ರಾಷ್ಟ್ರೀಯ

20 ವರ್ಷಗಳಿಂದ ದೇವೇಗೌಡರ ದೆಹಲಿ ಪ್ರತಿನಿಧಿ ಬಿಎಸ್ಪಿ ಸೇರ್ಪಡೆ!

Pinterest LinkedIn Tumblr


ನವದೆಹಲಿ: ಜೆಡಿಎಸ್​ ರಾಷ್ಟ್ರೀಯ ಕಾರ್ಯದರ್ಶಿ ದಾನಿಶ್​ ಅಲಿ ಪಕ್ಷ ತೊರೆದು ಬಿಎಸ್​ಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್​ ತೊರೆದು ಉತ್ತರ ಪ್ರದೇಶದಿಂದ ಸ್ಪರ್ಧಿಸಲು ದಾನಿಶ್​ ಅಲಿ ಮುಂದಾಗಿದ್ಧಾರೆ ಎನ್ನಲಾಗಿದೆ. ದಶಕಗಳಿಂದ ಜೆಡಿಎಸ್​ ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಬೇಸರ ಅವರಲ್ಲಿತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೀಗ ಪಕ್ಷ ತೊರೆದು ಮಾಯಾವತಿಯವರ ಬಿಎಸ್​ಪಿ ಪಕ್ಷದಿಂದ ಚುನಾವಣೆ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ದಾನಿಶ್​ ಅಲಿ ಜೆಡಿಎಸ್​ ರಾಜ್ಯಸಭಾ ಸ್ಥಾನ ಕೇಳಿದ್ದರು ಎನ್ನಲಾಗಿದೆ. ಆದರೆ ಜೆಡಿಎಸ್​ನಿಂದ ರಾಜ್ಯಸಭೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಚುನಾವಣಾ ಅದೃಷ್ಟ ಪರೀಕ್ಷೆಗೆ ಅವರೀಗ ಮುಂದಾಗಿದ್ದಾರೆ. ದಾನಿಶ್​ ಅಲಿಯನ್ನು ಬಿಎಸ್​ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್​ ಚಂದ್ರ ಮಿಶ್ರಾ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡರ ಆಪ್ತರೊಬ್ಬರು ಚುನಾವಣೆ ಹೊಸ್ತಿಲಲ್ಲಿರುವಾಗ ಪಕ್ಷಾಂತರ ಮಾಡಿದಂತಾಗಿದೆ.

ಇನ್ನೊಂದು ಮೂಲದ ಪ್ರಕಾರ ದೇವೇಗೌಡರ ಸಮ್ಮತಿಯ ಮೇರೆಗೆ ದಾನಿಶ್​​ ಅಲಿ ಬಿಎಸ್​ಪಿ ಸೇರ್ಪಡೆಯಾಗಿದ್ದಾರೆ. ಬಿಎಸ್​ಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೆ ದಾನಿಶ್​​ ಅಲಿ ಗೆಲುವು ಸಾಧಿಸಬಹುದು. ಅದರ ಜತೆಗೆ ಬಿಎಸ್​ಪಿ ಮತ್ತು ಜೆಡಿಎಸ್​ ಪಕ್ಷಗಳ ನಡುವಿನ ಬಾಂಧವ್ಯವೂ ಬೆಳೆಯಲಿದೆ ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ ಈಗಾಗಲೇ ಅಖಿಲೇಶ್​ ಯಾದವ್​ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ದಾನಿಶ್​​ ಅಲಿ ಉತ್ತರ ಪ್ರದೇಶದ ಹಾಪುರ್ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲೂ ದಾನಿಶ್​​ ಅಲಿ ಪ್ರಮುಖ‌ ಪಾತ್ರ ವಹಿಸಿದ್ದರು. ಜೊತೆಗೆ ರಾಜ್ಯದಲ್ಲಿ ಬಿಎಸ್ ಪಿ-ಜೆಡಿಎಸ್ ಮೈತ್ರಿಯಾಗುವುದಕ್ಕೂ ಪ್ರಮುಖ ಪಾತ್ರವಹಿಸಿದ್ದರು. ಜೆಡಿಎಸ್​​ನಲ್ಲಿದ್ಧಾಗ ದೇವೇಗೌಡರಿಂದ ಏನೂ ಕೇಳಲಿಲ್ಲ. ದೆಹಲಿಯಲ್ಲಿ ಅವರು ಹೇಳಿದ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ್ದೇನೆ. ಮುಂದೆ ಮಾಯಾವತಿ ಹೇಳಿದ ಕೆಲಸ ಮಾಡುತ್ತೇನೆ ಎಂದು ದಾನಿಶ್​​ ಅಲಿ ಟ್ವೀಟ್​ ಮಾಡುವ ಮೂಲಕ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಜೆಡಿಎಸ್ 1 ಸ್ಥಾನವನ್ನು ಬಿಎಸ್ ಪಿಗೆ, ಉತ್ತರಪ್ರದೇಶದಲ್ಲಿ 1 ಸ್ಥಾನವನ್ನು ಜೆಡಿಎಸ್​​​ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ಆಗಿತ್ತು. ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಆದ ಹಿನ್ನೆಲೆಯಲ್ಲಿ ಜೆಡಿಎಸ್ ಗೆ ಟಿಕೆಟ್ ನೀಡಲು ಬಿಎಸ್ ಪಿ ನಕಾರ ಎತ್ತಿತ್ತು. ಹೀಗಾಗಿ ದಾನಿಶ್​ ಅಲಿ ದೇವೇಗೌಡರ ಸಲಹೆ ಮೇರೆಗೆ ಬಿಎಸ್ ಪಿ ಚಿಹ್ನೆಯಡಿ ಉತ್ತರಪ್ರದೇಶದಿಂದ ಸ್ಪರ್ಧಿಸಲಿದ್ಧಾರೆ.

-ಧರಣೀಶ್​​ ಬೂಕನಕೆರೆ

Comments are closed.