ಕರ್ನಾಟಕ

ನಮ್ಮನ್ನು ಪಕ್ಷದಿಂದ ಉಚ್ಚಾಟಿಸಿದರೂ ಸುಮಲತಾ ಪರವಾಗಿಯೇ ಪ್ರಚಾರ: ಕಾಂಗ್ರೆಸ್ ಅಧ್ಯಕ್ಷ ಸುಬ್ರಮಣ್ಯ

Pinterest LinkedIn Tumblr


ಮೈಸೂರು: “ನಮ್ಮನ್ನು ಕಿತ್ತೊಗೆದರು ಪರ್ವಾಗಿಲ್ಲ; ನಾವು ಸುಮಲತಾರ ಪರವಾಗಿಯೇ ಪ್ರಚಾರ ಮಾಡುತ್ತೇವೆ. ಸುಮಲತಾ ಅವರು ಸಂಸದರಾಗಲಿಕ್ಕೆ ಸೂಕ್ತ ಅಭ್ಯರ್ಥಿ. ಹೀಗಾಗಿ ಕಾಂಗ್ರೆಸ್ಸಿನವರು ಒಳ್ಳೆಯ ಅಭ್ಯರ್ಥಿಗಾಗಿಯೇ ಕೆಲಸ ಮಾಡುತ್ತೇವೆ. ನಮ್ಮನ್ನು ಪಕ್ಷದಿಂದ ಕಿತ್ತೊಗೆಯುತ್ತಾರೆ ಎಂದು ಭಯ ಪಡೋದಿಲ್ಲ. ಈ ಹಿಂದೆ ಕಾಂಗ್ರೆಸ್​​ ಪಕ್ಷಕ್ಕಾಗಿಯೇ ತುಂಬಾ ದುಡಿದಿದ್ದೇವೆ. ಈ ಸಲ ಕಾಂಗ್ರೆಸ್​​ ಅಭ್ಯರ್ಥಿ ಕಣಕ್ಕಿಳಿದಿಲ್ಲ. ಹೀಗಾಗಿ ಸುಮಲತಾ ಅಕ್ಕನ ಜತೆಗೆ ಓಡಾಡುತ್ತೇವೆ” ಎಂದು ಕೆ.ಆರ್​​​ ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಮಣ್ಯ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಇಂದು ಸುಮಲತಾ ಅವರು ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಕಪ್ಪಡಿ ಕ್ಷೇತ್ರದಿಂದಲೇ ತಾಯಿ ಜತೆಗೆ ಪ್ರಚಾರ ಮಾಡಲಿಕ್ಕೆಂದು ಅಭಿಷೇಕ್ ಜೊತೆಗೂಡಿದರು. ಅಲ್ಲಿಯೇ ದೇವಾಲಯವೊಂದಕ್ಕೆ ಭೇಟಿ ನೀಡಿದ್ದ ಅಭಿಷೇಕ್​​ಗೆ ಸ್ಥಳೀಯರು ಸನ್ಮಾನ ಮಾಡಿ ಸ್ವಾಗತಿಸಿದರು. ಅಮ್ಮ ಮಗನನ್ನು ಅದ್ದೂರಿಯಾಗಿ ಸ್ವಾಗತಿಸಿದಲ್ಲದೇ ಚುನಾವಣೆಯಲ್ಲಿ ತಮ್ಮ ನಿಲ್ಲುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಸುಮಲತಾ ಅವರಿಗಾಗಿಯೇ ನಾವು ದುಡಿಯುತ್ತೇವೆ. ಯಾವುದೇ ಕಾರಣಕ್ಕೂ ಜೆಡಿಎಸ್​​ಗೆ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ಸಿನಿಂದ ನಮ್ಮನ್ನು ಕಿತ್ತೊಗೆದರು ಯಾವುದೇ ಚಿಂತೆಯಿಲ್ಲ. ಸುಮಲತಾ ಸಂಸದರಾಗಲಿಕ್ಕೆ ಸೂಕ್ತ ಅಭ್ಯರ್ಥಿ. ಹೀಗಾಗಿ ಅವರನ್ನೇ ಬೆಂಬಲಿಸುತ್ತೇವೆ ಎಂದು ಸ್ಥಳೀಯ ಕಾಂಗ್ರೆಸ್ಸಿಗರು ಶಪಥಗೈದಿದ್ದಾರೆ.

