ಕರ್ನಾಟಕ

ದೇವೇಗೌಡ ನಾಮಪತ್ರ ಸಲ್ಲಿಕೆ; ತುಮಕೂರಿನಿಂದ ಸ್ಪರ್ಧಿಸಲು ಕೊಟ್ಟ ಕಾರಣ ಏನ್ ಗೊತ್ತಾ?

Pinterest LinkedIn Tumblr


ತುಮಕೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಇಂದು ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕ ಕೆ.ಕೆ.ಷಡಕ್ಷರಿ ಅವರೊಂದಿಗೆ ಮಧ್ಯಾಹ್ನ 2.11ಕ್ಕೆ ಸರಿಯಾಗಿ ತುಮಕೂರು ಜಿಲ್ಲಾ ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ದೇವೇಗೌಡರು ನಾಮಪತ್ರ ಸಲ್ಲಿಕೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 29 ವರ್ಷದಿಂದ ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ. ಆದ್ದರಿಂದ, ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೆ. ಹಾಸನ ಕ್ಷೇತ್ರವನ್ನು ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟೆ. ಫಾರೂಕ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ಗುಲಾಂ ನಬೀ ಆಜಾದ್ ಮುಂತಾದ ನಾಯಕರು ಸ್ಪರ್ಧಿಸುವಂತೆ ಒತ್ತಾಯಿಸಿದರು. ಹಾಲಿ ಸಂಸದರನ್ನು ಪಕ್ಕಕ್ಕಿಟ್ಟು ಸ್ಪರ್ಧಿಸುವುದು ಸೂಕ್ತವಲ್ಲ ಎಂಬುದು ನಂಗೆ ಗೊತ್ತಿದೆ. ಆದರೆ ಜಿ.ಪರಮೇಶ್ವರ್, ರಾಹುಲ್ ಗಾಂಧಿ ಅವರ ಒತ್ತಾಯಕ್ಕೆ ಮಣಿದು ಸ್ಪರ್ಧಿಸುತ್ತಿದ್ದೇನೆ ಎಂದು ದೇವೇಗೌಡರು ಹೇಳಿದರು.

ನಾನು ತುಮಕೂರಿಗೆ ಮಾತ್ರ ಸೀಮಿತವಲ್ಲ
ಮುಂದುವರೆದು ಮಾತನಾಡಿದ ಅವರು, ನಾನು ಯಾವ ವ್ಯಕ್ತಿಯ ಬಗ್ಗೆಯೂ ನಿಂದನೆ ಮಾಡಲು ಹೋಗಲ್ಲ. ಕೇವಲ ತುಮಕೂರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ಕಡೆಯೂ ಪ್ರಚಾರಕ್ಕೆ ಹೋಗುತ್ತೇನೆ. ಹೊರರಾಜ್ಯದಲ್ಲೂ ಪ್ರಚಾರಕ್ಕೆ ಬರಲು ಒತ್ತಾಯಿಸಿದ್ದಾರೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹ ಕರೆದಿದ್ದಾರೆ. ಹಾಗಾಗಿ ಎಲ್ಲೆಡೆ ನನ್ನ ಅಗತ್ಯತೆ ಇರುವೆಡೆ ಪ್ರಚಾರ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದರು.

ಬಿಜೆಪಿ ಕುಗ್ಗಿಸುವ ಶಕ್ತಿ ನಮಗಿದೆ
ರಾಜ್ಯದಲ್ಲಿ ಕಾಂಗ್ರೆಸ್ 20 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಜೆಡಿಎಸ್ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜಿ.ಪರಮೇಶ್ವರ್ ನೇತೃತ್ವದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಕುಗ್ಗಿಸುವ ಶಕ್ತಿ ನಮಗಿದೆ. ಚುನಾವಣಾ ಫಲಿತಾಂಶ ಬಂದ ಬಳಿಕ ಮೈತ್ರಿ ಪಕ್ಷಗಳ ಬೆಲೆ ಗೊತ್ತಾಗುತ್ತದೆ ಎಂದು ದೇವೇಗೌಡರು ಹೇಳಿದರು.

ಇದಕ್ಕೂ ಮುನ್ನ ತುಮಕೂರಿನ ಸರ್ಕಾರಿ ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ತೆರೆದ ವಾಹನದಲ್ಲಿ ದೇವೇಗೌಡರು ರೋಡ್​ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಜೈಕಾರ ಕೂಗಿದರು.

Comments are closed.