ರಾಷ್ಟ್ರೀಯ

ಸಂಜೋತಾ ಪ್ರಕರಣ: ಹಿಂದೂ ಭಯೋತ್ಪಾದಕರ ರಕ್ಷಣೆಯಾಗುತ್ತಿದೆ ಎಂದು ಪಾಕ್ ಕೆಂಗಣ್ಣು, ಪ್ರತಿಭಟನೆ

Pinterest LinkedIn Tumblr


ನವದೆಹಲಿ: ಸಂಜೋತಾ ಎಕ್ಸ್​ಪ್ರೆಸ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆಯಿಂದಾಗಿ ಇವತ್ತು ನಾಲ್ವರು ಆರೋಪಿಗಳು ಖುಲಾಸೆಗೊಂಡ ಬೆಳವಣಿಗೆಯ ಬಗ್ಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ಸರಕಾರ ಹಿಂದೂ ಭಯೋತ್ಪಾದಕರನ್ನು ರಕ್ಷಿಸಿ ಕುಮ್ಮಕ್ಕು ಕೊಡುತ್ತಿದೆ ಎಂದು ಆರೋಪಿಸಿದೆ. ಈ ಸಂಬಂಧ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಯನ್ನು ಕರೆದು ತನ್ನ ತಗಾದೆ ವ್ಯಕ್ತಪಡಿಸಿದೆ.

“44 ಅಮಾಯಕ ಪಾಕಿಸ್ತಾನೀಯರು ಬಲಿಯಾದ ಈ ಘೋರ ಭಯೋತ್ಪಾದನೆ ಕೃತ್ಯದಲ್ಲಿ ಆರೋಪಿಗಳನ್ನು ಬಚಾವ್ ಮಾಡುವ ಪ್ರಯತ್ನಗಳು ನಡೆದೇ ಇದ್ದವು. ಈ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗುತ್ತಿಲ್ಲವೆಂದು ಪಾಕಿಸ್ತಾನ ಸತತವಾಗಿ ಧ್ವನಿ ಎತ್ತುತ್ತಲೇ ಇತ್ತು” ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅವರು ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾ ಅವರಲ್ಲಿ ತಿಳಿಸಿದರು.

ಆದರೆ, ಪಾಕಿಸ್ತಾನದ ಆರೋಪ ಮತ್ತು ಆತಂಕಗಳನ್ನು ಭಾರತೀಯ ರಾಯಭಾರಿ ನೀಗಿಸುವ ಪ್ರಯತ್ನ ಮಾಡಿದರು. ಈ ಪ್ರಕರಣದಲ್ಲಿ ಭಾರತೀಯ ನ್ಯಾಯಾಲಯವು ಪಾರದರ್ಶಕವಾಗಿಯೇ ವಿಚಾರಣೆ ನಡೆಸಿದೆ. ಕಾನೂನು ಪ್ರಕಾರವಾಗಿಯೇ ಎಲ್ಲವನ್ನೂ ನಡೆಸಲಾಗಿದೆ. ಪ್ರಕರಣದಲ್ಲಿ ಸಾಕ್ಷಿಗಳನ್ನ ಕರೆಸುವುದರಿಂದ ಹಿಡಿದು ಅನೇಕ ವಿಚಾರಗಳಲ್ಲಿ ಪಾಕಿಸ್ತಾನೀ ಸರಕಾರದಿಂದ ಸರಿಯಾದ ಸಹಕಾರ ಸಿಗಲಿಲ್ಲ ಎಂದು ಅಜಯ್ ಬಿಸಾರಿಯಾ ಸ್ಪಷ್ಟಪಡಿಸಿದರು. ಇದರ ಜೊತೆಗೆ, 2009ರ ಮುಂಬೈ ಉಗ್ರ ದಾಳಿ ಹಾಗೂ ಪಠಾಣ್ ಕೋಟ್​ನ ವಾಯುನೆಲೆಯಲ್ಲಿ ಸಂಭವಿಸಿದ ಉಗ್ರ ದಾಳಿ ಪ್ರಕರಣಗಳಲ್ಲಿ ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭಾರತೀಯ ರಾಯಭಾರಿಯು ಪಾಕ್ ವಿರುದ್ಧ ಪ್ರತ್ಯಾರೋಪ ಮಾಡಿದರು.

