
ಬೆಂಗಳೂರು: ತುಮಕೂರಿನಿಂದ ರಾಧಿಕಾ ಕುಮಾರಸ್ವಾಮಿ ನಿಲ್ಲುತ್ತಾರೆ ಎಂದು ಭಾವಿಸಿದ್ದೆ. ಆದರೀಗ ದೇವೆಗೌಡರು ಬಂದುಬಿಟ್ಟರು. ಇಲ್ಲಿಯ ಜನತೆಯ ನಾಡಿಮಿಡಿತ ಅರಿತಿದ್ದೇನೆ. ಕಾಲಕ್ಕೆ ತಕ್ಕಂತೆ ಜನ ಯಾವ ನಿರ್ಣಯ ತೆಗೆದುಕೊಳ್ತಾರೆ ಅನ್ನೋದು ಬಹಳ ಚೆನ್ನಾಗಿ ಗೊತ್ತಿದೆ. ರಾಧಿಕಾ ಕುಮಾರಸ್ವಾಮಿ ತುಮಕೂರಿಗೆ ಬಂದುಬಿಡುತ್ತಾರೇ ಎಂದಿದ್ದೇ ತಪ್ಪಾಯ್ತು. ಈ ಕಾರಣಕ್ಕೆ ನನ್ನ ಮೇಲೆ ದೇವೇಗೌಡರಿಗೆ ಭಾರೀ ಕೋಪ ಎನ್ನುವ ಮೂಲಕ ಬಿಜೆಪಿ ಶಾಸಕ ಮಾಧು ಸ್ವಾಮಿ ಮತ್ತೆ ಜೆಡಿಎಸ್ ವರಿಷ್ಠರ ಕಾಲೆಳೆದಿದ್ದಾರೆ.
ಕರ್ನಾಟಕದಲ್ಲೀಗ ಕುಟುಂಬ ರಾಜಕಾರಣಕ್ಕೆ ಜೋರಾಗಿ ನಡೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ದೇವೇಗೌಡರು ಕೂಡ ತಮ್ಮ ಇಡೀ ಕುಟುಂಬವನ್ನು ರಾಜಕಾರಣಕ್ಕೆ ತಂದಿದ್ದಾರೆ. ಹಿಂದಿನಿಂದಲೂ ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಬಿಜೆಪಿಯಂತೂ ಪದೇ ಪದೇ ಜೆಡಿಎಸ್ನ ಕುಟುಂಬ ರಾಜಕಾರಣದ ಬಗ್ಗೆ ಜರಿದು ಮಾತನಾಡುತ್ತಿದೆ.
ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಇಡೀ ರಾಜ್ಯವನ್ನೇ ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತಿದೆ. ಅತ್ತ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ಇತ್ತ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಲಾಗಿದೆ. ಇನ್ನು ರಾಮನಗರದಲ್ಲಿ ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಮುಖ್ಯಮಂತ್ರಿ, ಮತ್ತೊಬ್ಬರು ಎಚ್.ಡಿ ರೇವಣ್ಣ ಮೈತ್ರಿ ಸರ್ಕಾರದ ಮಂತ್ರಿ. ದೇವೇಗೌಡರು ಹಾಲಿ ಹಾಸನ ಸಂಸದರು ಎಂದು ಬಿಜೆಪಿ ಟೀಕಿಸುತ್ತಲ್ಲೇ ಬಂದಿದೆ.
ಈ ಬೆನ್ನಲ್ಲೀಗ ಮತ್ತೆ ಬಿಜೆಪಿ ಶಾಸಕ ಮಾಧು ಸ್ವಾಮಿ ದೇವೇಗೌಡರನ್ನು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಟೀಕಿಸಿದ್ದು, ಇದೀಗ ವಿಡಿಯೋ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ತಮ್ಮ ಭಾಷಣದುದ್ದಕ್ಕೂ ದೇವೇಗೌಡರ ಕುಟಂಬದ ವಿರುದ್ಧ ಮಾಧು ಸ್ವಾಮಿ ಹರಿಹಾಯ್ದಿದ್ದಾರೆ.
ಈ ಹಿಂದೆಯೂ ಈ ರೀತಿಯ ಆರೋಪ ಕೇಳಿ ಬಂದಿತ್ತು. ಇದಕ್ಕೆ ಉತ್ತರಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು, ನಾವು ಕುಟುಂಬ ರಾಜಕಾರಣ ಮಾಡುತ್ತಿಲ್ಲ. ಮನೆಯವರು ರಾಜಕಾರಣಕ್ಕೆ ಬರೋದು ದೈವ ಇಚ್ಛೆ ಎಂದು ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧವೂ ವ್ಯಕ್ತವಾಗಿತ್ತು.
Comments are closed.