ಕರ್ನಾಟಕ

ಲಿಂಗೈಕ್ಯರಾದ ವಿಶ್ವದ ಶ್ರೇಷ್ಠ ಜಂಗಮ ಚಿತ್ರದುರ್ಗದ ‘ರತ್ನ’ ಮಾತೆ ಮಹಾದೇವಿಯ ಸಂಪೂರ್ಣ ಪರಿಚಯ

Pinterest LinkedIn Tumblr


ಬೆಂಗಳೂರು: ಲಿಂಗೈಕ್ಯರಾಗಿರುವ ಮಾತೆ ಮಹಾದೇವಿ ಅವರ ಬದುಕು ಅಧ್ಯಯನಯೋಗ್ಯ. 1946, ಮಾರ್ಚ್ 13ರಂದು ಚಿತ್ರದುರ್ಗದ ಸಾಲಹಟ್ಟಿಯಲ್ಲಿ ಗಂಗಮ್ಮ ಮತ್ತು ಡಾ. ಬಸಪ್ಪ ದಂಪತಿಗೆ ಜನಿಸಿದವರು ಮಾತೆ ಮಹಾದೇವಿ. ಇವರ ಪೂರ್ವಾಶ್ರಮದ ಹೆಸರು ರತ್ನ. ಗುರು ಲಿಂಗಾನಂದ ಅವರಿಂದ ಸ್ಫೂರ್ತಿ ಪಡೆದು 1996ರಲ್ಲಿ ರತ್ನ ಅವರು ಜಂಗಮ ದೀಕ್ಷೆ ಪಡೆದು ಮಾತೆ ಮಹಾದೇವಿಯಾದರು.

ಅರವತ್ತರ ದಶಕದಿಂದಲೇ ಬಸವಧರ್ಮ ತತ್ವಗಳ ಬಗ್ಗೆ ಅಪರಿಮಿತ ಆಸಕ್ತಿ ಬೆಳೆಸಿಕೊಂಡಿದ್ದ ಮಾತೆ ಮಹಾದೇವಿ ಅವರು ಜಂಗಮ ದೀಕ್ಷೆ ಪಡೆದ ಬಳಿಕ ಸಾಕಷ್ಟು ಧರ್ಮಸೇವೆಗಳನ್ನು ಮಾಡಿದ್ದಾರೆ. 1970ರಲ್ಲಿ ಅಕ್ಕ ಮಹಾದೇವಿ ಅನುಭವ ಪೀಠ ಸ್ಥಾಪಿಸಿದರು. ಇದು ವಿಶ್ವದ ಮೊತ್ತಮೊದಲ ಮಹಿಳಾ ಜಗದ್ಗುರು ಪೀಠವಾಗಿದೆ. ಇದರ ಪೀಠಾಧ್ಯಕ್ಷರಾಗಿ ಮಾತೆ ಮಹಾದೇವಿ ಅವರು ವಿಶ್ವದ ಮೊದಲ ಮಹಿಳಾ ಜಂಗಮರೆನಿಸಿದ್ದಾರೆ. ಹಾಗೆಯೇ, ಮಾತೆ ಮಹಾದೇವಿ ಅವರು “ಬಸವ ತತ್ವ ದರ್ಶನ”, “ಹೆಪ್ಪಿಟ್ಟ ಹಾಲು” ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ಧಾರೆ.

ಧಾರವಾಡದಲ್ಲಿ ಅಕ್ಕ ಮಹಾದೇವಿ ಆಶ್ರಮ, ಬೀದರ್​ನ ಬಸವಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯಪೀಠ ಮತ್ತು 108 ಅಡಿ ಬಸವಣ್ಣ ಮೂರ್ತಿ; ಮಹಾರಾಷ್ಟ್ರದ ಕೊಲ್ಹಾಪುರದ ಅಲ್ಲಮ ಗಿರಿಯಲ್ಲಿ ಅಲ್ಲಮಪ್ರಭು ಯೋಗಪೀಠ, ದೆಹಲಿಯಲ್ಲಿ ಬಸವ ಧರ್ಮ ಪೀಠದ ಶಾಖೆ, ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ, ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ ಹೀಗೆ ಹಲವು ಕಾರ್ಯಗಳನ್ನು ಮಾತೆ ಮಹಾದೇವಿ ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದಾರೆ.

ಹಾಗೆಯೇ ಅಮೆರಿಕ, ಇಂಗ್ಲೆಂಡ್ ಮೊದಲಾದ ವಿದೇಶಗಳಲ್ಲಿ ಮಾತೆ ಮಹಾದೇವಿ ಅವರು ಬಸವತತ್ವದ ಪ್ರಚಾರ ಮಾಡಿದ್ದಾರೆ.

