ಕರ್ನಾಟಕ

ಸುಮಲತಾಗೆ ಬಿಜೆಪಿ ಬೆಂಬಲ? ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ?

Pinterest LinkedIn Tumblr


ಬೆಂಗಳೂರು: ಮಂಡ್ಯದಲ್ಲಿ ಸುಮಲತಾ ವರ್ಸಸ್ ನಿಖಿಲ್ ನೇರ ಫೈಟ್ ಬಹುತೇಕ ನಿಶ್ಚಿತವಾಗಿದೆ. ಪಕ್ಷೇತರರಾಗಿ ಬುಧವಾರ ನಾಮಪತ್ರ ಸಲ್ಲಿಸಲಿರುವ ಸುಮಲತಾ ಅಂಬರೀಷ್ ಅವರಿಗೆ ಬಿಜೆಪಿ ಬೆಂಬಲ ಕೊಡಲು ನಿರ್ಧರಿಸಿದೆ. ಇಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಇವತ್ತು ತೀರ್ಮಾನವಾಗಿದೆ. ಮಂಡ್ಯದಲ್ಲಿ ಅಭ್ಯರ್ಥಿಯನ್ನು ನಿಲ್ಲಿಸದೇ ಪರೋಕ್ಷವಾಗಿ ಸುಮಲತಾ ಅವರಿಗೆ ಬೆಂಬಲ ನೀಡುವುದು ಬಿಜೆಪಿಯ ಉದ್ದೇಶವಾಗಿದ್ದಂತಿದೆ.

ರಾಜ್ಯದ ಐದಾರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಸಿದ್ದವಾಗಿದೆ. ಮಂಗಳವಾರ ಸಂಜೆಯ ನಂತರ ಪಟ್ಟಿ ಹೊರಬರುವ ನಿರೀಕ್ಷೆ ಇತ್ತಾದರೂ ತಡರಾತ್ರಿಯವರೆಗೂ ಬಿಡುಗಡೆಯಾಗಿಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು.

ಮಂಡ್ಯದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡುವ ವಿಚಾರವನ್ನು ಕೊನೆಯ ಕ್ಷಣದವರೆಗೂ ಬಹಿರಂಗಪಡಿಸದಿರಲು ಪಕ್ಷ ನಿರ್ಧರಿಸಿದೆ. ಅದಕ್ಕಾಗಿಯೇ ಕೆಲ ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯನ್ನು ಕೆಲ ದಿನಗಳವರೆಗೂ ತಡೆಹಿಡಿಯುವ ಸಾಧ್ಯತೆ ಇದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಇರುವಾಗ ಸುಮಲತಾ ಅವರಿಗೆ ಬೆಂಬಲ ನೀಡುವ ವಿಷಯವನ್ನು ಬಿಜೆಪಿ ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ.

ಮಂಡ್ಯ, ಬಳ್ಳಾರಿ, ಹಾಸನ, ರಾಯಚೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಐದಾರು ಕ್ಷೇತ್ರಗಳಲ್ಲಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಘೋಷಿಸಿ ಮೈತ್ರಿಪಾಳಯಕ್ಕೆ ಶಾಕ್ ಕೊಡುವುದು ಬಿಜೆಪಿಯ ಇರಾದೆಯಾಗಿದೆ.

ಹಾಸನ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಉಪಸ್ಥಿತಿ ಅಷ್ಟಕಷ್ಟೇ. ಕಳೆದ ಬಾರಿ ನಡೆದ ಮಂಡ್ಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಎಸ್.ಜಿ. ಸಿದ್ದರಾಮಯ್ಯ ಅವರು 2 ಲಕ್ಷಕ್ಕೂ ಹೆಚ್ಚು ಮತಗಳನ್ನು ಗೆದ್ದು ಗಮನ ಸೆಳೆದಿದ್ದರು. ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಹಾಕಿದರೆ ಕಣಕ್ಕಿಳಿಯುವುದು ಡಾ. ಸಿದ್ದರಾಮಯ್ಯ ಅವರೆಯೇ. ಆದರೆ, ಸುಮಲತಾ ಅಂಬರೀಷ್ ಅವರು ಪಕ್ಷೇತರರಾಗಿ ಮಂಡ್ಯದಲ್ಲಿ ಸ್ಪರ್ಧಿಸುತ್ತಿರುವುದರಿಂದ ಬಿಜೆಪಿಯು ಅವರಿಗೆ ಬೆಂಬಲವಾಗಿ ನಿಲ್ಲುವ ಸಾಧ್ಯತೆ ಇದೆ.

ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿರುವುದರಿಂದ ಮಂಡ್ಯದ ಜಿದ್ದಾಜಿದ್ದಿ ದೇಶಾದ್ಯಂತ ಗಮನ ಸೆಳೆಯುತ್ತಿದೆ. ಮುಖ್ಯಮಂತ್ರಿಗೂ ಈ ಚುನಾವಣೆ ಪ್ರತಿಷ್ಠೆಯ ವಿಚಾರವಾಗಿದೆ. ಸುಮಲತಾ ಅಂಬರೀಷ್ ಅವರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲ ಇಲ್ಲವೆಂದು ಕೈ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರಾದರೂ ಮಂಡ್ಯದ ಕೆಲ ಪ್ರಮುಖ ಸ್ಥಳೀಯ ಮುಖಂಡರು ಜೆಡಿಎಸ್​ ಪರ ಕೆಲಸ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ಚಲುವರಾಯಸ್ವಾಮಿ ಮೊದಲಾದ ಮುಖಂಡರು ಪರೋಕ್ಷವಾಗಿ ಸುಮಲತಾ ಅವರನ್ನು ಬೆಂಬಲಿಸುವ ಸಾಧ್ಯತೆಯಂತೂ ಇದ್ಧೇ ಇದೆ.

Comments are closed.