ಕರ್ನಾಟಕ

ಕಂಪ್ಲಿ ಶಾಸಕ ಗಣೇಶ್​ಗೆ ಸಿಗದ ಜಾಮೀನು; ಇಂದಿಗೆ ವಿಚಾರಣೆ ಮುಂದೂಡಿಕೆ

Pinterest LinkedIn Tumblr


ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಈಗಲ್ಟನ್​ ರೆಸಾರ್ಟ್​ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಬಂಧಿತರಾಗಿರುವ ಶಾಸಕ ಕಂಪ್ಲಿ ಗಣೇಶ್​ ಅವರ ಜಾಮೀನು ಅರ್ಜಿ ವಿಚಾರಣೆ ಇವತ್ತು ಸಿಟಿ ಸಿವಿಲ್​ ನ್ಯಾಯಾಲಯದಲ್ಲಿ ನಡೆಯಿತು. ಆದರೆ, ಇಂದು ಜೆಎನ್ ಗಣೇಶ್ ಅವರಿಗೆ ಜಾಮೀನು ಸಿಗಲಿಲ್ಲ. ನ್ಯಾಯಾಲಯವು ನಾಳೆಗೆ ವಿಚಾರಣೆ ಮುಂದೂಡಿದೆ.

ಗಣೇಶ್ ಪರ ಹಿರಿಯ ವಕೀಲ ಸಿಹೆಚ್ ಹನುಮಂತರಾಯಪ್ಪ, ಈ ಪ್ರಕರಣದಲ್ಲಿ ಗಣೇಶ್ ತನ್ನ ಸ್ವಯಂ ರಕ್ಷಣೆ ಗಾಗಿ ಹಲ್ಲೆ ಮಾಡಿದ್ದಾರೆ. ಯಾವುದೇ ಉದ್ದೇಶ ಪೂರ್ವಕ ಹಲ್ಲೆ ಮಾಡಿಲ್ಲ. ತನ್ನ ತಾಯಿ ತಂಗಿ ಕುರಿತು ಅವಾಚ್ಯ ಶಬ್ದಗಳಿಂದ ಆನಂದ್ ಸಿಂಗ್ ನಿಂದಿಸಿದ್ದರು. ಈ ವೇಳೆ ಪ್ರಚೋದನೆಯಿಂದ ಗಲಾಟೆ ಶುರುವಾಗಿದೆ. ಅಂದು ಆನಂದ್ ಸಿಂಗ್ ಒಂದೂವರೆ ಬಾಟಲಿ ಮದ್ಯ ಕುಡಿದ್ದಿದ್ದರು. ಈ ವೇಳೆ ಅವರೇ ಮೇಜಿನ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಕಣ್ಣಿನ ರಚನೆ 7 ಮೂಳೆಗಳಿಂದ ಕೂಡಿರುತ್ತದೆ. ಆದರೆ, ಮೆಡಿಕಲ್ ಸರ್ಟಿಫಿಕೇಟ್​ನಲ್ಲಿ ಯಾವ ಲೇಯರ್ ಮುರಿದಿದೆ ಎಂದು ಸ್ಪಷ್ಟವಾಗಿಲ್ಲ ಎಂದು ವಾದಿಸಿದರು.

ವಶಪಡಿಸಿಕೊಂಡಿರುವ ಸಿಸಿಟಿವಿ ದೃಶ್ಯಗಳ ಪ್ರಕಾರ, ಘಟನೆ ನಡೆದಿರುವುದು ಕಾರಿಡಾರ್​ನಲ್ಲಲ್ಲ, ಭೀಮಾನಾಯ್ಕ್ ರೂಮಿನಲ್ಲಿ. ಆದರೂ ಕೂಡ ಘಟನೆಗೆ ಸಂಬಂಧಿಸಿದಂತೆ ಭೀಮಾನಾಯ್ಕ್ ಅವರ ಹೇಳಿಕೆ ದಾಖಲಿಸಿಲ್ಲ. ಘಟನೆಯಲ್ಲಿ ಆನಂದ್​ ಸಿಂಗ್​ಗೆ ಗಂಭೀರ ಹಲ್ಲೆ ಎಂದು ಇಲ್ಲಿ ಕೇವಲ ಊಹಿಸಿಕೊಳ್ಳಲಾಗಿದೆ. ಆದರೆ ಆನಂದ್ ಸಿಂಗ್ ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ಅವರ ಫೇಸ್​ಬುಕ್​ನಲ್ಲಿ ಅವರ ಕಾರ್ಯಕ್ರಮಗಳಿಗೆ ಭೇಟಿ ಮಾಡಿದ ಬಗ್ಗೆ ಅಪ್ಡೇಟ್ ಮಾಡಿದ್ದಾರೆ. ದೇವಾಲಯಕ್ಕೆ ಭೇಟಿ, ಸಾರ್ವಜನಿಕ ಸಭೆ, ಒಬ್ಬರೇ ಹೆಲಿಕ್ಯಾಪ್ಟರ್ ಪ್ರಯಾಣ ಮಾಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅಲ್ಲದೇ ಬೇರೆ ಉದ್ದೇಶದಿಂದಲೇ ಇಲ್ಲಿ ತಡವಾಗಿ ಎಫ್​ಐಆರ್ ದಾಖಲಿಸಲಾಗಿದೆ ಎಂದು ಗಣೇಶ್ ಪರ ವಕೀಲರು ಕೋರ್ಟ್​ನಲ್ಲಿ ವಾದಿಸಿದರು.

