂಗಾರದ ಮನುಷ್ಯ’

ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್​ನಲ್ಲಿ ವಿಶೇಷ ಪೂಜೆ ನಡೆಸಿ ರೋಡ್​ ಶೋ ನಡೆಸಿದರು. ಈ ವೇಳೆ ಜನರನ್ನು ಆಕರ್ಷಿಸಿದ್ದು ಬಂಗಾರದ ಮನುಷ್ಯ. ಕಾಂಗ್ರೆಸ್​ ಅಭಿಮಾನಿಯೊಬ್ಬರು ಮೈ ತುಂಬಾ ಬಂಗಾರ ಹಾಕಿಕೊಂಡು ಮಧು ಅವರಿಗೆ ಬೆಂಬಲ ನೀಡಿದರು. ಮೈ ತುಂಬಾ ಬಂಗಾರ ಧರಿಸಿದ ಬಂಗಾರದ ಮನುಷ್ಯನ ಜೊತೆಗೆ ಜನರು ಕೂಡ ಸೆಲ್ಫಿಗಾಗಿ ಮುಗಿಬಿದ್ದರು.

Comments are closed.