ಕರ್ನಾಟಕ

ಸುಮಲತಾಗೆ ಬೆಂಬಲ ಘೋಷಿಸಿದ ನಟ ಪ್ರಕಾಶ್​ ರಾಜ್​ !

Pinterest LinkedIn Tumblr

ಬೆಂಗಳೂರು: ಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಲಿರುವ ನಟ ಪ್ರಕಾಶ್​ ರಾಜ್​ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್​​ ಅವರಿಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಮಾಗಡಿ ರಸ್ತೆಯ ಅಂಜನ್​ ಥಿಯೇಟರ್​ ಬಳಿ ತಮ್ಮ ರಾಜಕೀಯ ನೂತನ ಕಚೇರಿ ಉದ್ಘಾಟಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಪ್ರಜೆಗಳು ಭಾರತದ ಪ್ರಜೆಗಳಾಗಿ ಯೋಚನೆ ಮಾಡಬೇಕು. ಸುಮಲತಾ ಸರಿಯಾದ ರೀತಿಯಲ್ಲಿ, ಅನುಭವಸ್ಥರ ಹಾಗೆ ಮಾತನಾಡುತ್ತಿದ್ದಾರೆ. ಅವರಿಗೆ ರಾಜಕೀಯ ಗೊತ್ತಿಲ್ಲ ಅಂತ ಹೇಳಕ್ಕಾಗಲ್ಲ. ಒಳ್ಳೆಯ ರಾಜಕೀಯ ಬೇಕು ಅಂತಾ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಸ್ಪರ್ಧೆ ಮಾಡುವ ಹಕ್ಕು ಅವರಿಗಿದೆ. ಸುಮಲತಾ ಅವರು ಅಂಬರೀಶ್​​ ಜೊತೆ ಇದ್ದವರು, ಮಂಡ್ಯದ ಸೊಸೆ ಕೂಡ. ನನಗೆ ಹಲವು ವರ್ಷಗಳಿಂದ ಪರಿಚಯ ಇದ್ದಾರೆ. ಅವರಿಗೆ ಬೆಂಬಲವಾಗಿ ನಾನು ಇದ್ದೀನಿ ಎಂದು ಹೇಳಿದ್ದಾರೆ.

ಇನ್ನೂ ಮಂಡ್ಯದಿಂದ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನಿಖಿಲ್​ಗೆ ಇದು​ ರಾಜಕೀಯಕ್ಕೆ ಬರುವ ವಯಸ್ಸಲ್ಲ. ಅವರು ಇನ್ನೂ ಸ್ವಲ್ಪ ವಿಳಂಬವಾಗಿ ರಾಜಕೀಯಕ್ಕೆ ಎಂಟ್ರಿ ಕೊಡಬೇಕಾಗಿತ್ತು. ನಿಖಿಲ್​​ ಇನ್ನೂ ಸಹ ಯುವಕ. ಈಗಷ್ಟೇ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಇನ್ನಷ್ಟು ಅನುಭವದ ಅಗತ್ಯ ಇದೆ. ಇದನ್ನು ನಾನು ನಿಖಿಲ್​ಗೆ ಪ್ರೀತಿಯಿಂದಲೇ ಹೇಳುತ್ತಿದ್ದೇನೆ ಎಂದರು.

ಕುಟುಂಬ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್​ ರಾಜ್​, ಮಗನಿಗೆ ಅರ್ಹತೆ ಇದ್ದರೆ ಅದು ಕುಟುಂಬ ರಾಜಕೀಯ ಅಲ್ಲ, ಕುಟುಂಬ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರೆ ಅದು ಕುಟುಂಬ ರಾಜಕೀಯ ಆಗುತ್ತದೆ. ಅದನ್ನು ಜನರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಇನ್ನೂ ಕಾಂಗ್ರೆಸ್​​ ಬೆಂಬಲ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ನನಗೆ ಬಿಜೆಪಿ ಇಷ್ಟವಿಲ್ಲ. ಬಿಜೆಪಿಯ ಆಡಳಿತ ವೈಖರಿಯೂ ನನಗೆ ಇಷ್ಟವಾಗಲ್ಲ. ನನಗೆ ಆಮ್​ ಆದ್ಮಿ ಪಾರ್ಟಿ, ಸಿಪಿಎಂ, ಸಿಪಿಐ ಹಾಗೂ ದಲಿತ ಸಂಘರ್ಷ ಸಮಿತಿಗಳಿಂದ ಬೆಂಬಲ ಸಿಕ್ಕಿದೆ. ದೇವೇಗೌಡರನ್ನೂ ಭೇಟಿ ಮಾಡಿ ಬೆಂಬಲ ಕೇಳಿದ್ದೆ. ಮೈತ್ರಿ ಸರ್ಕಾರ ಇದೆ ನೋಡೋಣ ಎಂದಿದ್ದಾರೆ. ಕಾಂಗ್ರೆಸ್​​ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೇಳಿದ್ದೇನೆ. ಹತ್ತು ವರ್ಷದಿಂದ ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಗೆದ್ದಿಲ್ಲ. ಅದಕ್ಕಾಗಿ ಬೆಂಬಲ ಕೊಡಿ ಎಂದು ಕೇಳಿದ್ದೇನೆ ಎಂದರು.

ಬೆಂಗಳೂರು ಕೇಂದ್ರದಿಂದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸ್ಪರ್ಧೆ ಮಾಡುತ್ತಾರೆಂಬ ವಿಚಾರವಾಗಿ, ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವವರಿಗೆ ಪ್ರಕಾಶ್​​ ರಾಜ್​ ವಿರೋಧ ವ್ಯಕ್ತಪಡಿಸಿದ್ದಾರೆ. ರಾಹುಲ್​ ಗಾಂಧಿ, ನರೇಂದ್ರ ಮೋದಿ ಅವರೇ ಯಾಕೆ ನೀವು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೀರಿ. ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ. ಎಲ್ಲಿಂದಲೋ ಇಲ್ಲಿಗೆ ಬಂದು ನಿಲ್ತೀರಲ್ಲ.. ಇಲ್ಲಿನ ಜನರ ಸಮಸ್ಯೆ, ಇವರ ಕಷ್ಟ ಸುಖ ನಿಮಗೆ ಗೊತ್ತಾ..? ಅಥವಾ ಸೋಲುವ ಭಯದಿಂದ ಎರಡೆರೆಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೀರಾ..? ಈಗ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಗೆಲ್ಲುತ್ತೀರಾ..? ಆಮೇಲೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಹೋಗುತ್ತೀರಾ..? ಆಗ ಮತ್ತೆ ಸಾರ್ವಜನಿಕರ ದುಡ್ಡು ಖರ್ಚು ಆಗಲ್ವಾ…? ಮತ್ತೆ ಚುನಾವಣೆಗೆ ಖರ್ಚಾಗುವ ಹಣ ಯಾರ ಅಪ್ಪಂದು‌…? ಎಂದು ಎರಡೆರೆಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಾಯಕರ ವಿರುದ್ಧ ಕಿಡಿಕಾರಿದರು.

Comments are closed.