ಕರ್ನಾಟಕ

ಬಳ್ಳಾರಿಯಲ್ಲಿ ಡಿಕೆಶಿಗೆ ಬಂಡಾಯ ಶಾಸಕ ನಾಗೇಂದ್ರ ತಲೆನೋವು!; ಜಾರಕಿಹೊಳಿ ಸಹೋದರರಿಂದ ಬಿಗ್ ಪ್ಲಾನ್!

Pinterest LinkedIn Tumblr


ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವೇನೋ ಸಾಧಿಸಿತ್ತು. ಆದರೆ ಇದೇ ಬಳ್ಳಾರಿಯಲ್ಲಿ ಸದ್ಯದ ಪರಿಸ್ಥಿತಿ ಭಿನ್ನವಾಗಿದೆ. ಹೆಜ್ಜೆ ಹಜ್ಜೆಗೂ ಅಸಮಾಧಾನ ಹೊಗೆಯಾಡುತ್ತಿದೆ. ಈ ಬಾರಿಯೂ ಚುನಾವಣಾ ನೇತೃತ್ವ ವಹಿಸಿರುವ ಡಿಕೆಶಿಗೆ ರೆಬೆಲ್ ಶಾಸಕ ನಾಗೇಂದ್ರ ತಲೆನೋವಾಗಿದ್ದಾರೆ. ನಾಗೇಂದ್ರ ಅವರು ಜೆಡಿಎಸ್-ಕಾಂಗ್ರೆಸ್ ಸಮಾವೇಶಕ್ಕೆ ಬಾರದೆ ಕೈಕೊಟ್ಟಿದ್ದಾರೆ. ಜಾರಕಿಹೊಳಿ ಸಹೋದರರ ಸಂಬಂಧಿಕರಿಗೆ ಬಿಜೆಪಿ ಟಿಕೆಟ್ ಕೊಡುವ ಮೂಲಕ ಡಿಕೆಶಿಗೆ ಬಳ್ಳಾರಿಯಲ್ಲಿ ಟಕ್ಕರ್ ಕೊಡಲು ಮುಂದಾಗಿದೆ. ಇದಕ್ಕೆ ನಾಗೇಂದ್ರ ಅವರ ಸಹಮತವೂ ಇದೆಯಂತೆ.

ಹೌದು. ಅಣ್ಣನಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ. ಆದರೆ ಟಿಕೆಟ್ ಸಿಗದೇ ಹೋದರೂ ಚಿಂತೆಯಿಲ್ಲ. ಬಿಜೆಪಿಗೆ ನಾಗೇಂದ್ರ ಸಹೋದರ ಬಂದಾಯ್ತು. ಇನ್ನೇನಿದ್ದರೂ ತಮ್ಮ ರಾಜಕೀಯ ನಡೆಗೆ ಅಡ್ಡಿಯಾಗಿರುವ ಎದುರಾಳಿಗೆ ಹೊಡೆತ ಕೊಡೋದೇ! ಇಂಥ ಮಾತುಗಳೇ ಕೈ ಶಾಸಕ ನಾಗೇಂದ್ರ ಪಾಳಯದಲ್ಲಿ ಕೇಳಿಬರುತ್ತಿದೆಯಂತೆ. ಇದಕ್ಕೆ ಜಾರಕಿಹೊಳಿ ಸಹೋದರರು ರಚಿಸಿರುವ ವ್ಯೂಹಕ್ಕೆ ಬಿಜೆಪಿ ಸಮರ್ಪಕವಾಗಿ ಸ್ಪಂದಿಸಿದರೆ, ಕೈ ಶಾಸಕ ನಾಗೇಂದ್ರ ಕೂಡ ಸಹಕಾರ ನೀಡುತ್ತಿದ್ದಾರಂತೆ. ಇದರ ಮೊದಲ ಪ್ರಯೋಗಾಸ್ತ್ರವಾಗಿ ಬಳ್ಳಾರಿಯ ಸಂಡೂರಿನಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ನಾಗೇಂದ್ರ ಗೈರು ಎದ್ದುಕಾಣುತ್ತಿತ್ತು. ಇದು ಸ್ವತಃ ಡಿಕೆಶಿವಕುಮಾರ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಕಾರಣಕ್ಕೆ ಎಲ್ಲವನ್ನೂ ನಾನು ಸರಿಪಡಿಸುತ್ತೇನೆ ಎನ್ನುವ ದಾಟಿಯಲ್ಲಿಯೇ ಸಮಾವೇಶದ ತಮ್ಮ ಭಾಷಣದಲ್ಲಿ ಮಾತನಾಡಿದ್ದು. ನಾಗೇಂದ್ರ ನಮ್ಮ ಹುಡುಗ, ತಪ್ಪು ಮಾಡೋದು ಸಹಜ. ನಾನೇ ಮಾತಾಡುತ್ತೇನೆ ಎಂದೇಳುತ್ತಲೇ, ಹೆಣ ಹೊರವವನೂ ನಾನೇ, ಪಲ್ಲಕ್ಕಿ ಹೊರುವವನೂ ನಾನೇ! ಎಂದು ಎಚ್ಚರಿಕೆ ನೀಡಿದ್ದರು.

