ಕರ್ನಾಟಕ

ಧಾರವಾಡ ಕಟ್ಟಡ ಕುಸಿತ ದುರಂತ: ಸಾವಿನ ಸಂಖ್ಯೆ 7ಕ್ಕೇರಿಕೆ

Pinterest LinkedIn Tumblr


ಹುಬ್ಬಳ್ಳಿ-ಧಾರವಾಡ: ನಿನ್ನೆ ಮಂಗಳವಾರ ಸಂಭವಿಸಿದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿತದ ಪ್ರಕರಣದಲ್ಲಿ ಸಾವಿನ ಸಂಖ್ಯೆ 7ಕ್ಕೇರಿದೆ. ಇವತ್ತು 5 ಮೃತದೇಹಗಳನ್ನ ಹೊರತೆಗೆಯಲಾಗಿದೆ. ಎನ್​ಡಿಆರ್​ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಸ್ಥಳೀಯರು ಹಾಗೂ ಕೆಲ ಸಂಘಟನೆಗಳ ಜನರೂ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 60 ಮಂದಿಯ ರಕ್ಷಣೆಯಾಗಿದೆ. ಅವಶೇಷಗಳಡಿ ಇನ್ನೂ 25 ಮಂದಿ ಸಿಲುಕಿರುವ ಸಾಧ್ಯತೆ ಇದೆ. ನೆಲಮಹಡಿಯಲ್ಲಿ ನಾಲ್ಕು ಮಂದಿಯ ಧ್ವನಿ ಕೇಳಿಬರುತ್ತಿದೆ. ಹೀಗಾಗಿ, ಬಹಳ ಸೂಕ್ಷ್ಮವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ.

ಮೃತಪಟ್ಟವರಲ್ಲಿ ಹುಬ್ಬಳ್ಳಿ ನಿವಾಸಿ ಸಲೀಮ್ ಮಕಾಂದರ್(35), ಕುಮಾರೇಶ್ವರ ನಗರದ ನಿವಾಸಿ ಅಸ್ಲಮ್ ಶೇಖ್(50), ಕೆಐಎಡಿಬಿ ಲೇಔಟ್ ನಿವಾಸಿಗಳಾದ ಮಹೇಶ್ವರಯ್ಯ ಹಿರೇಮಠ ಮತ್ತು ಅವರ ಮತ ಆಶಿತ್ ಹಿರೇಮಠ ಸೇರಿದ್ದಾರೆ.

ಗಾಯಾಳುಗಳನ್ನ ಹುಬ್ಬಳ್ಳಿಯ ಕಿಮ್ಸ್, ಎಸ್​ಡಿಎಂ ಹಾಗೂ ಜಿಲ್ಲಾಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ವೇಳೆ, ಪೊಲೀಸ್ ಆಯುಕ್ತರು ಸ್ಥಾಪಿಸಿರುವ ಸಹಾಯ ಕೇಂದ್ರದಲ್ಲಿ 12 ಜನರು ಕಾಣೆಯಾಗಿರುವ ಬಗ್ಗೆ ದೂರುಗಳು ದಾಖಲಾಗಿವೆ. ಇವರು ಅವಶೇಷಗಳಡಿ ಸಿಲುಕಿರಬಹುದೆಂದು ಶಂಕಿಸಿ ದೂರು ನೀಡಲಾಗಿದೆ.

ತಾಂತ್ರಿಕ ಅಡಚಣೆಯಿಂದಾಗಿ ದೊಡ್ಡ ಯಂತ್ರಗಳ ಬಳಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಂದಗತಿಯಲ್ಲೇ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿರುವ ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್. ರೆಡ್ಡಿ ಅವರು, ದಯವಿಟ್ಟು ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇವತ್ತು ಬೆಳಗ್ಗೆ ಭಾರತೀಯ ವಾಯು ಪಡೆಯ ವಿಮಾನಗಳಿಂದ ಎನ್​ಡಿಆರ್​ಎಫ್ ಸಿಬ್ಬಂದಿಯನ್ನು ಧಾರವಾಡಕ್ಕೆ ಕರೆತರಲಾಯಿತು. ಅತ್ಯಾಧುನಿಕ ವಿಎಲ್​ಸಿ(ವಿಕ್ಟಿಮ್ ಲೊಕೇಟಿಂಗ್) ತಂತ್ರಜ್ಞಾನದ ಕ್ಯಾಮೆರಾ ಬಳಸಿ ಹಲವು ಸಂತ್ರಸ್ತರನ್ನು ಪತ್ತೆ ಹಚ್ಚಿ, ಕೆಲವರ ರಕ್ಷಣೆಯನ್ನೂ ಮಾಡಲಾಗಿದೆ. ಅವಶೇಷಗಳಡಿ ರಂದ್ರ ಕೊರೆದು ಎಲ್​ಇಡಿ ಕ್ಯಾಮೆರಾ ಒಳಬಿಟ್ಟು ಲೈವ್ ಡಿಟೆಕ್ಟರ್ ಮಾಹಿತಿ ಆಧರಿಸಿ ರಕ್ಷಣೆಗೆ ಪ್ರಯತ್ನ ಮಾಡಲಾಗುತ್ತಿದೆ. ಹಾಗೆಯೇ, ಜೆಸಿಬಿ ಯಂತ್ರಗಳೂ ಕೂಡ ಅವಶೇಷಗಳ ತೆರವಿಗೆ ಪ್ರತ್ಯೇಕ ಮಾರ್ಗ ಮಾಡುತ್ತಿವೆ.

