ಕರ್ನಾಟಕ

ಮನೆ ಮುಂದೆ ವಾಹನ ನಿಲ್ಲಿಸಿದರೆ ಭಾರೀ ದಂಡ

Pinterest LinkedIn Tumblr


ಬೆಂಗಳೂರು: ಮನೆ ಮುಂದೆ ಕಾರು, ಬೈಕು ನಿಲ್ಲಿಸುವ ಅಭ್ಯಾಸವಿರುವ ಬೆಂಗಳೂರಿಗರೆ, ನಿಮಗೆ ಶಾಕ್‌ ನೀಡುವ ಸುದ್ದಿಯಿದು. ಶೀಘ್ರವೇ ಮನೆ ಮುಂದೆ ನಿಲ್ಲಿಸಿದ ವಾಹನಗಳಿಗೂ ನಿತ್ಯ 200ರಿಂದ 2 ಸಾವಿರದ ವರೆಗೂ ಶುಲ್ಕ ಕಟ್ಟಬೇಕಾದ ಮಾರಕ ಕಾನೂನು ಜಾರಿಗೆ ಬರಲಿದೆ.

ಸಾರಿಗೆ ಇಲಾಖೆಯು ಸಲ್ಲಿಸಿದ್ದ ವಾಹನ ನಿಲುಗಡೆ ವ್ಯವಸ್ಥಾಪನೆ ಹಾಗೂ ನಿರ್ವಹಣೆ ನಿಯಮಾವಳಿ 2018ಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರವೇ ಈ ನೀತಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಾರಿಗೆ ಇಲಾಖೆ ಸಲ್ಲಿಸಿದ್ದ ಈ ನೀತಿಗೆ ಸರ್ಕಾರ ಅನುಮೋದನೆ ನೀಡಿದ್ದು, ಇನ್ನು ಶುಲ್ಕ ವಿಧಿಸುವ ಹೊಣೆ ಹೊತ್ತಿರುವ ಬಿಬಿಎಂಪಿ ಸ್ಥಳೀಯ ನಿವಾಸಿಗಳು ಮತ್ತು ನಿವಾಸಿಗಳ ಸಂಘಗಳ ಜತೆ ಸಮಾಲೋಚನೆ ನಡೆಸಿ ಈ ಕರಡಿಗೆ ಅಂತಿಮ ರೂಪ ನೀಡಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ತಿಂಗಳ ಅವಧಿಯಿದ್ದು, ಅನಂತರ ಈ ನಿಯಮಾವಳಿ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಶುಲ್ಕ: ವಾಹನ ದಟ್ಟಣೆ ಹೆಚ್ಚಿರುವ ರಸ್ತೆ ಸೇರಿ ಇನ್ನಿತರ ಕಡೆಗಳಲ್ಲಿ ಏರಿಯಾ (ಪ್ರದೇಶ ಅನುಗುಣ) ಪಾರ್ಕಿಂಗ್‌ ಪ್ಲ್ಯಾನ್‌ ಜಾರಿಗೊಳಿಸದಂತೆಯೂ ನಿಯಮದಲ್ಲಿ ಸೂಚಿಸಲಾಗಿದೆ. ಅಲ್ಲದೆ, ನಿಗದಿತ ಸ್ಥಳ ಹೊರತುಪಡಿಸಿ ಉಳಿದೆಡೆ ವಾಹನ ನಿಲ್ಲಿಸಿದರೆ ಆ ವಾಹನಗಳನ್ನು ಟೋಯಿಂಗ್‌ ಮಾಡಲು ತಿಳಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಟೋಯಿಂಗ್‌ ಶುಲ್ಕವನ್ನು ನಿಗದಿ ಮಾಡಲಾಗಿದೆ. ಕಾರು, ಬೈಕ್‌, ಆಟೋ, ಹೀಗೆ ವಾಹನಗಳ ಆಧಾರಿಸಿ ಶುಲ್ಕ ನಿಗದಿ ಮಾಡಲಾಗಿದ್ದು, 200ರಿಂದ 2 ಸಾವಿರದವರೆಗೆ ಶುಲ್ಕ ಪಾವತಿಸಬೇಕಾಗಲಿದೆ.