ಬಸವಧರ್ಮ ಪ್ರಚಾರಕ್ಕೆ ಮತ್ತು ಸೇವೆಗೆ ತಮ್ಮಿಡೀ ಜೀವನ ಮುಡಿಪಾಗಿಟ್ಟ ಮಾತೆ ಮಹಾದೇವಿ ಇತ್ತೀಚೆಗೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಪಾಲ್ಗೊಂಡು ಹೆಚ್ಚು ಸುದ್ದಿಯಾಗಿದ್ದರು. ಬಸವ ಧರ್ಮ ಹಿಂದೂ ಧರ್ಮಕ್ಕಿಂತ ಭಿನ್ನವಾಗಿರುವುದರಿಂದ ಇದಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಬೇಕೆಂದು ಪ್ರತಿಪಾದಿಸುತ್ತಿರುವವರಲ್ಲಿ ಮುಂಚೂಣಿಯಲ್ಲಿದ್ದವರು ಮಾತೆ ಮಹಾದೇವಿ. ಅವರ ಪ್ರತ್ಯೇಕ ಧರ್ಮದ ಕನಸು ನನಸಾಗುವಷ್ಟರಲ್ಲಿ ಲಿಂಗೈಕ್ಯರಾಗಿದ್ದಾರೆ.

ಮಾತೆ ಮಹಾದೇವಿ ನಡೆದು ಬಂದ ಹಾದಿ (1946 – 2019)

* ಜನನ: ಬುಧವಾರ, 13 ಮಾರ್ಚ್ 1946

* ತಂದೆ: ಶರಣ ಡಾ. ಬಸಪ್ಪನವರು; ತಾಯಿ: ಶರಣೆ ಗಂಗಮ್ಮನವರು

* ಜನ್ಮನಾಮ : ರತ್ನ

*ಜನ್ಮಸ್ಥಳ:- ಚಿತ್ರದುರ್ಗ ತಾಲೂಕಿನ ಸಾಸಲಟ್ಟಿ ಗ್ರಾಮ..

*ಶಿಕ್ಷಣ:ಎಂ ಎ ತತ್ವಶಾಸ್ತ್ರ.

*ಪೂಜ್ಯ ಶ್ರೀ ಸದ್ಗುರು ಲಿಂಗಾನಂದ ಸ್ವಾಮೀಜಿಯವರನ್ನು ಚಿತ್ರದುರ್ಗದಲ್ಲಿ ಮೊದಲ ಭೇಟಿ ಮಾಡಿದ್ದು 12-2 1965.

*ಬಿ.ಎಸ್ಸಿ. ಪದವಿ ಪಡೆದುದು – 1965

*ತಮ್ಮ ಜೀವನವನ್ನು ಪೂರ್ಣವಾಗಿ ಆಧ್ಯಾತ್ಮಿಕಕ್ಕೆ ಮೀಸಲಿಟ್ಟು ಹಾಗೂ ಬಸವ ಧರ್ಮಪ್ರಚಾರಕ್ಕೆ ಸಮರ್ಪಿಸಿಕೊಳ್ಳಲು ನಿರ್ಧರಿಸಿ ಮನೆ ಬಿಟ್ಟಿದ್ದು ,ದಿನಾಂಕ : 19-8-1965ರಂದು.

*ಇಷ್ಟಲಿಂಗ ದೀಕ್ಷೆ : ಪರಮ ಪೂಜ್ಯ ಸದ್ಗುರು ಲಿಂಗಾನಂದ ಮಹಾಸ್ವಾಮೀಜಿಯವರಿಂದ, (ದಿನಾಂಕ : 21-8-1965.)

*ತ್ಯಾಗ ಜೀವನಕ್ಕೆ ಕಾಲಿರಿಸಿ ಪೂಜ್ಯ ಸದ್ಗುರು ಲಿಂಗಾನಂದ ಮಹಾಸ್ವಾಮೀಜಿಯವರಿಂದ ಜಂಗಮ ದೀಕ್ಷೆ ಪಡೆದುದು ದಿನಾಂಕ 5-4-1966 (ಜಗನ್ಮಾತೆ ಅಕ್ಕಮಹಾದೇವಿ ಜಯಂತಿಯಂದು)

*ಋಷಿಕೇಶದಲ್ಲಿ ಸಾಧನೆ ಗಂಗಾತರಂಗ ಪುಸ್ತಕ ರಚನೆ 1966ರಲ್ಲಿ

*ಬಸವ ತತ್ವ ದರ್ಶನ ಬೃಹತ್ ಗ್ರಂಥ ಕೇವಲ 3 ತಿಂಗಳಲ್ಲಿ (ಮೇ-ಜುಲೈ1967) ರಚನೆ

*1968 ಎಪ್ರಿಲ್ 13 ಜಗನ್ಮಾತೆ ಅಕ್ಕಮಹಾದೇವಿ ಜಯಂತಿಯಂದು ಧಾರವಾಡದಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಅಶ್ರಮ ಸ್ಥಾಪನೆ.

