
ಹಾಸನ: ಈ ಬಾರಿಯ ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಹಾಸನದ ಜೆಡಿಎಸ್ ಶಾಸಕರು, ಇದಕ್ಕಾಗಿ ಕಾಂಗ್ರೆಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ. ಈ ಸಂಬಂಧ ಅರಸೀಕೆರೆಯಲ್ಲಿಂದು ಕಾಂಗ್ರೆಸ್ನವರು ಆಯೋಜಿಸಿದ್ದ ಸಭೆಯಲ್ಲಿ ಸಚಿವ ಹೆಚ್.ಡಿ. ರೇವಣ್ಣ, ಸ್ಥಳೀಯ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮೊದಲಾದವರು ಕಾಂಗ್ರೆಸ್ಸಿಗರ ಬೆಂಬಲ ಕೋರಿದರು.
ಸಭೆಯ ಆರಂಭದಲ್ಲಿ ಕಾರ್ಯಕರ್ತರು-ಮುಖಂಡರಿಗೆ ಅಭಿಪ್ರಾಯ ಹೇಳಲು ಅವಕಾಶ ಮಾಡಿಕೊಡಲಾಗಿತ್ತು. ಅದರಂತೆ ಮಾತನಾಡಿದ ಕೆಲವರು, ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನ ಸೇರಿದಂತೆ ಎಲ್ಲೂ ನಮಗೆ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಭೆಯಲ್ಲೇ ಇದ್ದ ಗಂಗಾಧರ್ ಎಂಬಾತ, ಜೆಡಿಎಸ್ನಿಂದ ಕಾಂಗ್ರೆಸ್ಗೆ ಅನ್ಯಾಯವಾಗಿದೆ. ಅರಸೀಕೆರೆಯಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ. ಸಮ್ಮಿಶ್ರ ಸರಕಾರದಲ್ಲಿ ನಾವೂ ಪಾಲುದಾರರಾಗಿದ್ದರೂ, ನಮ್ಮವರಿಗೆ ಯಾವುದೇ ಕೆಲಸ-ಕಾರ್ಯ ಆಗುತ್ತಿಲ್ಲ.ಹೀಗಾಗಿ ಲೋಕಸಭೆ ಚುನಾವಣೆಯ್ಲಲಿ ಜೆಡಿಎಸ್ಗೆ ಮತ ಹಾಕೋದಿಲ್ಲ. ಬಿಜೆಪಿಗೆ ಹಾಕುತ್ತೇವೆ ಎಂದು ನೇರವಾಗಿಯೇ ಹೇಳಿದರು. ಇದಕ್ಕೆ ಕೆಲವರು ದನಿಗೂಡಿಸಿದ್ದರಿಂದ ಜಂಟಿ ಸಭೆಯಲ್ಲಿ ಗದ್ದಲ-ಗೊಂದಲ ಶುರುವಾಯಿತು. ಇದಾದ ಕೂಡಲೇ ಘೋಷಣೆ ಕೂಗಿದವರು ಸಭೆಯಿಂದ ದಿಢೀರ್ ಕಣ್ಮರೆಯಾಗಿದ್ದಲ್ಲದೇ, ಬಿಜೆಪಿಗೆ ಹೋಗೋದಾಗಿ ಹೇಳಿದರು.
ಈ ಬೆಳವಣಿಗೆ ನಂತರ ತೇಪೆ ಹಾಕುವ ಪ್ರಯತ್ನಕ್ಕೆ ಮುಂದಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಗದ್ದಲ ಎಬ್ಬಿಸಿದ ವ್ಯಕ್ತಿ ಹಿಂದೆ ಕಾಂಗ್ರೆಸ್ನಲ್ಲೇ ಇದ್ದು, ಈಗ ಬಿಜೆಪಿಗೆ ಹೋಗಿದ್ದಾರೆ. ಅವರ ಮಾತಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಒಟ್ಟಾಗಿ ಪ್ರಚಾರ ಮಾಡುವ ಮೂಲಕ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರನ್ನು ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಎಲ್ಲಾ ಘಟನಾವಳಿಗಳಿಗೆ ಸಾಕ್ಷಿಯಾದ ಸಚಿವ ರೇವಣ್ಣ, ಕೋಮುವಾದಿ ಶಕ್ತಿಯನ್ನು ದೂರ ಇಡುವ ಉದ್ದೇಶದಿಂದ ಎರಡೂ ಪಕ್ಷಗಳು ಒಂದಾಗಿವೆ. ನನ್ನಿಂದ ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಕ್ಷಮಿಸಿ ಬಿಡಿ, ಮೈತ್ರಿ ಧರ್ಮ ಪಾಲನೆಯಂತೆ ಲೋಕಸಭೆ ಚುನಾವಣೆ ಬಳಿಕ ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲಾ ಕಡೆ ಅಧಿಕಾರ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಿದ್ರಾಮಣ್ಣ ನಮ್ಮ ಪಕ್ಷದಲ್ಲಿದ್ದ ದಿನದಿಂದಲೂ, ಅವರು ನಮ್ಮ ನಾಯಕರು ಎಂದು ಸಿದ್ದರಾಮಯ್ಯ ಅವರ ಗುಣಗಾನ ಮಾಡಿದ ರೇವಣ್ಣ, ಜಿಲ್ಲೆಯ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ನಾವಿಬ್ಬರೂ ಶ್ರಮಿಸೋಣ. ಹಾಸನ ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲೂ ಎರಡೂ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
ಒಟ್ಟಿನಲ್ಲಿ ಎರಡೂ ಪಕ್ಷಗಳ ನಡುವೆ ಸಣ್ಣಪುಟ್ಟ ಅಸಮಾಧಾನ ಇರೋದು ಮೇಲಿಂದ ಮೇಲೆ ಬಹಿರಂಗವಾಗುತ್ತಿದ್ದರೂ ಅಲ್ಲಲ್ಲಿ ಥೇಪೆ ಹಾಕುವ ಕಾರ್ಯವೂ ನಡೆಯುತ್ತಿದೆ. ಇದೆಲ್ಲವೂ ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
Comments are closed.