ಮನೋರಂಜನೆ

ರಾಜಕಾರಣದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ: ಪುನೀತ್ ರಾಜ್ ಕುಮಾರ್

Pinterest LinkedIn Tumblr


ರಾಜಕೀಯದಿಂದ ನಾನು ದೂರ. ಲೋಕಸಭೆ ಚುನಾವಣೆಯಲ್ಲಿ ನಾನು ಯಾರ ಪರವಾಗಿಯು ಪ್ರಚಾರ ನಡೆಸುವುದಿಲ್ಲ ಎಂದು ದೊಡ್ಮನೆ ಹುಡ್ಗ ಪುನೀತ್ ರಾಜ್​ಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸುತ್ತಿರುವುದರಿಂದ ಅಪ್ಪು ಅಂಬರೀಶ್ ಪತ್ನಿಯ ಪರವಾಗಿ ಚುನಾವಣಾ ಪ್ರಚಾರಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು.

ಆದರೆ ಈ ಬಗ್ಗೆ ಟ್ವಿಟರ್​ನಲ್ಲಿ ತಮ್ಮ ನಿಲುವು ತಿಳಿಸಿರುವ ಪವರ್ ಸ್ಟಾರ್, ದೇವೆಗೌಡರ ಕುಟುಂಬ ಹಾಗೂ ಅಂಬಿ ಕುಟುಂಬ ನಮ್ಮ ಕುಟುಂಬ ಇದ್ದಂತೆ. ಈ ಎರಡು ಕುಟುಂಬಗಳೂ ನಮ್ಮ ಹಿತೈಷಿಗಳೇ. ಇಬ್ಬರಿಗೂ ಒಳ್ಳೆಯದಾಗಲಿ. ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಬಹಿರಂಗ ಪತ್ರದ ಮೂಲಕ ಪುನೀತ್ ರಾಜ್ ಕುಮಾರ್ ಮನವಿ ಮಾಡಿದ್ದಾರೆ.

ಈ ಮೂಲಕ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರದ ಆಹ್ವಾನವನ್ನು ನಯವಾಗಿಯೇ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಪುನೀತ್ ರಾಜ್​ಕುಮಾರ್ ರಾಜಕೀಯದಿಂದ ದೂರ ಉಳಿದು, ಡಾ.ರಾಜ್​ ಕುಮಾರ್ ಅವರ ಹಾದಿಯನ್ನು ತುಳಿದಿದ್ದರು. ಗೀತಾ ಶಿವರಾಜ್​ಕುಮಾರ್ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗಲೂ ಅಪ್ಪು ಚುನಾವಣಾ ಪ್ರಚಾರಕ್ಕೆ ಕೈಜೋಡಿಸಿರಲಿಲ್ಲ.

ಅಪ್ಪಾಜಿ ಅವರು ರಾಜಕೀಯದಿಂದ ದೂರ ಉಳಿದಿದ್ದರು. ಅವರ ಆದರ್ಶವನ್ನು ನಾನು ಪಾಲಿಸಲು ಬಯಸುತ್ತೇನೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರು ಜನರು ಉತ್ತಮರನ್ನು ಆಯ್ಕೆ ಮಾಡುತ್ತಾರೆ. ನಾನು ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ನನಗೆ ರಾಜಕೀಯ ಅಗತ್ಯವಿಲ್ಲ. ಹೀಗಾಗಿ ಯಾವ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೂ ಹೋಗುವುದಿಲ್ಲ ಎಂದು ಪುನೀತ್ ಹೇಳಿದ್ದರು. ಇದೀಗ ಬಹಿರಂಗ ಪತ್ರದ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಪವರ್ ಸ್ಟಾರ್, ರಾಜಕೀಯ ಕ್ಷೇತ್ರದಿಂದ ತಟಸ್ಥರಾಗಿರಲು ಬಯಸುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಮಂಡ್ಯ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಬಹಿರಂಗವಾಗಿ ಪ್ರಚಾರಕ್ಕಿಳಿದಿದ್ದಾರೆ. ನಟ ಕಿಚ್ಚ ಸುದೀಪ್ ಸಹ ಟ್ವಿಟ್ ಮಾಡಿ ಸುಮಲತಾ ಅವರ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೆ ಮುಂಬರುವ ಚುನಾವಣಾ ರ್ಯಾಲಿಯಲ್ಲಿ ಸುಮಲತಾ ಪರವಾಗಿ ಚಿತ್ರರಂಗದ ನಟ-ನಟಿಯರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Comments are closed.