ಏನಿದು ಸಂಜೋತಾ ಬಾಂಬ್ ಸ್ಫೋಟ ಪ್ರಕರಣ?

2007ರಲ್ಲಿ ಪಾಕಿಸ್ತಾನಕ್ಕೆ ಹೋಗುತ್ತಿದ್ದ ಸಂಜೋತಾ ಎಕ್ಸ್​ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟವಾಗಿ 68 ಜನರು ಬಲಿಯಾಗಿದ್ದರು. ಸತ್ತವರಲ್ಲಿ ಬಹುತೇಕರು ಪಾಕಿಸ್ತಾನೀಯರೇ ಆಗಿದ್ದರು. ಈ ಪ್ರಕರಣದಲ್ಲಿ ಹಿಂದೂ ಬಲಪಂಥೀಯ ಸಂಘಟನೆಯ ಸದಸ್ಯರ ಕೈವಾಡ ಇತ್ತೆಂದು ಎನ್​ಐಎ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿತು. ಮಾಜಿ ಆರೆಸ್ಸೆಸ್ ಕಾರ್ಯಕರ್ತರ ಸ್ವಾಮಿ ಅಸೀಮಾನಂದ ಸೇರಿ ನಾಲ್ವರ ವಿರುದ್ಧ ಆರೋಪ ಪಟ್ಟಿ ದಾಖಲಿಸಿತು. ಭಾರತದಲ್ಲಿ ನಡೆದ ಕೆಲ ಉಗ್ರ ದಾಳಿ ಘಟನೆಗೆ ಪ್ರತೀಕಾರವಾಗಿ ತಾವು ಸಂಜೋತಾ ಎಕ್ಸ್​ಪ್ರೆಸ್ ರೈಲನ್ನು ಗುರಿಯಾಗಿಸಿ ಬಾಂಬ್ ಸ್ಫೋಟ ಮಾಡಿದ್ಧಾಗಿ ಆರೋಪಿಗಳು ಹೇಳಿಕೆ ದಾಖಲಿಸಿದ್ದರೆನ್ನಲಾಗಿದೆ. ಆದರೆ, ತಾನು ಒತ್ತಡದಲ್ಲಿ ಹೇಳಿಕೆ ನೀಡಿದೆ ಎಂದು ಸ್ವಾಮಿ ಅಸೀಮಾನಂದ ಅವರು ತಮ್ಮ ಹೇಳಿಕೆ ಬದಲಾಯಿಸಿದರು.

ಇವತ್ತು ಎನ್​ಐಎ ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗಳ ವಿರುದ್ಧ ಸಮರ್ಪಕ ಸಾಕ್ಷ್ಯಗಳ ಕೊರತೆ ಇದೆ ಎಂದು ಹೇಳಿ ಅವರೆಲ್ಲರನ್ನೂ ಖುಲಾಸೆಗೊಳಿಸಿದೆ. ಇದಕ್ಕೂ ಮುನ್ನ ಪ್ರಕರಣದಲ್ಲಿ ಹೊಸ ಸಾಕ್ಷ್ಯ ಹೇಳಲು ಬಂದ ಪಾಕಿಸ್ತಾನೀ ಮಹಿಳೆಯ ಮನವಿಯನ್ನು ತಿರಸ್ಕರಿಸಲಾಯಿತು. ಪಾಕ್ ಮಹಿಳೆಯ ಸಾಕ್ಷ್ಯದಲ್ಲಿ ಯಾವುದೇ ಹುರುಳಿದ್ದಂತಿಲ್ಲ ಎಂದು ಎನ್​ಐಎ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್ ಅಭಿಪ್ರಾಯಪಟ್ಟರು.

Comments are closed.