ಮೈಸೂರು: ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬಾರದು. ಅವರೇನಾದರೂ ಪ್ರಧಾನಿಯಾದರೆ, ದೇಶದಲ್ಲಿ ಚುನಾವಣೆ ನಡೆಯುವುದಿಲ್ಲ. ಮೋದಿ ಒಂದು ರೀತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕ. 5 ವರ್ಷದಲ್ಲಿ ಮೋದಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಒಂದೇ ಒಂದು ದಿನ ಮಾಧ್ಯಮಗಳಿಗೆ ಮುಂದೆ ಬಂದು ಮಾತನಾಡಿಲ್ಲ. ಇಂತಹ ಪ್ರಧಾನಿಯನ್ನ ನಾನು ಎಂದೂ ನೋಡಿಲ್ಲ. ಮೋದಿ ಎಂತಹ ಕಿಲಾಡಿ ನೋಡಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಂವಿಧಾನವನ್ನ ಬದಲಾವಣೆ ಮಾಡಬೇಕು ಎಂದು ಅನಂತ್ ಕುಮಾರ್ ಹೆಗ್ಡೆ ಹೇಳುತ್ತಾರೆ. ಕೇಂದ್ರದ ಮಂತ್ರಿ ಈ ರೀತಿ ಹೇಳಿಕೆ ಕೊಡುತ್ತಾರೆ ಎಂದರೆ ಇದರ ಹಿಂದೆ ನರೇಂದ್ರ ಮೋದಿ, ಷಾ ಕುಮ್ಮಕ್ಕು ಇದೆ. ಈ ಕುಮ್ಮಕ್ಕಿನಿಂದ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಈ ರೀತಿಯ ಚಿಂತನೆ ಮಾರಕ. ಹಳೆದೆಲ್ಲವನ್ನು ಬಿಟ್ಟು ಈಗ ಚೌಕಿದಾರ್ ಅಂತ ಹೇಳುತ್ತಿದ್ದಾರೆ. ಇವರು ಅಂಬಾನಿ, ಅದಾನಿಗಳಿಗೆ ಚೌಕಿದಾರ್ ಆದರೆ, ಹೊರತು ಬಡವರಿಗಲ್ಲ ಎಂದು ಟೀಕಿಸಿದರು.
ಬಿಜೆಪಿಯನ್ನು ಸೋಲಿಸಲು ನಾವು ಹಳೆಯದನ್ನು ಮರೆತು ಒಂದಾಗಬೇಕಿದೆ. ಇದೊಂದೇ ನಮ್ಮ ಗುರಿ, ಬೇರೇನೂ ಅಲ್ಲ. ಅದಕ್ಕಾಗಿ ಮೊನ್ನೆದು, ನಿನ್ನೆದು, ಹಳೆಯದು ಎಲ್ಲ ಮರೆಯಬೇಕು ಎಂದು ಒಗ್ಗಟ್ಟಿನ ಮಂತ್ರ ಜಪಿಸಿದರು.
ಜೆಡಿಎಸ್ ಕಾಂಗ್ರೆಸ್ ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ಭಾರೀ ಎದುರಾಳಿಯಾಗಿ ಸ್ಪರ್ಧೆ ಮಾಡಿದ್ದೇವೆ. ಮೈತ್ರಿ ಪಕ್ಷದ ಶಾಸಕರು ಮುನಿಸು ತೊರೆದು ಅಭ್ಯರ್ಥಿಗಳ ಗೆಲುವಿಗೆ ಮುಂದಾಗಬೇಕು ಎಂದು ಐಕ್ಯತೆ ರಾಗ ಹಾಡಿದರು. ಆದರೆ, ಮೈಸೂರು ಕ್ಷೇತ್ರ ಕೈ ತಪ್ಪಿದ ಹಿನ್ನೆಲೆ ಮುನಿಸು ಮರೆಯದ ಜೆಡಿಎಸ್ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಗೈರಾಗುವ ಮೂಲಕ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಮೇಲುಗೈ ಸಾಧಿಸಿದರು.
