ಕರ್ನಾಟಕ

ಡಿ.ಕೆ.ಸುರೇಶ್ ಆಸ್ತಿ 5 ವರ್ಷಗಳಲ್ಲಿ 338 ಕೋಟಿ ಏರಿಕೆ

Pinterest LinkedIn Tumblr


ರಾಮನಗರ: ಸಂಸದ ಡಿ.ಕೆ.ಸುರೇಶ್ ಅವರು 2014ರ ವೇಳೆ 85 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಆದರೆ ಈ ಬಾರಿ ಸಂಸದರ ಆಸ್ತಿ 338 ಕೋಟಿ ರೂ.ಗೆ ಏರಿಕೆಯಾಗಿದೆ.

ರಾಜ್ಯದಲ್ಲಿ ನಡೆಯುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಸಿರಿವಂತ ಕ್ಯಾಂಡಿಡೇಟ್ ಆಗಿದ್ದಾರೆ. ಡಿ.ಕೆ.ಸುರೇಶ್ ಅವರು 33.06 ಕೋಟಿ ರೂ. ಚರಾಸ್ತಿ, 305.59 ಕೋಟಿ ರೂ. ಸ್ಥಿರಾಸ್ತಿ ಸೇರಿದಂತೆ ಒಟ್ಟು 338.65 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಜೊತೆಗೆ 51.93 ಕೋಟಿ ರೂ. ಸಾಲ ಹಾಗೂ 250 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಸಂಸದರ ಬಳಿ ಇದೆ.

ಬೃಹತ್ ಮೆರವಣಿಗೆ ಮೂಲಕ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಸಂಸದ ಡಿ.ಕೆ.ಸುರೇಶ್ ಅವರು ಚುನಾವಣಾಧಿಕಾರಿಗಳಿಗೆ ವಿವಿಧ ದಾಖಲೆಗಳನ್ನು ನೀಡಿ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ಸಂಸದರಿಗೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಮುನಿರತ್ನ ಸಾಥ್ ನೀಡಿದರು.

ನಾಮಪತ್ರ ಸಲ್ಲಿಸಿದ ಬಳಿಕ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಂಸದರು, ಈ ಚುನಾವಣೆಯನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಕು. ಡಿ.ಕೆ.ಸುರೇಶ್ ಗೆಲ್ಲುತ್ತಾರೆ ಬಿಡು ಎಂದು ಸುಮ್ಮನೆ ಇರಬೇಡಿ. ಎಲ್ಲರೂ ಮತದಾನ ಮಾಡಿ ಅಧಿಕ ಮತಗಳಿಂದ ನನ್ನನ್ನು ಗೆಲ್ಲಿಸಿ. ರಾಮನಗರದ ಋಣವಿದೆ ಅಂತ ನಿಖಿಲ್ ಕುಮಾರಸ್ವಾಮಿ ಕ್ಷೇತ್ರಕ್ಕೆ ಬಂದು ನನಗೆ ಶಕ್ತಿ ತುಂಬಿದ್ದಾರೆ. ರಾಜ್ಯದಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿರುವುದು ಮಂಡ್ಯ ಲೋಕಸಭಾ ಕ್ಷೇತ್ರ. ನಿಖಿಲ್ ಕುಮಾರಸ್ವಾಮಿ ಗೆಲ್ಲಿಸುವ ಮೂಲಕ ಮುಖ್ಯಮಂತ್ರಿಗಳ ಕೈ ಬಲಪಡಿಸಿ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿಕೆ ಸುರೇಶ್ ವಿರುದ್ಧ ಬಿಜೆಪಿಯ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ ಅವರು ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಹೈಕಮಾಂಡ್ ನಿನ್ನೆ ರಾತ್ರಿ ಅಶ್ವಥ್ ನಾರಾಯಣ ಅವರ ಹೆಸರು ಪ್ರಕಟಗೊಳಿಸಿತ್ತು. ಬಿಜೆಪಿ ನಾಯಕರಾದ ಅಶೋಕ್, ಯೋಗೇಶ್ವರ್, ಕಟ್ಟಾ ಜೊತೆಯಲ್ಲಿ ಅಶ್ವಥ್ ನಾರಾಯಣ ಅವರು ನಾಮಪತ್ರ ಸಲ್ಲಿಸಿದರು.

Comments are closed.