
ಬೆಂಗಳೂರು: ಏಷ್ಯಾದ ಆಗ್ನೇಯ ಭಾಗದಲ್ಲಿರುವ ಬ್ರೂನಾಯ್ ದೇಶದಲ್ಲಿ ಹೊಸ ಕ್ರೂರ ಶಿಕ್ಷೆಗಳಿಗೆ ಅನುಮೋದನೆ ಸಿಕ್ಕಿದೆ. ಇಸ್ಲಾಮ್ ಧರ್ಮದ ಶರಿಯಾ ಆಧರಿಸಿ ಈ ಶಿಕ್ಷೆಗಳನ್ನ ಜಾರಿಗೊಳಿಸಲಾಗಿದೆ. ಅನೈತಿಕ ಸಂಬಂಧ, ಸಲಿಂಗರತಿ ಅಪರಾಧಿಗಳಿಗೆ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ಅನ್ವಯವಾಗುತ್ತದೆ. ಅತ್ಯಾಚಾರ, ಕಳ್ಳತನ ಅಪರಾಧಗಳಿಗೂ ಸಾವಿನ ಶಿಕ್ಷೆ ಇದೆ. ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡಿದರೂ ಮರಣದಂಡನೆ ಶಿಕ್ಷೆ ಇದೆ ಎಂದು ಎಎಫ್ಪಿ ವರದಿ ಮಾಡಿದೆ.
ರಾಜ ಸುಲ್ತಾನ್ ಹಸ್ಸನಾಲ್ ಬೋಲ್ಕಿಯಾ ಆಡಳಿತವಿರುವ ಬ್ರೂನಾಯ್ ದೇಶದಲ್ಲಿ 4-5 ಲಕ್ಷ ಜನಸಂಖ್ಯೆ ಇರಬಹುದು. ಇಸ್ಲಾಮ್ ರಾಷ್ಟ್ರವಾಗಿರುವ ಬ್ರೂನಾಯ್ನಲ್ಲಿ ಶರಿಯಾ ಕಟ್ಟುಪಾಡುಗಳನ್ನು ಮೊದಲ ಬಾರಿಗೆ ಜಾರಿ ತರಲಾಗಿದೆ. ಮಧ್ಯಪ್ರಾಚ್ಯ ಮುಸ್ಲಿಂ ರಾಷ್ಟ್ರಗಳಲ್ಲಿರುವ ಕೆಲ ಕಠಿಣ ಮತ್ತು ಕ್ರೂರ ಶಿಕ್ಷೆಗಳು ಈಗ ಬ್ರೂನಾಯ್ ದೇಶಕ್ಕೂ ವ್ಯಾಪಿಸಿದೆ.
ಬ್ರೂನಾಯ್ನಲ್ಲಿ ಈ ಕಾನೂನುಗಳು ಮೊದಲೇ ಜಾರಿಯಾಗಬೇಕಿತ್ತಾದರೂ ಅಂತಾರಾಷ್ಟ್ರೀಯ ಒತ್ತಡ ಹಾಗೂ ಮಾನವ ಹಕ್ಕು ಸಂಘಟನೆಗಳ ಒತ್ತಡದಿಂದಾಗಿ ವಿಳಂಬಗೊಂಡಿತ್ತು. ಮಲೇಷ್ಯಾ, ಇಂಡೋನೇಷ್ಯಾ ದೇಶದ ದ್ವೀಪಗಳ ಮಧ್ಯೆ ಬರುವ ಬ್ರೂನಾಯ್ನಲ್ಲಿ ಈಗ ಕಳ್ಳತನ ಅಪರಾಧಿಗಳಿಗೆ ಕೈ ಮತ್ತು ಕಾಲು ಕತ್ತರಿಸುವ ಶಿಕ್ಷೆಯೂ ಜಾರಿಗೆ ಬರಲಿದೆ.
ಇರಾನ್, ಪಾಕಿಸ್ತಾನದಂಥ ಕೆಲ ರಾಷ್ಟ್ರಗಳನ್ನ ಹೊರತುಪಡಿಸಿ ಬಹುತೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಶರಿಯಾ ಕಾನೂನು ಆಧರಿಸಿ ಇಂಥ ಕ್ರೂರ ಶಿಕ್ಷೆಗಳು ಜಾರಿಯಲ್ಲಿವೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮರಣದಂಡನೆ ಶಿಕ್ಷೆಯನ್ನು ನೇಣುಹಾಕುವ ಮೂಲಕ ನೆರವೇರಿಸಲಾಗುತ್ತದೆ.
ಕಳೆದ ಸಹಸ್ರಮಾನದ ಮಧ್ಯಭಾಗದಲ್ಲಿ ಬ್ರೂನಾಯ್ ದೇಶಕ್ಕೆ ಇಸ್ಲಾಂ ಧರ್ಮ ವ್ಯಾಪಿಸಿತು. ಅದಕ್ಕೂ ಮುನ್ನ ಆ ದೇಶವು ಬೌದ್ಧ ಮತ್ತು ಹಿಂದೂ ರಾಜರ ಆಳ್ವಿಕೆಗೆ ಒಳಗಾಗಿತ್ತು.
Comments are closed.