ಕಟ್ಟಡದ ನಕ್ಷೆಯ ಆಧಾರದ ಮೇಲೆ ವಿಕ್ಟಿಮ್ ಡಿಟೆಕ್ಷನ್ ಯಂತ್ರದ ಸಹಾಯದಿಂದ ಅವಶೇಷಗಳಡಿ ಸಿಲುಕಿದವರ ಪತ್ತೆ ಕಾರ್ಯ ನಡೆಸುತ್ತಿದ್ದೇವೆ. ಕಟ್ಟಡದ ಮೂಲೆ ಮೂಲೆಯನ್ನೂ ಪರಿಶೀಲಿಸಲಾಗುತ್ತಿದೆ. ಅವಶ್ಯಕತೆ ಇರುವ ಕಡೆಗಳಲ್ಲಿ ಸುರಂಗ ಕೊರೆಯಲಾಗುತ್ತಿದೆ. ಜೀವಂತವಾಗಿರುವವರನ್ನು ಗುರುತಿಸಿ ಅವರನ್ನ ಹೊರಗೆ ತರುವುದು ಮೊದಲ ಆದ್ಯತೆಯಾಗಿದೆ. ಬದುಕಿರುವವರಿಗೆ ಕುಡಿಯುವ ನೀರು, ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಸಂಪೂರ್ಣ ಕಟ್ಟಡ ತೆರವು ಮಾಡುವವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎನ್​ಡಿಆರ್​ಎಫ್ ದಳದ ಮುಖ್ಯಸ್ಥ ಕುಲದೀಪ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಕಟ್ಟಡ ದುರಂತ ಸ್ಥಳಕ್ಕೆ ಜೆಡಿಎಸ್ ಎಂಎಲ್​ಸಿ ಬಸವರಾಜ್ ಹೊರಟ್ಟಿ ಅವರು ಭೇಟಿ ನೀಡಿ ರಕ್ಷಣಾ ಕಾರ್ಯಗಳನ್ನ ವೀಕ್ಷಿಸಿದರು. ಕಟ್ಟಡ ಕಟ್ಟುವಾಗ ನಿಯಮಗಳು ಉಲ್ಲಂಘನೆಯಾದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆಯೇ ಕ್ರಮ ಕೈಗೊಳ್ಳಬೇಕು. ಘಟನೆಯಾಗಿ ಒಂದು ವಾರದವರೆಗೆ ಮಾತ್ರ ಮಾತನಾಡಿ ಸುಮ್ಮನಾಗಿಬಿಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮವೇ ಆಗುವುದಿಲ್ಲ. ಇದು ಬದಲಾಗಬೇಕು ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.

ಧಾರವಾಡದ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ವಿ. ದೇಶಪಾಂಡೆ ಹಾಗೂ ಸಚಿವ ಸಿ.ಎಸ್. ಶಿವಳ್ಳಿ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಹಣ್ಣು ವಿತರಿಸಿ ಧೈರ್ಯದ ಮಾತುಗಳನ್ನ ಹೇಳಿದರು. ಕಟ್ಟಡ ದುರಂತ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಘಟನೆಯ ಪಾರದರ್ಶಕ ತನಿಖೆಗೆ ಆದೇಶ ಮಾಡಲಾಗುವುದು ಎಂದು ಕಂದಾಯ ಸಚಿವರೂ ಆಗಿರುವ ಆರ್.ವಿ. ದೇಶಪಾಂಡೆ ಭರವಸೆ ನೀಡಿದರು.

ಇದೇ ವೇಳೆ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಅವರು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಪ್ರಕರಣದ ಸಾಕ್ಷ್ಯನಾಶ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರಕಾರವು ಕೂಡಲೇ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನ ವಶಕ್ಕೆ ಪಡೆದುಕೊಳ್ಳಬೇಕ ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

Comments are closed.