ಕರ್ನಾಟಕ

5 ವರ್ಷಗಳಲ್ಲಿ ಬಡತನ ಸಂಪೂರ್ಣ ನಿರ್ಮೂಲನೆ: ರಾಹುಲ್

Pinterest LinkedIn Tumblr


ಬೆಂಗಳೂರು: 2014ರ ಚುನಾವಣೆ ಮುನ್ನ ಮೋದಿ ಎಲ್ಲರ ಖಾತೆಗೆ 15 ಲಕ್ಷ ನೀಡುತ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡಿದರು. ಆದ್ರೆ ಕಾಂಗ್ರೆಸ್ ‘ನ್ಯಾಯ’ ಯೋಜನೆಯ ಮೂಲಕ ದೇಶದ ಶೇ.20 ಭಾಗವಿರುವ ಬಡವರಿಗೆ ವರ್ಷಕ್ಕೆ 72 ಸಾವಿರ ರೂ. ಹಣ ಹಾಕಲಿದೆ. ಈ ಯೋಜನೆಯಲ್ಲಿ 5 ಕೋಟಿ ಫಲಾನುಭವಿಗಳಿಗೆ ಸಿಗಲಿದೆ. ಮುಂದಿನ ಐದು ವರ್ಷಗಳಲ್ಲಿ ಬಡತನವನ್ನು ಸಂಪೂರ್ಣವಾಗಿ ಹೋಗಲಾಡಿಸುವ ಕೆಲಸವನ್ನು ನಾವು ಮತ್ತು ನಮ್ಮ ಯೋಜನೆಗಳು ಮಾಡಲಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ದೇಶದ ಬಡವರು, ಸಣ್ಣ ವ್ಯಾಪಾರಿಗಳಿಗೆ ಮತ್ತು ರೈತರಿಗಾಗಿ ಯಾವ ಯೋಜನೆಯನ್ನು ನೀಡಲಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೇವಲ 15 ಉದ್ಯಮಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ರಫೇಲ್ ಡೀಲ್ ಅನಿಲ್ ಅಂಬಾನಿ ನೀಡಲು ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ 30 ಸಾವಿರ ಕೋಟಿ ಹಣವನ್ನು ಅವರ ಜೇಬಿನಲ್ಲಿ ಹಾಕಿದರು. 15 ಉದ್ಯಮಿಗಳ ಮೂರುವರೆ ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು. ರೈತರ ಸಾಲಮನ್ನಾ ಮಾಡಲು ಹಣ ಇಲ್ಲವೆಂದು ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳುವ ಮೂಲಕ ಇಬ್ಬಗೆಯ ನೀತಿಯನ್ನು ಅನುಸರಿಸಲಾಗುತ್ತದೆ ಎಂದು ದೂರಿದರು..

ನೆಲಮಂಗಲ ಬಳಿ ಇರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಸಮಾವೇಶದಲ್ಲಿ ಕೈ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ವಿಶೇಷ ಮನವಿ ಮಾಡಿಕೊಂಡರು.

ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಭಾಷಣದ ಆರಂಭದಲ್ಲಿಯೇ ಎಲ್ಲರಲ್ಲಿ ಕ್ಷಮೆ ಕೇಳಿ ತಮ್ಮ ಮಾತನ್ನು ಆರಂಭಿಸಿದ ರಾಹುಲ್, ರಾಜ್ಯದಲ್ಲಿ ಸ್ಪರ್ಧೆ ಮಾಡಿರುವ ಎಲ್ಲ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಬೇಕು. ಅಂತೆಯೇ ಜೆಡಿಎಸ್ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ದೇಶದಲ್ಲಿ ಯಾವುದೇ ಹಣದ ಕೊರತೆ ಇಲ್ಲ. ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿ ಇಂತಹ ವ್ಯಕ್ತಿಗಳಿಗೆ ಹಣ ನೀಡಲು ಕೇಂದ್ರದ ಬಳಿ ಹಣವಿದೆ. ಆದ್ರೆ ದೇಶದ ರೈತರಿಗೆ, ಕೂಲಿಕಾರರಿಗೆ, ಶಿಕ್ಷಣ, ಆಸ್ಪತ್ರೆಯ ಅಭಿವೃದ್ಧಿಗಳಿಗೆ ಇವರ ಬಳಿ ಹಣ ಇಲ್ಲ ಟೀಕಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ರೈತರು ಮತ್ತು ಸಾಮಾನ್ಯ ವರ್ಗದ ಜನರ ಜೇಬಿನಿಂದ ಹಣ ತೆಗೆದು ದೆಹಲಿಯ ಬಿಜೆಪಿ ನಾಯಕರಿಗೆ 1800 ಕೋಟಿ ನೀಡುತ್ತಾರೆ. ಈ ಎಲ್ಲವನ್ನು ನೀವೆಲ್ಲರೂ ಗಮನಿಸಬೇಕಿದೆ. ಕಾಂಗ್ರೆಸ್ ಅಧಿಕಾರ ಬಂದ ಬಳಿಕ ರೈತರ ಖಾತೆಗೆ ಆರು ಸಾವಿರ ನೀಡಲು ಪಕ್ಷದಲ್ಲಿ ಚಿಂತನೆ ನಡೆಸಲಾಗಿದೆ ಎಂದರು.

ನೋಟುಗಳ ಅಮಾನ್ಯೀಕರಣ ಮಾಡುವ ಮೂಲಕ ದೇಶದ ಜನರ ಜೇಬಿನಿಂದ ಹಣ ತೆಗೆದುಕೊಂಡರು. ನೋಟ್ ಬ್ಯಾನ್ ನಿಂದ ಹೊರ ಉಳಿದವರಿಂದ ಹಣ ಪಡೆಯಲು ಗಬ್ಬರ್ ಸಿಂಗ್ ಟ್ಯಾಕ್ಸ್ ಜಾರಿಗೆ ತಂದರು. 2019ರಲ್ಲಿ ನಾವು ಅಧಿಕಾರಕ್ಕೆ ಹೊಸ ಸರಳವಾದ, ಅತ್ಯಂತ ಕಡಿಮೆ ತೆರಿಗೆ ನಿಯಮಗಳನ್ನು ಜಾರಿಗೆ ತರಲಿದ್ದೇವೆ. ಬ್ಯಾಂಕ್‍ನಲ್ಲಿದ್ದ ಬಹುತೇಕ ಹಣವನ್ನು ಮೋದಿ ತಮ್ಮ ಮಿತ್ರರಿಗೆ ನೀಡಿದರು. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಸೇರಿದಂತೆ ಅನೇಕ ಯೋಜನೆಗಳನ್ನು ತಂದರೂ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ದೇಶದ ಎಲ್ಲ ಬ್ಯಾಂಕ್‍ಗಳ ಕೀಲಿಯನ್ನು ತಮ್ಮ ಮಿತ್ರರಿಗೆ ನೀಡಿ ದೋಚಲು ಹೇಳಿದರು.

ಕರ್ನಾಟಕ ಭಾರತದ ನವೋದ್ಯಮದ ರಾಜಧಾನಿಯಾಗಿದ್ದು, ನವ ಉದ್ಯಮ ಸ್ಥಾಪನೆಯ ನಿಯಮಗಳನ್ನು ಸರಳೀಕರಣಗೊಳಿಸಲಾವುದು. ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ದೂರವಿಟ್ಟಿದ್ದೇವೆ. ಅಂತೆಯೇ ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments are closed.