ಕರ್ನಾಟಕ

‘ನನ್ನ ಫೋನ್‌ ಟ್ಯಾಪ್‌ ಮಾಡಲಾಗಿದೆ; ಕುಮಾರಸ್ವಾಮಿ ವಿರುದ್ಧ ಸುಮಲತಾ ಆರೋಪ

Pinterest LinkedIn Tumblr


ಮಂಡ್ಯ: ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಎದುರಾಳಿ ಅಭ್ಯರ್ಥಿಯಾಗಿ ಭರ್ಜರಿ ಸವಾಲೊಡ್ಡುತ್ತಿರುವ ಸುಮಲತಾ ಅಂಬರೀಷ್‌ ಅವರ ಸ್ಪರ್ಧೆ ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭಾರೀ ತಲೆನೋವಾಗಿ ಪರಿಣಮಿಸಿರುವಂತೆ ತೋರುತ್ತಿದೆ. ಈ ಕಾರಣಕ್ಕಾಗಿ ಸುಮಲತಾ ಮತ್ತು ಅವರ ಬೆಂಬಲಿಗ ಪಡೆಯನ್ನು ತಡೆಯಲು ಕುಮಾರಸ್ವಾಮಿ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಸಂಶಯ ಇದೀಗ ಕಾಡಲಾರಂಭಿಸಿದೆ.

ಇದಕ್ಕೆ ಪುಷ್ಠಿ ನೀಡಿರುವುದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಮಾಡಿರುವ ಆರೋಪ. ಮುಖ್ಯಮಂತ್ರಿ ಅವರು ಮಂಡ್ಯ ಕ್ಷೇತ್ರದಲ್ಲಿ ಅಧಿಕಾರ ಯಂತ್ರದ ಸಂಪೂರ್ಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಮಲತಾ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ. ಅವರೇ ಹೇಳಿರುವಂತೆ ಅವರ ಮನೆಯ ದೂರವಾಣಿ ಕರೆಗಳನ್ನು ಟ್ಯಾಪ್ ಮಾಡಲಾಗಿದೆಯಂತೆ ಮಾತ್ರವಲ್ಲದೇ ಅವರ ಮನೆಯ ಸುತ್ತಮುತ್ತ ಗುಪ್ತಚರ ಇಲಾಖೆಯ ವ್ಯಕ್ತಿಗಳನ್ನು ನಿಯಮಿಸಿ ಸುಮಲತಾ ಅವರ ಪ್ರತೀ ಚಲನವಲನದ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆಯಂತೆ. ಈ ಕುರಿತಾಗಿ ಸುಮಲತಾ ಅಂಬರೀಷ್‌ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು ಈ ರೀತಿಯ ಬೆದರಿಕೆ ಮತ್ತು ಅಧಿಕಾರ ದುರುಪಯೋಗ ತಂತ್ರಗಳಿಂದ ನನ್ನನ್ನು ಮಣಿಸಬಹುದು ಎಂದು ಕುಮಾರಸ್ವಾಮಿ ಅವರು ಅಂದುಕೊಂಡಿದ್ದರೆ ಅದು ಅವರ ಭ್ರಮೆ ಎಂದು ಹೇಳಿದ್ದಾರೆ. ಮಾತ್ರವಲ್ಲದೇ ತಮ್ಮ ಬಗ್ಗೆ ಹಾಗೂ ದರ್ಶನ್‌ ಮತ್ತು ಯಶ್‌ ಕುರಿತಾಗಿ ಮುಖ್ಯಮಂತ್ರಿಯವರು ಮತ್ತು ಅವರ ಪಕ್ಷದ ಶಾಸಕರು ಮಾಡುತ್ತಿರುವ ಆರೋಪಗಳಿಗೆ ಮಂಡ್ಯ ಕ್ಷೇತ್ರದ ಮತದಾರರೇ ಸೂಕ್ತ ಉತ್ತರವನ್ನು ನೀಡಲಿದ್ದಾರೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Comments are closed.