*14-1-1970 ಲಿಂಗಾಂಗಯೋಗಿ ಸಿದ್ದರಾಮೇಶ್ವರ ಜಯಂತಿಯಂದು ಕಲ್ಯಾಣ ಕಿರಣ ಮಾಸ ಪತ್ರಿಕೆಯ ಮೊದಲ ಸಂಚಿಕೆ ಬಿಡಗಡೆ..

*ದಿನಾಂಕ : 21- 4- 1970 ಜಯಂತಿಯಂದು ಧಾರವಾಡದಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಅನುಭಾವ ಪೀಠ ಎಂಬ ಐತಿಹಾಸಿಕ ಮೊಟ್ಟಮೊದಲ ಮಹಿಳಾ ಜಗದ್ಗುಪೀಠ ಸ್ಥಾಪನೆ. ಪೂಜ್ಯ ಶ್ರೀ ಸದ್ಗುರು ಲಿಂಗಾಂದ ಮಹಾಸ್ವಾಮೀಜಿಯವರಿಂದ ಪ್ರಥಮ ಪೀಠಾಧ್ಯಕ್ಷರಾಗಿ ಪೂಜ್ಯ ಶ್ರೀ ಮಾತಾಜಿಯವರ ಪ್ರತಿಜ್ಞಾವಿದಿ ಸ್ವೀಕಾರ .

*ದಿನಾಂಕ 9-12-1973ಸಾಮಾಜಿಕ ಕಾದಂಬರಿ ಹೆಪ್ಪಿಟ್ಟ ಹಾಲು ಪುಸ್ತಕ ಬಿಡಗಡೆ. ಈ ಕೃತಿಗೆ ರಾಜ್ಯ ಸಾಹಿತ್ಯ ಆಕಾಡೆಮಿ ಪುರಸ್ಕಾರ

*ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ನಿರ್ಮಾಣ ಹಾಗೂ ದಿನಾಂಕ 4-5-1975ರ ಬಸವ ಜಯಂತಿಯಂದು ಉದ್ಘಾಟನೆ.

*14-5-1976 ಬವಸವ ಧರ್ಮ ಪ್ರಚಾರಾರ್ಥ ಇಂಗ್ಲೆಂಡ್ ಪ್ರವಾಸ..

*ವಿಶ್ವ ಕಲ್ಯಾಣ ಮಿಷನ್ (ಟ್ರಸ್ಟ) ಸಂಸ್ಥೆ ಸ್ಥಾಪನೆ -1977.

*ದಿನಾಂಕ : 6-10-1978 ಬೆಂಗಳೂರಿನ ಕುಂಬಳಗೋಡಿನಲ್ಲಿ 25 ಎಕರೆ ಜಾಗ ಖರಿದಿಸಿದ್ದು, ಧಾರ್ಮಿಕ ಚಟುವಟಿಕೆಗಳಿಂದ ಕೂಡಿದ ಬಸವ ಗಂಗೋತ್ರಿ ಆಶ್ರಮ ನಿರ್ಮಾಣ.

*ಬಸವ ಧರ್ಮ ಪ್ರಚಾರಾರ್ಥ ಅಮೇಕ ಪ್ರವಾಸ : 1980-1981

*ಗುರು ಬಸವಣ್ಣನವರ ಜೀವನ ಚರಿತ್ರೆಯನ್ನು ಸಿನಿಮಾ ಮಾಧ್ಯಮದ ಮೂಲಕ ಪ್ರಚಾರ ಮಾಡಲು ಕ್ರಾಂತಿಯೊಗಿ ಬಸವಣ್ಣ ಚಲನಚಿತ್ರ ನಿರ್ಮಾಣ, ದಿನಾಂಕ : 3- 8 1983

*1987 ನಾರಾಯನಪುರ ಆಣೆಕಟ್ಟಿನ ಹಿನ್ನೀರಿನಿಂದ ಆವೃತವಾದ ಕೂಡಲ ಸಂಗಮದ ಸಂಗಮೇಶ್ವರ ದೇವಾಲಯವನ್ನು ಬೇರೆಕಡೆಗೆ ವರ್ಗಾಯಿಸದಂತೆ,ದೇವಾಲಯದ ಆಡಳಿತವನ್ನು ಸರ್ಕಾರವು ವಹಿಸಿಕೊಳ್ಳುವಂತೆ ಕೂಡಲ

ಸಂಗಮ ಕ್ಷೇತ್ರದ ಅಬಿವೃದ್ದಿಗಾಗಿ ಆಗ್ರಹಿಸಿ ಯಶಸ್ವಿ ಹೋರಾಟ.

