ಕರ್ನಾಟಕ

ತೇಜಸ್ವಿ ಸೂರ್ಯ ಆಯ್ಕೆ ಹಿಂದೆ ಬಿಜೆಪಿಯ ಲೆಕ್ಕಾಚಾರವಾದರೂ ಏನು?

Pinterest LinkedIn Tumblr


ಬೆಂಗಳೂರು: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಹೊಸ ಮುಖ ತೇಜಸ್ವಿ ಸೂರ್ಯ​ಗೆ ಬಿಜೆಪಿ ಮಣೆ ಹಾಕಿದೆ. ಅನಂತ್​ಕುಮಾರ್​​ ಅವರು ಈ ಕ್ಷೇತ್ರವನ್ನು ಸತತವಾಗಿ ಆರು ಬಾರಿ ಪ್ರತಿನಿಧಿಸಿದ್ದರು. ಹಾಗಾಗಿ, ಅನಂತ್​ಕುಮಾರ್​ ಪತ್ನಿ ತೇಜಸ್ವಿನಿಗೆ ಇಲ್ಲಿ ಟಿಕೆಟ್​ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ, ಬಿಜೆಪಿಯ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ತೇಜಸ್ವಿನಿ ಸರ್ಕಾರಿಯೇತರ ಸಂಸ್ಥೆಯ ಕೆಲಸಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ರಾಜ್ಯ ನಾಯಕರು ತೇಜಸ್ವಿನಿ ಹೆಸರನ್ನು ಮಾತ್ರ ಶಿಫಾರಸು ಮಾಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಕೂಡ ಮುಕ್ತ ಮನಸ್ಸಿನಿಂದ ತೇಜಸ್ವಿನಿ ಬೆಂಬಲಕ್ಕೆ ನಿಂತಿದ್ದರು. ಹೀಗಾಗಿ, ರಾಜ್ಯ ಬಿಜೆಪಿ ನಾಯಕರ ಒಮ್ಮತದ ಮೇರೆಗೆ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್​ಕುಮಾರ್​ ಹೆಸರನ್ನು ಘೋಷಣೆ ಮಾಡುವುದು ಮಾತ್ರ ಬಾಕಿ ಉಳಿದಿತ್ತು.

ಆದರೆ, ಕಳೆದ ನಾಲ್ಕು ದಿನಗಳಿಂದ ಲೆಕ್ಕಾಚಾರ ಬದಲಾಗಿತ್ತು. ಬೆಂಗಳೂರು ದಕ್ಷಿಣದಿಂದ ನರೇಂದ್ರ ಮೋದಿ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರವೂ ಹರಿದಾಡಿ ತಣ್ಣಗಾಗಿತ್ತು. ಇದರಿಂದ ವಿರೋಧ ಪಕ್ಷಗಳ ನಾಯಕರಲ್ಲಿ ಆತಂಕವನ್ನು ತಂದಿಟ್ಟಿತ್ತು.

ಈ ಕ್ಷೇತ್ರಕ್ಕೆ ಯಾವ ನಾಯಕನನ್ನು ಆಯ್ಕೆ ಮಾಡಿದರೆ ಉತ್ತಮ ಎನ್ನುವ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಬಿಕೆ ಹರಿಪ್ರಸಾದ್​ ಅವರನ್ನು ಕಣಕ್ಕೆ ಇಳಿಸಿದೆ. 1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದ್ದ ಹರಿಪ್ರಸಾದ್​ ಅವರು ಅನಂತ್​ಕುಮಾರ್ ಅವರ ಎದುರು 65 ಸಾವಿರ ಮತಗಳಿಂದ ಸೋತಿದ್ದರು.

ಹಿಂದುತ್ವ ಹಾಗೂ ತಮ್ಮ ಮಾತಿನ ಮೂಲಕ ಗುರುತಿಸಿಕೊಂಡಿರುವ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್​ ನೀಡಿದ್ದು ಅನಂತ್​ಕುಮಾರ್​ ಬಣದವರಿಗೆ ಶಾಕ್​ ನೀಡಿದೆ. ಸೋಮವಾರ ಟ್ವೀಟ್​ ಮಾಡಿದ್ದ ತೇಜಸ್ವಿನಿ, “ದೇಶ ಮೊದಲು, ನಂತರ ಪಕ್ಷ, ಖಾಸಗಿ ಜೀವನಕ್ಕೆ ಕೊನೆಯ ಸ್ಥಾನ ನೀಡಬೇಕು,” ಎಂದು ಬರೆದಿದ್ದರು. ಬಹುಶಃ ಟಿಕೆಟ್​ ಕೈತಪ್ಪುತ್ತಿರುವ ವಿಚಾರದ ಬಗ್ಗೆ ಅವರಿಗೆ ಮೊದಲೇ ತಿಳಿದಿತ್ತು ಎನಿಸುತ್ತದೆ.