ಅಸಲಿಗೆ ಬಳ್ಳಾರಿ ಲೋಕಸಭೆ ಬಿಜೆಪಿ ಟಿಕೆಟ್​ಗೆ ನಾಗೇಂದ್ರ ಹಿರಿಯಣ್ಣ ವೆಂಕಟೇಶ್ ಪ್ರಸಾದ್ ಹೆಸರೂ ಪ್ರಬಲವಾಗಿ ಕೇಳಿಬಂದಿತ್ತು. ದೆಹಲಿಗೆ ಕಳುಹಿಸಿದ ಪಟ್ಟಿಯಲ್ಲಿ ದೇವೇಂದ್ರಪ್ಪ ಜೊತೆ ಪ್ರಸಾದ್ ಅವರ ಹೆಸರೂ ಇತ್ತು. ಆದರೆ ಯಾವಾಗ ಜಾರಕಿಹೊಳಿ ಸಂಬಂಧಿಕ ದೇವೇಂದ್ರಪ್ಪನಿಗೆ ಟಿಕೆಟ್ ಸಿಕ್ಕಿತೋ ಹೆಚ್ಚಿನ ಪ್ರಯತ್ನ ಮಾಡದೆ ಜಾರಕಿಹೊಳಿ ಸಹೋದರರಿಗೆ ಅನಿವಾರ್ಯವಾಗಿ ಬೆಂಬಲ ನೀಡಲು ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕೆ ಮಾಧ್ಯಮಗಳಿಗೆ ಎಲ್ಲೂ ಪ್ರತಿಕ್ರಿಯೆ ನೀಡದೆ ತಮ್ಮ ಕಾರ್ಯಕರ್ತರಿಗೆ ಸಂದೇಶ ರವಾನೆ ಮಾಡುತ್ತಿದ್ದಾರೆ. ಮೇಲಾಗಿ ರಮೇಶ್ ಜಾರಕಿಹೊಳಿ ಅವರನ್ನೇ ಬೆಂಬಲಿಸಿಕೊಂಡು ಬಂದ ನಾಗೇಂದ್ರನಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ತಮ್ಮನಿಗೆ ಕೈ ಟಿಕೆಟ್ ಕೂಡ ಸಿಗಲಿಲ್ಲ. ಈ ಕಾರಣಕ್ಕೆ ಕಾಂಗ್ರೆಸ್​ನಲ್ಲಿದ್ದುಕೊಂಡೇ ರೆಬೆಲ್ ಆಗಿ ಪಕ್ಷಕ್ಕೆ ಡ್ಯಾಮೇಜ್ ತರುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಾರಿ ಡಿಕೆಶಿ ಬಳ್ಳಾರಿಯಲ್ಲಿ ಹೆಣ ಹೊರೋದೇ ಕೆಲಸ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಹೊತ್ತಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.

ಸಮಾವೇಶದಲ್ಲಿ ನಾಗೇಂದ್ರ ಮಾತ್ರವಲ್ಲದೆ ಮೂವರು ಶಾಸಕರು, ಇಬ್ಬರು ಹಿರಿಯ ಮುಖಂಡರಾದ ಕೊಂಡಯ್ಯ ಹಾಗೂ ಅಲ್ಲಂ ವೀರಭದ್ರಪ್ಪ ಅವರೂ ಗೈರಾಗಿದ್ದರು.

ಕಳೆದ ಉಪ ಚುನಾವಣೆಯಲ್ಲಿದ್ದ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ಸಾರ್ವತ್ರಿಕ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರವೊಂದಕ್ಕೇ ಡಿಕೆಶಿ ಗಮನ ಕೊಡುವುದು ಕಷ್ಟವಾಗಿದೆ. ಈ ಕಾರಣಕ್ಕೆ ಎದುರಾಳಿ ಬಿಜೆಪಿ ಪಕ್ಷಕ್ಕಿಂತ ಹೆಚ್ಚಾಗಿ ತಮ್ಮ ಪಕ್ಷದಲ್ಲಿಯೇ ಬೀಳುವ ಒಳಗಿನ ಪೆಟ್ಟು ಅರಗಿಸಿಕೊಂಡು ಬಂಡೆಗಲ್ಲಿನಂತೆ ನಿಂತು ಈ ಬಾರಿಯೂ ಡಿಕೆಶಿ ಬಳ್ಳಾರಿ ಗೆಲ್ಲಿಸಿಕೊಂಡು ಬರ್ತಾರಾ ಅನ್ನೋದು ಸದ್ಯದ ಕುತೂಹಲ!

Comments are closed.