ರಾಷ್ಟ್ರೀಯ

ಮೋದಿ ಮತ್ತೆ ಪ್ರಧಾನಿಯಾದರೆ ಚುನಾವಣೆಯೇ ಬಂದ್: ಅಶೋಕ್ ಗೆಹ್ಲೋಟ್

Pinterest LinkedIn Tumblr


ನವದೆಹಲಿ: ನರೇಂದ್ರ ಮೋದಿ ಅವರ ಅಡಿಯಲ್ಲಿ ದೇಶ ಮತ್ತು ಪ್ರಜಾತಂತ್ರ ವ್ಯವಸ್ಥೆ ಅಪಾಯಕ್ಕೆ ಸಿಲುಕಕದೆ. ಅಧಿಕಾರಕ್ಕಾಗಿ ಮೋದಿ ಅವರು ಏನು ಬೇಕಾದರೂ ಮಾಡುತ್ತಾರೆ. ಪಾಕಿಸ್ತಾನದೊಂದಿಗೆ ಅವರು ಯುದ್ಧವನ್ನೂ ಬೇಕಾದರೆ ಮಾಡುತ್ತಾರೆಂಬುದು ಜನರ ಆತಂಕವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದರು.

ಒಂದು ವೇಳೆ ಮೋದಿ ಮತ್ತೊಂದು ಅವಧಿಗೆ ಪ್ರಧಾನಿ ಆದರೆ ನಮ್ಮ ದೇಶಕ್ಕೆ ಚೀನಾ ಮತ್ತು ರಷ್ಯಾದ ರೀತಿಯ ಪರಿಸ್ಥಿತಿ ಬಂದೊದಗುತ್ತದೆ. ಇಲ್ಲಿ ಇನ್ನೊಮ್ಮೆ ಚುನಾವಣೆಯೇ ನಡೆಯದಂತಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪಿಟಿಐ ಸುದ್ದಿಸಂಸ್ಥೆಯೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

“ಜನರು ಮೋದಿ ಅವರನ್ನ ಮತ್ತೊಮ್ಮೆ ಆರಿಸಿದರೆ ದೇಶದಲ್ಲಿ ಚುನಾವಣೆ ನಡೆಯುತ್ತಾ ಎಂಬುದು ಖಾತ್ರಿ ಇಲ್ಲ. ಚೀನಾ ಮತ್ತು ರಷ್ಯಾದಲ್ಲಿಯಂತೆ ಚುನಾವಣೆ ನಡೆದರೆ ನಡೆಯಬಹುದು, ಇಲ್ಲದಿದ್ದರೆ ಇಲ್ಲ ಎಂಬಂಥ ಪರಿಸ್ಥಿತಿ ಬರುತ್ತದೆ” ಎಂದು ಗೆಹ್ಲೋಟ್ ಆತಂಕ ತೋಡಿಕೊಂಡರು.

ರಷ್ಯಾ ಮತ್ತು ಚೀನಾದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದು, ಯಾರು ಅಧ್ಯಕ್ಷರಾಗುತ್ತಾರೆ, ಯಾರು ಪ್ರಧಾನಿ ಆಗುತ್ತಾರೆ ಎಂಬುದು ಪೂರ್ವ ನಿರ್ಧಾರಿತವಾಗಿರುತ್ತದೆ. ಅದೇ ರೀತಿಯಲ್ಲಿ ಮೋದಿ ಆಡಳಿತದಲ್ಲಿ ಭಾರತಕ್ಕೂ ಗತಿ ಆಗಬಹುದು ಎಂಬುದು ಗೆಹ್ಲೋಟ್ ಅಭಿಪ್ರಾಯ.

“ಈ ವ್ಯಕ್ತಿ ಚುನಾವಣೆ ಗೆಲ್ಲುವುದಕ್ಕಾಗಿ ಏನು ಬೇಕಾದರೂ ಮಾಡಬಲ್ಲರು. ಪಾಕಿಸ್ತಾನದೊಂದಿಗೆ ಯುದ್ಧವನ್ನೂ ಮಾಡಿಬಿಡಬಹುದು ಎಂಬುದು ಜನರ ಅನಿಸಿಕೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮೋದಿ ಅವರು ಚುನಾವಣೆಗೆ ಮುನ್ನ ಮತ್ತು ಆನಂತರ ಯಾವ ಹಂತಕ್ಕಾದರೂ ಹೋಗಬಲ್ಲರು. ಮೋದಿ ಮನಸ್ಸಲ್ಲಿ ಏನಿದೆ ಅಂತ ಅಮಿತ್ ಶಾ ಅವರಿಗೂ ಗೊತ್ತಿಲ್ಲ” ಎಂದು ರಾಜಸ್ಥಾನ ಸಿಎಂ ಹೇಳಿದರು.

ಮೋದಿ ಅವರು ಒಳ್ಳೆಯ ನಟ ಎಂದು ಬಣ್ಣಿಸಿದ ಗೆಹ್ಲೋಟ್, ಒಂದು ವೇಳೆ ಮೋದಿ ಅವರು ಬಾಲಿವುಡ್​ನಲ್ಲಿದ್ದದ್ದರೆ, ತಮ್ಮ ನಟನೆ, ಮಾತುಗಾರಿಕೆ ಮತ್ತು ಹಾವಭಾವದಿಂದ ದೇಶ-ವಿದೇಶಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಅಸಹಿಷ್ಣುಗಳಾಗಿದ್ದಾರೆಂದು ಆರೋಪಿಸಿದ ಗೆಹ್ಗೋಟ್, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಹಿಷ್ಣುತೆ ಬಹಳ ಮುಖ್ಯ. ಆದರೆ, ಬಿಜೆಪಿ ನಾಯಕರಲ್ಲಿ ಅಸಹಿಷ್ಣುತೆ ಮನೆ ಮಾಡಿದೆ. ವಿರೋಧ ಪಕ್ಷಗಳ ಯಾರೊಬ್ಬರೂ ಕೂಡ ಅವರನ್ನು ಪ್ರಶ್ನಿಸುವಂತಿಲ್ಲ ಎಂದು ವಿಷಾದಿಸಿದರು.

ಆರೆಸ್ಸೆಸ್ ವಿರುದ್ಧವೂ ಟೀಕೆ ಮಾಡಿದ ಗೆಹ್ಲೋಟ್, ಆರೆಸ್ಸೆಸ್ ಒಂದು ಹೆಚ್ಚುವರಿ ಸಾಂವಿಧಾನಿಕ ಸಂಸ್ಥೆಯಾಗಿದ್ದು, ದೇಶದ ಪ್ರತಿಯೊಂದು ಸಂಸ್ಥೆಯಲ್ಲೂ ತನ್ನ ಜನರನ್ನು ತುರುಕಲು ಯತ್ನಿಸುತ್ತಿದೆ ಎಂದು ಟೀಕಿಸಿದರು.

Comments are closed.