ಆದರೆ, ತೇಜಸ್ವಿ ಆಯ್ಕೆಗೆ ಬಿಜೆಪಿ ನಾಯಕರು ನೀಡುವ ಉತ್ತರವೇ ಬೇರೆ. ಜೆಡಿಎಸ್​ ಹಾಗೂ ಕಾಂಗ್ರೆಸ್​​ ನಡೆಸುತ್ತಿರುವ ಕುಟುಂಬ ರಾಜಕಾರಣವನ್ನು ಟಾರ್ಗೆಟ್​ ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ. “ತೇಜಸ್ವಿನಿ ಉತ್ತಮ ಅಭ್ಯರ್ಥಿ. ಆದರೆ, ಅವರು ಅನಂತ್​ಕುಮಾರ್ ಅವರ ಪತ್ನಿ. ತಾವೇ ಅನಂತ್​ಕುಮಾರ್​ ಅವರ ಕ್ಷೇತ್ರವನ್ನು ಪ್ರತಿನಿಧಿಸಬೇಕು ಎಂದುಕೊಂಡಿದ್ದರು. ಇದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಹೊಸ ಮುಖಕ್ಕೆ ಹೈಕಮಾಂಡ್ ಮಣೆ ಹಾಕಿದೆ” ಎಂಬುದು ಬಿಜೆಪಿ ನಾಯಕರ ಸಬೂಬು.

ವೃತ್ತಿಯಲ್ಲಿ ವಕೀಲರಾಗಿರುವ ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಕೂಡ ಹೌದು. ತಮ್ಮ ಹಿಂದುತ್ವ ವಾದದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ಮೋದಿ ಬಗ್ಗೆ ಅಪಸ್ವರ ಎತ್ತಿದವರ ವಿರುದ್ಧ ತೇಜಸ್ವಿ ತೊಡೆ ತಟ್ಟಿ ನಿಂತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು, ಬಿಎಸ್​ ಯಡಿಯೂರಪ್ಪ ಅವರಿಗೆ ಆಪ್ತರು. ಬಸವನಗುಡಿಯಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರವಿಸುಬ್ರಹ್ಮಣ್ಯ ಅವರ ಸೋದರ ಸಂಬಂಧಿ ಕೂಡ ಹೌದು.

ಬೆಂಗಳೂರು ದಕ್ಷಿಣ 1977ರಿಂದ ಕಾಂಗ್ರೆಸ್​ ತೆಕ್ಕೆಗೆ ಸರಿಯಾಗಿ ಸಿಕ್ಕಿಲ್ಲ. 1989ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿನ ಕೇಕೆ ಹಾಕಿದ್ದು ಬಿಟ್ಟರೆ, ಕಾಂಗ್ರೆಸ್​ಗೆ ಇಲ್ಲಿ ಗೆಲುವು ಸಾಧ್ಯವಾಗಲೇ ಇಲ್ಲ. ಮಾಜಿ ಮುಖ್ಯಮಂತ್ರಿ ಆರ್​. ಗುಂಡೂರಾವ್​ ಭಾರೀ ಅಂತರದಿಂದ ಗೆದ್ದಿದ್ದರು. 1991ರಿಂದಿ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ.

1977ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಬ್ರಾಹ್ಮಣ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತಿದೆ. ಇನ್​ಫೋಸಿಸ್​ನ ಸಹ ಸಂಸ್ಥಾಪಕ ಹಾಗೂ ಆಧಾರ್​ ಯೋಜನೆ ಆರಂಭಿಸಿದ ನಂದನ್​ ನಿಲೇಕಣಿ 2014ರಲ್ಲಿ ಅನಂತ್​ಕುಮಾರ್​ ವಿರುದ್ಧ ಸ್ಪರ್ಧಿಸಿ ಸೋಲಿನ ಕಹಿ ಉಂಡಿದ್ದರು.

ಈ ಬಾರಿಯೂ ಬಿಜೆಪಿ ಇಲ್ಲಿ ಗೆಲ್ಲಲಿದೆ ಎನ್ನುವುದಕ್ಕೆ ಅನುಮಾನ ಉಳಿದಿಲ್ಲ. ತೇಜಸ್ವಿ ಸೂರ್ಯ ಕೂಡ ಬ್ರಾಹ್ಮಣ ಕುಟುಂಬದಿಂದ ಬಂದವರು. ಈ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದ 10ನೇ ಬ್ರಾಹ್ಮಣ ಅಭ್ಯರ್ಥಿ ಎನ್ನುವ ಖ್ಯಾತಿಗೆ ತೇಜಸ್ವಿ ಪಾತ್ರರಾಗಲಿದ್ದಾರಾ? ಈ ಪ್ರಶ್ನೆಗೆ ಮೇ.23ರಂದು ಉತ್ತರ ಕಂಡುಕೊಳ್ಳಬೇಕು.

Comments are closed.