ಕರ್ನಾಟಕ

ಉಪ್ಪಿಯ ಪ್ರಜಾಕೀಯ ಪಕ್ಷದ ಅಭ್ಯರ್ಥಿಯ ಆಸ್ತಿಮೌಲ್ಯ 13 ಸಾವಿರ..!!

Pinterest LinkedIn Tumblr


ರಾಯಚೂರು: ಚುನಾವಣೆ ಎಂದರೆ ಹಣದ ಸುರಿಮಳೆ ಎಂಬುದು ಎಲ್ಲರಿಗೂ ಗೊತ್ತಿರುವ ಓಪನ್ ಸೀಕ್ರೆಟ್. ರಾಜಕೀಯ ಪಕ್ಷ ಪ್ರತಿನಿಧಿಸುವ ಅಭ್ಯರ್ಥಿ ಚೆಲ್ಲುವ ಹಣ ಲಕ್ಷ, ಕೋಟಿ ಲೆಕ್ಕ. ಪಕ್ಷೇತರರೂ ಕೂಡ ದುಡ್ಡು ಚೆಲ್ಲುವುದರಲ್ಲಿ ಕಡಿಮೆ ಇರೋದಿಲ್ಲ. ಈ ಎಲ್ಲಾ ರಾಜಕಾರಣಿಗಳ ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ(ಯುಪಿಪಿ) ಅಭ್ಯರ್ಥಿಗಳು ಭಿನ್ನವಾಗಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಿರಂಜನ್ ನಾಯಕ ಅವರ ಬಳಿ ಇರುವ ಹಣ ಕೇವಲ 13 ಸಾವಿರ ಮಾತ್ರ. ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿ ಪ್ರಕಾರ ನಿರಂಜನ್ ನಾಯಕ ಅವರಲ್ಲಿ ಯಾವುದೇ ವಾಹನ ಇಲ್ಲ, ಸ್ಥಿರಾಸ್ತಿ ಇಲ್ಲ.

ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ನಿರಂಜನ್ ನಾಯಕ ಅವರು ಇನ್ನೂ ಅವಿವಾಹಿತ ಯುವಕನಾಗಿದ್ದ, ಮೈಸೂರಿನಲ್ಲಿ ಈಗಷ್ಟೇ ಎಲ್​ಎಲ್​ಬಿ ವ್ಯಾಸಂಗ ಮುಗಿಸಿದ್ದಾರೆ. ಇವರ ಬಳಿ ನಗದು ಹಣ ಇರುವುದು 10 ಸಾವಿರ ಮಾತ್ರ. ಮಾನ್ವಿ ಪಟ್ಟಣದಲ್ಲಿರುವ ಎಸ್​ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಅದರಲ್ಲಿ 2 ಸಾವಿರ ರೂ ಇದೆ. ಚುನಾವಣೆಗೆಂದೇ ಹೊಸದಾಗಿ ತೆರೆದ ಕೆನರಾ ಬ್ಯಾಂಕಿನ ಅಕೌಂಟ್​ನಲ್ಲಿ 1 ಸಾವಿರ ರೂ ಮಾತ್ರ ಇದೆ.

ರಿಯಲ್ ಸ್ಟಾರ್ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತರ ಪಕ್ಷದಿಂದ ಹೊರಬಂದ ನಂತರ ವರ್ಷದ ಹಿಂದೆ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದರು. ಈಗ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದಾರೆ. ಈಗಾಗಲೇ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ. ಅಪ್ಪಟ ಜನಸಾಮಾನ್ಯರನ್ನು ತಮ್ಮ ಪಕ್ಷ ಪ್ರತಿನಿಧಿಸುತ್ತದೆ ಎಂದು ಹೇಳಿಕೊಂಡಿದ್ದ ಉಪೇಂದ್ರ ಅವರು ಅದೇ ರೀತಿ ಸ್ಟಾರ್​ಡಮ್ ಇಲ್ಲದ, ಧನ ಸಿರಿತನ ಇಲ್ಲದ ಜನಸಾಮಾನ್ಯ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

Comments are closed.