ಕರ್ನಾಟಕ

ಐಟಿ ದಾಳಿ ವಿರುದ್ಧ ದೋಸ್ತಿ ನಾಯಕರ ವಾಗ್ದಾಳಿ; ಪ್ರತಿಭಟನೆ

Pinterest LinkedIn Tumblr

ಬೆಂಗಳೂರು:ಲೋಕಸಭಾ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಂತೆಯೇ ಸಚಿವರು ಹಾಗೂ ಅವರ ಬೆಂಬಲಿಗರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಆದಾಯ ತೆರಿಗೆ ಕಚೇರಿ ಮುಂದೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರ ಆದಾಯ ತೆರಿಗೆ ಇಲಾಖೆ ಮುಖ್ಯಸ್ಥರಾಗಿರುವ ಬಾಲಕೃಷ್ಣ ಅವರು ರಾಜಕೀಯ ಪಕ್ಷಗಳಂತೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸ್ವಾತಂತ್ರ್ಯ ಬಂದ ನಂತರ ಯಾವತ್ತೂ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಆಗಿರಲಿಲ್ಲ, ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೂಲೆ ಮಾಡುತ್ತಿದೆ ಎಂದು ಆರೋಪಿಸಿದರು.

ಪರಮೇಶ್ವರ್ ಮಾತನಾಡಿ, 72 ವರ್ಷ ದೇಶದಲ್ಲಿ ಪ್ರಜಾಪ್ರಭುತ್ವ ಬಹಳ ಅಚ್ಚುಕಟ್ಟಾಗಿ ನಡೆದುಕೊಂಡು ಬಂದಿದೆ. ಆದರೆ, ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಸಂಸ್ಥೆಗಳಾದ ಆದಾಯ ತೆರಿಗೆ ಇಲಾಖೆ, ಇಡಿ ಮೊದಲಾದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಜಕೀಯ ಕಾರಣದಿಂದ ಐಟಿ ದಾಳಿ ಮಾಡಲಾಗುತ್ತಿದೆ. ನಾವು ಸುಮ್ಮನೇ ಕೂರುತ್ತಿಲ್ಲ, ಚುನಾವಣಾ ಆಯೋಗ ಹಾಗೂ ಹೈಕೋರ್ಟ್ ಗೆ ದೂರು ನೀಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.

ಸಿದ್ದರಾಮಯ್ಯ ಮಾತನಾಡಿ, ರಾಜಕೀಯ ಕಾರಣಕ್ಕಾಗಿ ಐಟಿ ದಾಳಿ ಮಾಡಲಾಗುತ್ತಿದ್ದು, ಎಚ್ಚರಿಕೆ ಕೊಡಲಿಕೆ ಸಾಂಕೇತಿಕವಾಗಿ ಮೈತ್ರಿ ಪಕ್ಷಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ನರೇಂದ್ರ ಮೋದಿ ಅವರಿಗೆ ಸಂವಿಧಾನದಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬಿಜೆಪಿಯ ಅನೇಕ ಜನರ ಮೇಲೆ ಆರೋಪಗಳಿವೆ. ಆದರೆ, ಬಿಜೆಪಿ ನಾಯಕರ ಮೇಲೆ ದಾಳಿ ನಡೆಸದ ಆದಾಯ ತೆರಿಗೆ ಇಲಾಖೆ ಈಗ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯದಿಂದ ಇಡೀ ದೇಶದಲ್ಲಿ ಪ್ರತಿಪಕ್ಷಗಳ ನಾಯಕರ ನಿವಾಸಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಐಟಿ ದಾಳಿ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಅರುಣ್ ಜೇಟ್ಲಿ ಅವರ ಕೈವಾಡವಿದ್ದು, ಪ್ರತಿಪಕ್ಷ ನಾಯಕರನ್ನು ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ. ಇದನ್ನು ನಿಲ್ಲಿಸದಿದ್ದಲ್ಲಿ ಬಿಜೆಪಿಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವುದಲ್ಲದೇ, ಸಂವಿಧಾನ ವ್ಯವಸ್ಥೆಯನ್ನು ಬುಡ ಮೇಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Comments are closed.