ಇನ್ನು ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ನೀವು ಮಂಡ್ಯದಲ್ಲಿ ಜೆಡಿಎಸ್​​ಗೆ ಬೆಂಬಲಿಸಲೇಬೇಕು. ಒಂದು ವೇಳೆ ನೀವು ನಿಖಿಲ್​​​ರನ್ನು ಮಂಡ್ಯದಲ್ಲಿ ಸೋಲಿಸಲು ಮುಂದಾದರೇ; ಅದೇ ಫಲಿತಾಂಶ ಮೈಸೂರಿನಲ್ಲಿ ಕೂಡ ಪ್ರತಿಧ್ವನಿಸಲಿದೆ ಎಂದು ಸಚಿವ ಸಾರಾ ಮಹೇಶ್ ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದ್ದರು.

ಹಾಗೆಯೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​-ಜೆಡಿಎಸ್​​ ನಡುವೇ ಸಹಜವಾಗಿ ಹೋರಾಟ ನಡೆಯುತ್ತದೆ. ಈಗ ನಾವು ಮೈತ್ರಿಯಾಗಿ ಸರ್ಕಾರ ನಡೆಸುತ್ತಿದ್ದೇವೆ. ನೀವು ಹೇಗೆ ಮಂಡ್ಯದಲ್ಲಿ ನಡೆಸಿಕೊಳ್ಳುತ್ತಿರೋ, ಅದೇ ರೀತಿ ನಾವು ಮೈಸೂರಿನಲ್ಲಿ ನಡೆಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವು ನಮ್ಮನ್ನ ಒಮ್ಮೆ ತಬ್ಬಿಕೊಂಡಲ್ಲಿ, ಜೆಡಿಎಸ್​​ ನಿಮ್ಮನ್ನ ಐದು ಬಾರಿ ತಬ್ಬಿಕೊಳ್ಳಲಿದೆ ಎಂದರು.

ಲೋಕಸಭೆ ಚುನಾವಣೆಯಿಂದಲೇ ಕಾಂಗ್ರೆಸ್​​ ಮತ್ತು ಜೆಡಿಎಸ್​​ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಗೊಳ್ಳಬೇಕು. ಯಾವುದೇ ಕಾರಣಕ್ಕೂ ನಿಮ್ಮ-ನಮ್ಮ ನಡುವೇ ಯಾವುದೇ ಭಿನ್ನಾಭಿಪ್ರಾಯ ಬೇಡ. ಎಲ್ಲರೂ ಒಟ್ಟಿಗೆ ಕೆಲಸ ಮಾಡುವ ಮೂಲಕ ನಿಖಿಲ್​​​ ಕುಮಾರ ಸ್ವಾಮಿ ಅವರನ್ನು ಗೆಲ್ಲಿಸಬೇಕು. ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದಿದ್ದರು ಸಚಿವ ಸಾರಾ ಮಹೇಶ್​​ ಕುಮಾರ್​​..

ಈ ಬೆನ್ನಲ್ಲೇ ಮತ್ತೆ ಕಾಂಗ್ರೆಸ್​​ ನಾಯಕರು ಸುಮಲತಾ ಪರವಾಗಿ ಪ್ರಚಾರ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್​​-ಜೆಡಿಎಸ್​​ ನಡುವೇ ಹೇಗೆ ಮೈತ್ರಿಧರ್ಮ ಕೆಲಸ ಮಾಡಲಿದೆ ಎಂದು ನೋಡಬೇಕಿದೆ.

Comments are closed.