ಕರ್ನಾಟಕ

ತನ್ನ ಪಾಲಿನ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಟ್ಟ ಜೆಡಿಎಸ್!

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಜೆಡಿಎಸ್​ ತನಗೆ 12 ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂದು ಪಟ್ಟುಹಿಡಿದಿತ್ತು. ನಂತರ 8 ಕ್ಷೇತ್ರಗಳು ಜೆಡಿಎಸ್​ ಪಾಲಾಗಿತ್ತು. ಆದರೀಗ, ತನ್ನ ಪಾಲಿನ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡುವ ಮೂಲಕ 7 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಬಿಜೆಪಿ ವಿರುದ್ಧ ಸೆಣಸಲು ಪ್ರಬಲ ಸ್ಪರ್ಧಿಗಳಿಲ್ಲದ ಕಾರಣ ತಮ್ಮ ಚಿಹ್ನೆಯಡಿ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್​ ಮುಂದಾಗಿತ್ತು. ಆದರೆ, ಕೆಲ ಕಾಂಗ್ರೆಸ್​ ನಾಯಕರು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಿ.ವಿ. ಸದಾನಂದ ಗೌಡ ಸ್ಪರ್ಧಿಸುವುದು ಪಕ್ಕಾ ಆಗಿರುವುದರಿಂದ ಅವರ ಎದುರಾಳಿಯಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್​ಗೆ ಸಾಧ್ಯವಾಗಿರಲಿಲ್ಲ. ಮೊದಲು ದೇವೇಗೌಡರೇ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ ಅವರು ತುಮಕೂರಿನಿಂದ ಸ್ಪರ್ಧಿಸಲು ನಿರ್ಧರಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕ ಬಿ.ಎಲ್​. ಶಂಕರ್​ ಅವರನ್ನು ತೆನೆ ಹೊತ್ತ ಮಹಿಳೆಯ ಚಿಹ್ನೆಯಡಿ ಅಖಾಡಕ್ಕೆ ಇಳಿಸಲು ದೇವೇಗೌಡರು ತಂತ್ರ ರೂಪಿಸಿದ್ದರು. ಆದರೆ, ಬಿ.ಎಲ್​. ಶಂಕರ್​ ತಾವು ಸ್ಪರ್ಧಿಸುವುದಾದರೆ ಕಾಂಗ್ರೆಸ್​ ಹೆಸರಿನಲ್ಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿತ್ತು. ಈ ಕಾರಣದಿಂದ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲಾಗಿದ್ದು, ಇಂದು ಅಥವಾ ನಾಳೆ ಬಿ.ಎಲ್​. ಶಂಕರ್​ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

ಈ ಮೊದಲು ಕೂಡ ಕಾಂಗ್ರೆಸ್​ ಬೆಂಗಳೂರು ಉತ್ತರ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಬೇಕೆಂದು ಜೆಡಿಎಸ್​ ಎದುರು ಬೇಡಿಕೆಯಿಟ್ಟಿತ್ತು. ಇದೀಗ ತಾನೇ ತಾನಾಗಿ ಆ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದರಿಂದ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ನಿನ್ನೆ ಮಧ್ಯರಾತ್ರಿ ಟ್ವೀಟ್​ ಮೂಲಕ ದೇವೇಗೌಡರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್​ ಕೂಡ ಟ್ವೀಟ್​ ಮಾಡಿದೆ.

Comments are closed.