ನಾನು ಕೂಡ ಪಕ್ಷದ ಸ್ಟಾರ್ ಪ್ರಚಾರಕ. ಚುನಾವಣೆಗಾಗಿ 28 ಕ್ಷೇತ್ರಗಳಲ್ಲಿ ನಾನು ಪ್ರವಾಸ ಮಾಡಿ, ಜೆಡಿಎಸ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದರು.
ಬಿಜೆಪಿಯಂತ ಕೋಮುವಾದಿ ಪಕ್ಷ ಹೋಗಲಾಡಿಸಲು ಎಲ್ಲ ಕಡೆ ಮಹಾಘಟ್ ಬಂಧನ್ ಹೆಸರಲ್ಲಿ ಸ್ಥಳೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿವೆ. ಅದೇ ರೀತಿ ಇದೀಗ ನಾವು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇವೆ. ಕ್ಷೇತ್ರದಲ್ಲಿ ನಾವು ಈಗ ಒಟ್ಟಾಗಿ ಸಾಮಾನ್ಯ ಅಭ್ಯರ್ಥಿಯನ್ನ ಎದುರಿಸಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ಮೈತ್ರಿ ನಾಯಕರಿಗೆ ಕರೆ ನೀಡಿದರು.
ಮೋದಿ ಒಬ್ಬ ಮಹಾನ್ ಸುಳ್ಳುಗಾರ. 40 ವರ್ಷದ ರಾಜಕೀಯದಲ್ಲಿ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನೆ ನೋಡಿಲ್ಲ. ಮೋದಿ ಹಾದಿಯಲ್ಲೆ ಆ ಪ್ರತಾಪ್‌ಸಿಂಹ ನಡೆಯುತ್ತಿದ್ದಾನೆ. ಅವರಂತೆ ಸುಳ್ಳು ಹೇಳುತ್ತಿದ್ದಾರೆ. ಪ್ರತಾಪ್‌ಸಿಂಹ ಒಂದು ಪುಸ್ತಕ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಆ ಪುಸ್ತಕದಲ್ಲಿರುವುದು ನಮ್ಮ ಯೋಜನೆಗಳು. ಹೆದ್ದಾರಿ, ಫ್ಲೈ ಓವರ್ ಮಾಡಿದ್ದು ನಾವು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಪ್ರತಾಪ್‌ಸಿಂಹ ಮಾತ್ರವಲ್ಲ, ಎಲ್ಲ ಬಿಜೆಪಿ ಸಂಸದರು ಇದೇ ರೀತಿ ಸುಳ್ಳು ಹೇಳಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿಯವರು ಕೇವಲ ಹಿಂದುತ್ವ, ಹನುಮಜಯಂತಿಯಲ್ಲಿ ಕಾಲಕಳೆದಿದ್ದಾರೆ. ನಾವೇನು ಹನುಮಜಯಂತಿ ಮಾಡೋಲ್ವಾ, ನಾವೇನು ಗೋ ಪೂಜೆ ಮಾಡೋಲ್ವಾ. ಗೋ ರಕ್ಷಕರಂತೆ ಬಿಂಬಿಸಿಕೊಳ್ಳುವ ಇವರೇನು ಸಗಣಿ ಎತ್ತಿದ್ದಾರಾ, ಹಾಲು ಕರೆದಿದ್ದಾರಾ, ಧನ ಮೇಯಿಸಿದ್ದಾರಾ ಎಂದು ಪ್ರಶ್ನಿಸಿದರು. ಅದೇಲ್ಲವನ್ನು ಮಾಡೋದು ನಾವು ಹೇಳೋದು ಮಾತ್ರ ಇವರು. ಮನುಷ್ಯತ್ವ ಇಲ್ಲದೆ ಇರೋದು ಧರ್ಮವೇ ಅಲ್ಲ ಎಂದರು.
Comments are closed.