ಇನ್ನು, ಗಣೇಶ್​ ವಿರುದ್ಧವಾಗಿ ಪ್ರತಿವಾದ ಮಾಡಿದ ಸರ್ಕಾರಿ ಆಭಿಯೋಜಕಿ ರಾಜೇಶ್ವರಿ, ಘಟನೆ ನಡೆದ ತಕ್ಷಣ ಅವರನ್ನ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳು ಹೇಳಿಕೆ ನೀಡುವ ಸ್ಥಿತಿಯಲ್ಲಿರಲಿಲ್ಲ ಹಾಗಾಗಿ ಎಫ್​​ಐಆರ್​ ತಡವಾಗಿದೆ. ಎಲೆಕ್ಷನ್ ವೇಳೆ ಆನಂದ್ ಸಿಂಗ್ ಸರಿಯಾಗಿ ಹಣ ನೀಡಿಲ್ಲವೆಂದು ಈ ಗಲಾಟೆ ಶುರುವಾಗಿದೆ. ಅಲ್ಲದೇ ನಿನ್ನ ಅಕ್ಕನ ಮಗನನ್ನು ಮುಗಿಸುತ್ತೇನೆ ಅಂದಾಗ ಫ್ಯಾಮಿಲಿ ವಿಷಯಕ್ಕೆ ಯಾಕೆ ಬರುತ್ತೀಯ ಎಂದು ಚಕಮಕಿ ನಡೆಯುತ್ತದೆ ಎಂದು ಪ್ರತಿವಾದ ಮಾಡಿದರು.

ಆನಂದ್ ಸಿಂಗ್ ಒಂದೂವರೆ ಬಾಟೆಲ್ ಮದ್ಯ ಸೇವಿಸಿದ್ದಾರೆ ಎಂದಿದ್ದಾರೆ. ಆದರೆ ಯಾವ ಬ್ರಾಂಡ್ ಮಧ್ಯ ಸೇವಿಸಿದ್ದರೆಂದು ಗೊತ್ತಾ..? ಅಷ್ಟು ಕುಡಿದಿದ್ದರೆ ಅವರಿಗೆ ನಿಲ್ಲಲು ಸಾಧ್ಯವಾಗುತ್ತಿತ್ತಾ..? ಆದರೆ ಮೆಡಿಕಲ್ ಟೆಸ್ಟ್ ರಿಪೋರ್ಟ್ ಪ್ರಕಾರ ಆನಂದ್ ಮದ್ಯ ಸೇವನೆ ಮಾಡಿಯೇ ಇಲ್ಲ ಎಂದಿದೆಯಲ್ಲ ಎಂದು ಅಭಿಯೋಜಕಿ ಪ್ರಶ್ನಿಸಿದರು.

ಆನಂದ್ ಸಿಂಗ್ ಕುಡಿದು ಬಿದ್ದು ಗಾಯ ಮಾಡಿಕೊಂಡಿದ್ದಾರೆಂಬ ವಾದವನ್ನು ತಳ್ಳಿಹಾಕಿದ ನ್ಯಾಯವಾದಿ ರಾಜೇಶ್ವರಿ, ಅವರಾಗೇ ಬಿದ್ದಿದ್ದರೆ ಒಂದು ಕಡೆ ಗಾಯವಾಗುತ್ತಿತ್ತು. ಮೈಯೆಲ್ಲಾ ಗಾಯವಾಗುತ್ತಿರಲಿಲ್ಲ. ಒಬ್ಬ ಶಾಸಕರಾಗಿ ಗಣೇಶ್ ಅವರು ಆನಂದ್ ಸಿಂಗ್ ಅವರಿಗೆ ಯಾಕೆ ಸಹಾಯ ಮಾಡಲಿಲ್ಲ. ಮಾನವೀಯ ದೃಷ್ಟಿಯಿಂದಲಾದರೂ ಅವರಿಗೆ ನೆರವು ನೀಡಲು ಮುಂದಾಗಬೇಕಿತ್ತು ಎಂದು ಹೇಳಿದರು.

ಗಣೇಶ್ ವಿರುದ್ಧ ಹಲವು ಪ್ರಕರಣಗಳಿವೆ. ಅವರ ಮೇಲೆ ರೌಡಿಶೀಟ್ ಇದೆ. ಅವರಿಗೆ ಜಾಮೀನು ನೀಡಿದರೆ ದೂರುದಾರರ ಜೀವಕ್ಕೆ ತೊಂದರೆ ಇರುತ್ತದೆ. ಆದ್ದರಿಂದ ಅವರಿಗೆ ಜಾಮೀನು ನೀಡಬೇಡಿ ಎಂದು ಸರಕಾರಿ ಅಭಿಯೋಜಕಿ ರಾಜೇಶ್ವರಿ ಅವರು ಸಿಟಿ ಸಿವಿಲ್ ನ್ಯಾಯಾಧೀಶರಿಗೆ ಮನವಿ ಮಾಡಿದರು.

ಈ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ನಾಳೆ ಮತ್ತೊಮ್ಮೆ ವಿಚಾರಣೆ ನಡೆಸಲು ನಿರ್ಧರಿಸಿದರು.

Comments are closed.