ಕರ್ನಾಟಕ

ಇವರ ವಯಸ್ಸು ನೂರು ದಾಟಿದರೂ ನಿಂತಿಲ್ಲ ಮತದಾನದ ಹುಮ್ಮಸ್ಸು

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ಮೊದಲ ಬಾರಿಗೆ ಮತ ಚಲಾಯಿಸುವ ಹುಮ್ಮಸ್ಸಿನಲ್ಲಿ ಲಕ್ಷಾಂತರ ಮಂದಿ ಇದ್ದಾರೆ. ಇನ್ನು, ಚುನಾವಣೆ ದಿನ ರಜೆ ಸಿಗುತ್ತದೆ ಎಂದು ಪ್ರವಾಸ ತೆರಳಲು ಪ್ಲ್ಯಾನ್​​ ಹಾಕಿಕೊಂಡವರು ಅದೆಷ್ಟು ಮಂದಿಯೋ. ಆದರೆ, ಇವರ ಮಧ್ಯೆ ವಯಸ್ಸು ನೂರು ದಾಟಿದರೂ ತಪ್ಪದೆ ಮತ ಚಲಾವಣೆ ಮಾಡಲು ಮುಂದಾಗಿರುವ ರಾಜ್ಯದ ಈ ಮೂವರು ಶತಾಯುಷಿಗಳು ಯುವಪೀಳಿಗೆಗೆ ಮಾದರಿ ಆಗಿದ್ದಾರೆ.

ಹೆಸರು ಪ್ರೊ. ಜಿ. ವೆಂಕಟಸುಬ್ಬಯ್ಯ. ನಿಘಂಟು ತಜ್ಞ. ಜಯನಗರದಲ್ಲಿ ವಾಸವಾಗಿರುವ ಇವರ ವಯಸ್ಸು 106! ಈ ಬಾರಿ ನಡೆಯುವ ಲೋಕಸಭಾ ಚುನಾವಣೆಗೆ ಅವರು ಮತ ಚಲಾವಣೆ ಮಾಡುತ್ತಿದ್ದಾರೆ. ಮೊದಲ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರ ಪೈಕಿ ವೆಂಕಟಸುಬ್ಬಯ್ಯ ಕೂಡ ಒಬ್ಬರು.

1951ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಾಗ ವೆಂಕಟಸುಬ್ಬಯ್ಯ ಅವರಿಗೆ 36 ವರ್ಷ ವಯಸ್ಸು. ಅದೇ ವರ್ಷ ನಡೆದ ಮೈಸೂರು ರಾಜ್ಯದ ವಿಧಾನಸಭಾ ಚುನಾವಣೆಗೂ ಇವರು ಮತದಾನ ಮಾಡಿದ್ದರು. ಅಚ್ಚರಿ ಎಂದರೆ, ಇವರು ಶಿಕ್ಷಕರ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೆ ಯಾವೊಂದು ಚುನಾವಣೆಯ ಮತದಾನದಿಂದ ಹೊರಗುಳಿದವರಲ್ಲ.

ಆರಂಭದಲ್ಲಿ ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿತ್ತು ಎಂಬುದನ್ನು ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್​ ಜೊತೆ ಹಂಚಿಕೊಂಡಿದ್ದಾರೆ ವೆಂಕಟಸುಬ್ಬಯ್ಯ. “ಈಗ ರಾಜಕಾರಣಿಗಳು ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿಕೊಳ್ಳುತ್ತಾರೆ. ಆದರೆ, ಅಂದು ಹಾಗಿರಲಿಲ್ಲ. ಗಾಂಧಿ ಬಜಾರ್​ನಲ್ಲಿ ನಿಂತು ಎರಡೂ ಪಕ್ಷದ ಅಭ್ಯರ್ಥಿಗಳು ಒಂದೇ ವಿಚಾರದ ಮೇಲೆ ಚರ್ಚೆ ನಡೆಸುತ್ತಿದ್ದರು. ಸರಿ ಯಾವುದು ತಪ್ಪು ಯಾವುದು ಎನ್ನುವುದರ ಮೇಲೆ ಚರ್ಚೆ ನಡೆಯುತ್ತಿತ್ತು,” ಎನ್ನುತ್ತಾರೆ ಅವರು.

ಇದು ಅವರು ಮತದಾನ ಮಾಡುತ್ತಿರುವ 17ನೇ ಲೋಕಸಭಾ ಚುನಾವಣೆ. ಮತದಾನ ಮಾಡುವುದು ಮಾತ್ರವಲ್ಲ, ನೆರೆಹೊರೆಯವರಿಗೂ ಮತದಾನ ಮಾಡುವಂತೆ ಅವರು ಪ್ರೇರೇಪಿಸುತ್ತಾರೆ.

ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದ ಶತಾಯುಷಿ ಸಾಲುಮರದ ತಿಮ್ಮಕ್ಕ ಕೂಡ ಪ್ರತಿಬಾರಿಯಂತೆ ಈ ಬಾರಿಯೂ ಮತ ಚಲಾಯಿಸಲಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್​ ಗ್ರಾಮದಲ್ಲಿ ಅವರು ಈ ಬಾರಿಯೂ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. “ತಿಮ್ಮಕ್ಕ ಪ್ರತಿ ಬಾರಿಯೂ ಮತ ಚಲಾಯಿಸಲಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಅವರು ಪೂಜೆ ನಿಮಿತ್ತ ಬೇಲೂರಿಗೆ ತೆರಳಿದ್ದರು. ಹುಲಿಕಲ್​ನಿಂದ ಬೇಲೂರು ಸುಮಾರು 200 ಕಿ.ಮೀ. ದೂರ ಇದೆ. ಆದಾಗ್ಯೂ ಅವರು ಇಷ್ಟು ದೂರ ಪ್ರಯಾಣ ಬೆಳೆಸಿ ಮತ ಚಲಾಯಿಸಿದ್ದಾರೆ,” ಎಂದು ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್​ಗೆ ಅವರ ಮಗ ಉಮೇಶ್​ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ನೂರನೇ ವಯಸ್ಸಿಗೆ ಕಾಲಿಟ್ಟ ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​. ದೊರೆಸ್ವಾಮಿ ಕೂಡ ಈ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದಾರೆ.

90 ವರ್ಷ ದಾಟಿದ 1.48 ಲಕ್ಷ ಮತದಾರರು ಕರ್ನಾಟಕದಲ್ಲಿದ್ದಾರೆ. ಇದರಲ್ಲಿ 5,579 ಮಂದಿ 100 ವರ್ಷ ದಾಟಿದ್ದಾರೆ. ನೂರು ವರ್ಷದ ದಾಟಿದವರ ಪೈಕಿ ಬಹುತೇಕರು ಮೈಸೂರು, ಬೆಳಗಾವಿ ಹಾಗೂ ತುಮಕೂರಿನಲ್ಲಿ ವಾಸವಾಗಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂಥವರಿಗೆ ಮತದಾನದ ವೇಳೆ ಮೊದಲ ಆದ್ಯತೆ ನೀಡಲಾಗುತ್ತದೆಯಂತೆ.

Comments are closed.