ಕರ್ನಾಟಕ

ಬಳ್ಳಾರಿ: ಕಾಂಗ್ರೆಸ್ ನ ವೆಂಕಟೇಶ್ ಪ್ರಸಾದ್ ಬಿಜೆಪಿ ಸೇರ್ಪಡೆ; ಕಾಂಗ್ರೆಸ್​ಗೆ ಸಂಕಷ್ಟ

Pinterest LinkedIn Tumblr


ಬಳ್ಳಾರಿ: ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರು ಅತೃಪ್ತ ಬಣದ ನೇತೃತ್ವ ವಹಿಸುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಸಾಕಷ್ಟು ತಲೆನೋವಾಗಿದ್ದರು. ಇದೀಗ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಸಂಕಷ್ಟ ತಂದೊಡ್ಡಿದ್ದಾರೆ. ಯಾಕೆಂದರೆ ನಾಗೇಂದ್ರ ಅವರ ಹಿರಿಯಣ್ಣ ವೆಂಕಟೇಶ್ ಪ್ರಸಾದ್ ಇಂದು ಬಿಜೆಪಿ ಸೇರ್ಪಡೆಯಾಗಿ ಟಿಕೆಟ್ ರೇಸ್​ನ ಮುಂಚೂಣಿಯಲ್ಲಿದ್ದಾರೆ. ಈ ಮೂಲಕ ಬಳ್ಳಾರಿ ರಣಕಣದಲ್ಲಿ ಉಗ್ರಪ್ಪ ಅವರಿಗೆ ಟಫ್ ಫೈಟ್ ಕೊಡಲು ಬಿಜೆಪಿ ಸಖತ್ ಪ್ಲಾನ್ ಮಾಡಿದೆ.

ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದಿದ್ದ ಕಾಂಗ್ರೆಸ್ ಈ ಬಾರಿಯೂ ಉಗ್ರಪ್ಪ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಬಹುತೇಕ ಖಚಿತ. ಆದರೆ ಬಿಜೆಪಿ ಅಭ್ಯರ್ಥಿ ಯಾರೆಂಬುದು ಮಾತ್ರ ಹೈಕಮಾಂಡ್ ಪ್ರಕಟಿಸಬೇಕಿದೆ. ಟಿಕೆಟ್ ಘೋಷಣೆ ಕೆಲ ಗಂಟೆಗಳು ಬಾಕಿಯಿರುವ ಸಂದರ್ಭದಲ್ಲಿ ಕೈ ಶಾಸಕ ನಾಗೇಂದ್ರ ಬೀಸಿದ ಬಾಣಕ್ಕೆ ಬಿಜೆಪಿ ಈ ಬಾರಿ ಕಾಂಗ್ರೆಸ್ ಕಟ್ಟಿಹಾಕಲು ತನ್ನದೇ ಆದ ರಣತಂತ್ರ ರೂಪಿಸಿದೆ. ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಹಿರಿಯಣ್ಣ ವೆಂಕಟೇಶ್ ಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ, ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮಾಜಿ ಎಂಎಲ್ ಸಿ ಮೃತ್ಯುಂಜಯಾ ಜಿನಗಾ ಸಮ್ಮುಖದಲ್ಲಿ ಬಿಜೆಪಿ ಪಕ್ಷದ ಬಾವುಟ ಹಾಗೂ ಜಂಡಾ ಹಿಡಿಯುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ದೆಹಲಿಗೆ ತೆರಳಿದ ಪಟ್ಟಿಯಲ್ಲಿ ಬಳ್ಳಾರಿಯಿಂದ ದೇವೇಂದ್ರಪ್ಪ ಇಲ್ಲವೇ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಹೆಸರು ರವಾನೆಯಾಗಿದೆ. ಟಿಕೆಟ್ ಸಿಗುವ ಖಚಿತ ಮಾಹಿತಿ ದೊರೆತ ಹಿನ್ನೆಲೆ ಬಿಜೆಪಿ ಸೇರ್ಪಡೆಯಾಗಿರುವ ಸಾಧ್ಯತೆಯಿದೆ. ಬೇಷರತ್ ಆಗಿ ಬಿಜೆಪಿಗೆ ಕಾರ್ಯಕರ್ತನಾಗಿ ಸೇರಿದ್ದೇನೆ. ಪಕ್ಷ ಟಿಕೆಟ್ ನೀಡಿದರೆ ದುಡಿಯುತ್ತೇನೆ, ನನ್ನ ನಿರ್ಧಾರದ ಹಿಂದೆ ನಾಗೇಂದ್ರ ಅವರ ಪಾತ್ರವಿಲ್ಲ. ಪಕ್ಷಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರವೆಂದು ವೆಂಕಟೇಶ್ ಪ್ರಸಾದ್ ಪ್ರತಿಕ್ರಿಯೆ ನೀಡಿದರು.

ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಜರುಗಿದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀರಾಮುಲು, ಸೋಮಶೇಖರ ರೆಡ್ಡಿ ಅವರ ಗೈರುಹಾಜರಿ ಎದ್ದುಕಾಣುತ್ತಿತ್ತು. ಬಳ್ಳಾರಿಯ ಅಧಿದೇವತೆ ಸಿಡಿಬಂಡೆ ಜಾತ್ರೆ ಹಿನ್ನೆಲೆ ನಾಯಕರು ಆಗಮಿಸಿಲ್ಲ ಎಂಬ ಸಬೂಬು ಹೇಳಿದರೂ ಈ ಹಿಂದೆ ಆತ್ಮೀಯರಾಗಿದ್ದ ನಾಗೇಂದ್ರ ಅವರ ಸಹೋದರ ಬಿಜೆಪಿ ಕಚೇರಿಗೂ ಬಂದರೂ ಬರಲಿಲ್ಲ. ಕೊನೆಗೆ ವೆಂಕಟೇಶ್ ಪ್ರಸಾದ್ ಶ್ರೀರಾಮುಲು ನಿವಾಸಕ್ಕೆ ತೆರಳಿ ಶ್ರೀರಾಮುಲು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಸಾದ್ ಅವರಿಗೆ ಬಿಜೆಪಿ ಬಾವುಟ, ಧ್ವಜವನ್ನು ನೀಡಿ ಶ್ರೀರಾಮುಲು ಬರಮಾಡಿಕೊಂಡರು.

ವೆಂಕಟೇಶ್ ಪ್ರಸಾದ್ ಪಕ್ಷಕ್ಕೆ ಬಂದಿರುವುದು ಸ್ವಾಗತಾರ್ಹ ವಿಚಾರ. ಅದೇ ರೀತಿ ನಾಗೇಂದ್ರ ಬರಲಿದ್ದಾರೆ ಎಂಬ ವಿಶ್ವಾಸವಿದೆ. ಸದ್ಯ ಕಾನೂನಿನ ತೊಡಕು ಇರುವ ಕಾರಣಕ್ಕೆ ನಾಗೇಂದ್ರ ಪಕ್ಷಕ್ಕೆ ಬರಲು ಆಗಿಲ್ಲ ಎಂದು ಶ್ರೀರಾಮುಲು ಪ್ರತಿಕ್ರಿಯೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಎದುರಾಳಿ ವಿರುದ್ಧ ರಣತಂತ್ರ ರೂಪಿಸಬೇಕಾದ ಕಾಂಗ್ರೆಸ್ ಶಾಸಕ ನಾಗೇಂದ್ರ ತನ್ನ ಅಣ್ಣನನ್ನೇ ಬಿಜೆಪಿಗೆ ಕಳುಹಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ನಾಗೇಂದ್ರ ಸಹೋದರ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಶ್ರೀರಾಮುಲು, ಸೋಮಶೇಖರ ರೆಡ್ಡಿ ಗೈರಾಗಿರುವುದು ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗುತ್ತದೆ. ಒಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ಟಫ್ ಫೈಟ್ ಕೊಡಲು ಬಿಜೆಪಿ ಸಹ ತನ್ನದೇ ಆದ ರೀತಿ ಪ್ಲಾನ್ ಮಾಡಿಕೊಂಡೇ ಕಣಕ್ಕಿಳಿಯುತ್ತಿದೆ.

Comments are closed.