ಜುಲೈ ವೇಳೆಗೆ ಜಾರಿ: ವಾಹನ ನಿಲುಗಡೆ ನೀತಿಯನ್ನು ಹಂತ ಹಂತವಾಗಿ ಜಾರಿಗೊಳಿಸುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ. ಅದರಂತೆ ಮೊದಲ ಹಂತ ಮುಂದಿನ 4 ತಿಂಗಳಲ್ಲಿ ಜಾರಿಗೊಳಿಸಬೇಕಿದೆ. ಮೊದಲ ಹಂತದಲ್ಲಿ ಬೃಹತ್‌ ರಸ್ತೆಗಳು ಸೇರಿ ಇನ್ನಿತರ ದೊಡ್ಡ ಮಟ್ಟದ ವಾಹನ ನಿಲುಗಡೆಗೆ ಅವಕಾಶವಿರುವೆಡೆ ಜಾರಿಗೊಳಿಸಬೇಕಿದೆ. ಅದಕ್ಕೆ ನಗರ ಭೂಸಾರಿಗೆ ನಿರ್ದೇಶನಾಲಯ ತಂತ್ರಜ್ಞಾನದ ನೆರವು ಒದಗಿಸಲಿದೆ.

ಏರಿಯಾ ಪಾರ್ಕಿಂಗ್‌ ಪ್ಲ್ಯಾನ್‌: ವಸತಿ ಪ್ರದೇಶದ ಜತೆಗೆ ವಾಣಿಜ್ಯ ಪ್ರದೇಶ, ಮುಖ್ಯ ರಸ್ತೆಗಳು ಸೇರಿ ಇನ್ನಿತರ ಕಡೆಗಳಲ್ಲಿ ಮೊದಲು ಏರಿಯಾ ಪಾರ್ಕಿಂಗ್‌ ಪ್ಲ್ಯಾನ್‌ ಸಿದ್ಧಪಡಿಸಲಾಗುತ್ತದೆ. ಅದರ ಹೊಣೆಯನ್ನು ಬಿಬಿಎಂಪಿ ವಲಯ ಜಂಟಿ ಆಯುಕ್ತರಿಗೆ ವಹಿಸಲಾಗಿದೆ. ಆಯಾ ವಲಯದ ಸಂಚಾರ ಪೊಲೀಸರು, ಸಾರಿಗೆ ಅಧಿಕಾರಿಗಳು ಸೇರಿ ಪ್ಲ್ಯಾನ್‌ ಸಿದ್ಧಪಡಿಸಿ ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿ ಇನ್ನಿತರ ಅಧಿಕಾರಿಗಳಿರುವ ಅಪೆಕ್ಸ್‌ ಮಾನಿಟರಿಂಗ್‌ ಸಮಿತಿಯಿಂದ ಅನುಮೋದನೆ ಪಡೆಯಬೇಕಿದೆ.

ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದರೆ ಶುಲ್ಕವಿಲ್ಲ: ತಮ್ಮ ಕಟ್ಟಡದಲ್ಲಿ ಪಾರ್ಕಿಂಗ್‌ ಸ್ಥಳ ನಿಗಧಿ ಮಾಡಿಕೊಂಡಿ ಅಲ್ಲಿ ವಾಹನ ನಿಲುಗಡೆ ಮಾಡುವ ವಾಹನಗಳಿಗೆ ಶುಲ್ಕ ವಿಧಿಸುವುದಿಲ್ಲ. ಒಂದು ವೇಳೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದೆ ಶುಲ್ಕ ವಿಧಿಸಲಾಗುತ್ತದೆ

Comments are closed.