ರಾಷ್ಟ್ರೀಯ

ಭಾರತದ ಮೊದಲ ಲೋಕಪಾಲ್ ಆಗಿ ನ್ಯಾ| ಪಿನಾಕಿ ಚಂದ್ರ ಘೋಷ್ ನೇಮಕ

Pinterest LinkedIn Tumblr


ನವದೆಹಲಿ: ಭ್ರಷ್ಟಾಚಾರ ನಿಗ್ರಹದ ಉದ್ದೇಶವಿರುವ ಲೋಕಪಾಲ್ ಕೊನೆಗೂ ಅಸ್ತಿತ್ವಕ್ಕೆ ಬಂದಿದೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ಲೋಕಪಾಲ್ ಆಗಿ ಕೇಂದ್ರ ಸರಕಾರ ನೇಮಕ ಮಾಡಿದೆ. ಈ ಮೂಲಕ ಪಿ.ಸಿ. ಘೋಷ್ ಅವರು ದೇಶದ ಮೊದಲ ಲೋಕಪಾಲ್ ಆದ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಧಾನಮಂತ್ರಿ, ಮುಖ್ಯನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್ ಹಾಗೂ ಮತ್ತೋರ್ವ ಗಣ್ಯರಿದ್ದ ಆಯ್ಕೆ ಸಮಿತಿಯು ನ್ಯಾ| ಘೋಸ್ ಅವರ ಹೆಸರನ್ನು ಅಂತಿಮಗೊಳಿಸಿತ್ತು.

ಇದೇ ವೇಳೆ ಲೋಕಪಾಲ್​ನ ಇತರ ಸದಸ್ಯರ ನೇಮಕಾತಿಯೂ ನಡೆದಿದೆ. ಈ ಮೂಲಕ ನ್ಯಾ| ಘೋಷ್ ನೇತೃತ್ವದಲ್ಲಿ ಒಟ್ಟು 9 ಸದಸ್ಯರ ಲೋಕಪಾಲ್ ಅಸ್ತಿತ್ವಕ್ಕೆ ಬಂದಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಯ್ಕೆ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿ ಲೋಕಪಾಲ್​ಗೆ ಒಂಬತ್ತು ಮಂದಿಯನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.

ಲೋಕಪಾಲ್​ನ ನ್ಯಾಯಾಂಗ ಸದಸ್ಯರು:
ನ್ಯಾ| ದಿಲೀಪ್ ಬಿ. ಭೋಸಲೆ
ನ್ಯಾ| ಪ್ರದೀಪ್ ಕುಮಾರ್ ಮೊಹಾಂತಿ
ನ್ಯಾ| ಅಭಿಲಾಷಾ ಕುಮಾರಿ
ನ್ಯಾ| ಅಜಯ್ ಕುಮಾರ್ ತ್ರಿಪಾಠಿ

ನ್ಯಾಯಾಂಗೇತರ ಸದಸ್ಯರು
ದಿನೇಶ್ ಕುಮಾರ್ ಜೈನ್
ಅರ್ಚನಾ ರಾಮಸುಂದರಂ
ಮಹೇಂದರ್ ಸಿಂಗ್
ಇಂದ್ರಜೀತ್ ಪ್ರಸಾದ್ ಗೌತಮ್

ಲೋಕಪಾಲ್ ನೇಮಕಾತಿ ಪ್ರಕ್ರಿಯೆ ಬಗ್ಗೆ ವಿಪಕ್ಷಗಳು ಸಮಾಧಾನ ಹೊಂದಿಲ್ಲ. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಸಮಿತಿಯಲ್ಲಿ ವಿಶೇಷ ಆಹ್ವಾನಿತ ಮಾತ್ರವಾಗಿದ್ದರು. ಹೀಗಾಗಿ ಅವರು ಆಯ್ಕೆ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದರು. ಆಯ್ಕೆ ಸಮಿತಿಯಲ್ಲಿ ಜವಾಬ್ದಾರಿ ನೀಡದೇ ವಿಪಕ್ಷ ಮುಖಂಡರ ಧ್ವನಿಯನ್ನು ಹತ್ತಿಕ್ಕಲಾಯಿತು ಎಂಬುದು ಪ್ರಮುಖ ಅಪಸ್ವರವಾಗಿದೆ.

ವಿವಾದಗಳ ನಡುವೆಯೇ ದೇಶದ ಮೊದಲ ಲೋಕಪಾಲ್ ಆಗಿರುವ ನ್ಯಾ| ಪಿನಾಕಿ ಚಂದ್ರ ಘೋಷ್ ಅವರು 2017ರಲ್ಲಿ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿದ್ದರು. ಅವರು ಈ ಮುಂಚೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಭ್ರಷ್ಟಾಚಾರ ನಿಯಂತ್ರಣಕ್ಕೆಂದು ಸ್ಥಾಪಿಸಲಾಗಿರುವ ಲೋಕಪಾಲ್​ಗೆ ಅನೇಕ ವಿಶೇಷ ಅಧಿಕಾರಗಳುಂಟು. ಕೇಂದ್ರೀಯ ವಿಚಕ್ಷಣ ಆಯೋಗ(ಸಿವಿಸಿ)ದೊಂದಿಗೆ ಸಹಯೋಗದಲ್ಲಿ ಕೆಲಸ ಮಾಡಬೇಕಿರುವ ಲೋಕಪಾಲರಿಗೆ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ಸಿಬಿಐ ಸೇರಿದಂತೆ ತಮ್ಮಿಷ್ಟದ ಯಾವುದೇ ತನಿಖಾ ಸಂಸ್ಥೆಗೂ ಆದೇಶ ಮಾಡುವ ಅಧಿಕಾರ ಇದೆ. ಅದಕ್ಕಿಂತ ಹೆಚ್ಚಾಗಿ ಹಾಲಿ ಪ್ರಧಾನಿಯ ವಿರುದ್ಧ ತನಿಖೆ ನಡೆಸುವ ಅಧಿಕಾರ ಲೋಕಪಾಲ್​ಗಿದೆ. ಪ್ರಧಾನಿ, ಸಚಿವರು, ಸಂಸದರು, ಸರಕಾರಿ ನೌಕರರು, 10 ಲಕ್ಷ ವಿದೇಶೀ ದೇಣಿಗೆ ಪಡೆಯುವ ಸರಕಾರೇತರ ಸಂಸ್ಥೆಗಳ ನೌಕರರು ಹೀಗೆ ಬಹುತೇಕ ಮಂದಿಯ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಅಧಿಕಾರ ಲೋಕಪಾಲರಿಗಿದೆ.

Comments are closed.