ಬೆಂಗಳೂರು: ಮಂಡ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಅಕ್ಕಿ ಗಿರಣಿಗಳ ಮೇಲೆ ದಾಳಿ ಮಾಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ಕೂಡಲೇ ಮಧ್ಯ ಪ್ರವೇಶಿಸುವ ಅಗತ್ಯವಿದೆ ಎಂದೂ ಅವರು ಆಗ್ರಹಿಸಿದ್ದಾರೆ.
‘ಐಟಿ ಅಧಿಕಾರಿಗಳು ಮಂಡ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಅಕ್ಕಿ ಗಿರಣಿಗಳ ಮೇಲೆ ಬೆಳಗಿನ ಜಾವ 4 ಗಂಟೆವರೆಗೆ ದಾಳಿ ಮಾಡಿ ಅಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದಾರೆ. ರೈಲ್ವೆ ಅಧಿಕಾರಿಗಳ ಸೋಗಿನಲ್ಲಿ ಕಾರು ಕಾರು ಬಾಡಿಗೆ ಪಡೆದಿದ್ದಾರೆ. ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ತಂಗಿರುವ ಅಧಿಕಾರಿಗಳು ಕಾರ್ಯಕರ್ತರನ್ನು ಬೆದರಿಸಲು ಈ ತಂತ್ರ ಹೆಣೆದಿದ್ದಾರೆ. ಕೇಂದ್ರ ಸರ್ಕಾರದ ನೇರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ತಂತ್ರವನ್ನು ಬಲವಾಗಿ ಖಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನೆಲೆಯಲ್ಲಿ ಗುರುವಾರ ಇಲಾಖೆಯ ಕಚೇರಿ ಮುಂಭಾಗ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ಬೀದಿಗಿಳಿದು ಪ್ರತಿಭಟನೆ ಮಾಡಿದ್ದ ಕುಮಾರಸ್ವಾಮಿ ಅವರು ಅಧಿಕಾರಿಗಳ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದರು. ಶನಿವಾರವೂ ಅದನ್ನು ಟ್ವೀಟ್ ಮೂಲಕ ಮುಂದುವರೆಸಿದ್ದಾರೆ.
ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ತೆರಿಗೆ ಇಲಾಖೆ ಅಧಿಕಾರಿಗಳು ಇದೀಗ ಮಂಡ್ಯ, ಶಿವಮೊಗ್ಗ ಸೇರಿದಂತೆ ಹಲವೆಡೆ ಅಕ್ಕಿ ಗಿರಣಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಶನಿವಾರ ಭಾರೀ ಸುದ್ದಿಯಾಗಿದೆ. ‘ಜೆಡಿಎಸ್, ಕಾಂಗ್ರೆಸ್ ಬೆಂಬಲಿಸುವವರ ಅಕ್ಕಿ ಗಿರಣಿಗಳ ಮೇಲೆ ಐಟಿ ದಾಳಿ ನಡೆದಿದೆ, ದಾಳಿಯ ಬಳಿಕ ಅಕ್ಕಿ ಗಿರಣಿಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಹೋಗಿದ್ದಾರೆ’ ಎಂದು ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದು, ಈ ಸುದ್ದಿಗೆ ಬಲ ನೀಡಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲಿಕರ ಸಂಘ, ಯಾವುದೇ ಐಟಿ ದಾಳಿ ನಡೆದಿಲ್ಲ ಎಂದಿದ್ದಾರೆ.
‘ಮಂಡ್ಯದ ಯಾವುದೇ ರೈಸ್ ಮಿಲ್ ಮಾಲೀಕರ ಮನೆ ಅಥವಾ ರೈಸ್ ಮಿಲ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿಲ್ಲ. ಬೆಳಗ್ಗೆ ದಾಳಿ ಬಗ್ಗೆ ಮಾಹಿತಿ ಇತ್ತು. ಆದರೆ ರೈಸ್ ಮಿಲ್ ಮಾಲೀಕರು ಯಾರೂ ಈ ಕುರಿತು ಮಾಹಿತಿ ನೀಡಿಲ್ಲ. ಹಾಗಾಗಿ ಅಂಥ ವದಂತಿಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ’ ಎಂದು ಮಂಡ್ಯ ಜಿಲ್ಲಾ ರೈಸ್ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಅವರು ಸ್ಪಷ್ಟನೆ ನೀಡಿದ್ದಾರೆ.
Comments are closed.