ಹಾಸನ: ಹಾಸನ ಜಿಲ್ಲೆಯಲ್ಲಿ ವಂಶಪಾರಂಪರ್ಯವಾಗಿ ಆಡಳಿತ ಮುನ್ನಡೆಯುತ್ತಿದೆ. ಬ್ರಿಟಿಷರ ಆಡಳಿತದಂತೆ ಅಧಿಕಾರ ನಡೆಸುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಬೇಕಾಗಿದೆ ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಜನರಿಗೆ ಸ್ವಾತಂತ್ರ್ಯ ಸಿಗಬೇಕೆಂಬ ಉದ್ದೇಶದಿಂದ ನಾನು ಹಾಸನದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ದೇವೇಗೌಡರ ವಿರುದ್ದವೇ ನಾನು 4 ಲಕ್ಷದ 9 ಸಾವಿರ ಮತ ಪಡೆದಿದ್ದೇನೆ. ದೇವೇಗೌಡರು ಪ್ರಧಾನಿಯಾಗಿ, ಮಗ ಮುಖ್ಯಮಂತ್ರಿಯಾಗಿ, ಮತ್ತೊಬ್ಬ ಮಗ ಮಂತ್ರಿಯಾಗಿದ್ದಾರೆ. ಸೊಸೆ ಶಾಸಕಿಯಾಗಿದ್ದಾರೆ. ಇಷ್ಟೆಲ್ಲ ಆದರೂ ಜಿಲ್ಲೆಗೆ ಕನಿಷ್ಠ ನೀರು ಕೊಡಲೂ ಅವರಿಗೆ ಆಗಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರ ಶಾಶ್ವತ ಅಲ್ಲ. ಅಧಿಕಾರ ಸಿಕ್ಕಾಗ ಕೆಲಸ ಮಾಡಬೇಕು. ಆದರೆ, ಜೆಡಿಎಸ್ನವರು ಕೇವಲ ಮತ ಪಡೆಯಲು ಮಾತ್ರ ಜನರ ಬಳಿ ಬರುತ್ತಾರೆ. ಅಧಿಕಾರವೆಲ್ಲ ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಬೀಗರಿಗೆ ಸಿಗಬೇಕು. ಅವರ ಮೊಮ್ಮಕ್ಕಳಿಗೆ ಮಂಡ್ಯ ಮತ್ತು ಹಾಸನದಲ್ಲಿ ಟಿಕೆಟ್ ನೀಡುವ ಬದಲು ಯಾರಾದರೂ ಕಾರ್ಯಕರ್ತರಿಗೆ ನೀಡಬೇಕಾಗಿತ್ತು ಎಂದು ಹಾಸನದಕಾರ್ಯಕರ್ತರ ಸಭೆಯಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.
ನನಗೂ, ಪ್ರಜ್ವಲ್ಗೂ ಇರುವ ವ್ಯತ್ಯಾಸ ನೋಡಿ. ನಾನು ಆತನಿಗಿಂತ ಉತ್ತಮ ಎನಿಸಿದರೆ ಮಾತ್ರ ನನಗೆ ಮತ ಹಾಕಿ. ರಾಜಕೀಯವಾಗಿ ದೇವೇಗೌಡರ ಕುಟುಂಬದವರನ್ನು ತೆಗೆದರೆ ಎಲ್ಲ ಪಕ್ಷಗಳ ಕೆಳಹಂತದ ನಾಯಕರು ಉಳಿಯುತ್ತಾರೆ. ನಾನು ಸ್ಪರ್ಧಿಸದಂತೆ ಮಾಡಲು ದೊಡ್ಡ ದೊಡ್ಡವರಿಂದ ಒತ್ತಡ ಹಾಕಿಸಿದರು. ಎಂ.ಎಲ್.ಸಿ. ಮಾಡ್ತೀನಿ, ಬೆಂಗಳೂರು ಉತ್ತರದಲ್ಲಿ ಟಿಕೆಟ್ ಕೊಡ್ತೀನಿ ಅಂದರು. ಆದರೆ, ನಾನು ಒಪ್ಪಲಿಲ್ಲ. ಹಾಸನ ಜಿಲ್ಲೆಯ ಜನರ ಪರವಾಗಿ ಹೋರಾಟ ಮಾಡಲೆಂದೇ ಇಲ್ಲಿಂದ ಸ್ಪರ್ಧಿಸುತ್ತೇನೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಪತನವಾಗಲಿದೆ. ಬಿ.ಎಸ್.ಯಡಿಯೂಪ್ಪ ಸಿಎಂ ಆಗಲಿದ್ದಾರೆ ಎಂದು ಸರ್ಕಾರ ಪತನದ ಬಗ್ಗೆ ಎ. ಮಂಜು ಭವಿಷ್ಯ ನುಡಿದಿದ್ದಾರೆ.
Comments are closed.