*ಕೂಡಲ ಸಂಗಮ ಲಿಂಗಾಯತ ಧರ್ಮದ ಧರ್ಮ ಕ್ಷೇತ್ರ ಎಂದು ಘೋಷಣೆ.

*1988 ಜನೇವರಿ 13, 14, 15, ರಂದು ಕೂಡಲ ಸಂಗಮದಲ್ಲಿ ಐತಿಹಾಸಿಕ ಮೊದಲನೆಯ ಶರಣ ಮೇಳ. 2 ಲಕ್ಷಕ್ಕೂ ಹೆಚ್ಚು ಜನರನ್ನು ಆಕರ್ಷಿಸಿತು.

*ರಾಷ್ಟ್ರಿಯ ಬಸವದಳ ಪುನರ್ಘಟನೆ 1988 ಜನೇವರಿ 13.

1992 ಜನೇವರಿ 13ರಂದು ಕೂಡಲ ಸಂಗಮದಲ್ಲಿ ಬಸವ ಧರ್ಮದ ಪರಮೋಚ್ಚ ಪೀಠ ಸ್ಥಾಪನೆ ಬಸವ ಧರ್ಮದ ಮಹಾಜಗದ್ಗುರು ಪೀಠದ ಪ್ರಥಮಪೀಠಾದ್ಯಕ್ಷರಾಗಿ ಪರಮ ಪೂಜ್ಯ ಲಿಂಗಾನಂದ ಮಹಾಸ್ವಾಮೀಜಿಯವರಿಂದ ಪೀಠಾರೋಹಣ..

*1992- ಪ್ರಥಮ ಬಸವ ಧರ್ಮ ಸಮ್ಮೇಳನ ಉಟಿಯಲ್ಲಿ (ತಮಿಳುನಾಡು)

* 1994- ದ್ವಿತಿಯ ಬಸವ ಧರ್ಮ ಸಮ್ಮೇಳನ (ಹೈದರಾಬಾದ್)

*1995- ತೃತಿಯ ಬಸವ ಧರ್ಮ ಸಮ್ಮೇಳನ (ಬೆಂಗಳೂರು)

*20-6-1995. ಪೂಜ್ಯ ಶ್ರೀ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿಗಳವರ ಲಿಂಗೈಕ್ಯ

* ಮಹಾಜಗದ್ಗುರು ಪೀಠದ 2ನೇಯ ಜಗದ್ಗುರುವಾಗಿ ಪೂಜ್ಯ ಮಾತಾಜಿಯವರಿಂದ ಪೀಠಾರೋಹಣ ದಿನಾಂಕ : 13 -1 -1996.

*ಬಸವ ಧರ್ಮದ ಅನುಯಾಯಿಗಳ ಪವಿತ್ರ ಧರ್ಮಕ್ಷೇತ್ರ ಕೂಡಲ ಸಂಗಮದ ಮಹಾಮನೆ ಮಹಾಮಠದಲ್ಲಿ ಬಸವ ಧರ್ಮಾನುಯಾಯಿಗಳ ಎಕತೆಯ ಕುರುಹಾದ ಮತ್ತು ಸಾಕ್ಷಿಯಾದ ಘಣಲಿಂಗದ ಸ್ಥಾಪನೆ ದಿನಾಂಕ : 14-1-1996.

*ಜಗನ್ಮಾತಾ ಅಕ್ಕಮಹಾದೇವಿ ಮಹಿಳಾ ಜಗದ್ಗುರು ಪೀಠಕ್ಕೆ 2ನೇಯ ಮಹಿಳಾ ಜಗದ್ಗುರುವನ್ನಾಗಿ ಪೂಜ್ಯ ಶ್ರೀ ಜಗದ್ಗುರು ಮಾತೆಗಂಗಾದೇವಿಯವರನ್ನು ಪೀಠಾರೋಹಣ ಮಾಡಿಸಿದುದು ದಿನಾಂಕ : 14-4-1996.

* 1996- ನಾಲ್ಕನೆಯ ಬಸವ ಧರ್ಮ ಸಮ್ಮೇಳನ (ಧಾರವಾಡ).

*ಶುದ್ದೀಕರಣಗೊಂಡ ವಿಶ್ವಗುರು ಬಸವಣ್ಣನವರ ವಚನಗಳ ಸಂಗ್ರಹ ‘ಬಸವ ವಚನ ದೀಪ್ತಿ’ಯ ಬಿಡುಗಡೆ ಅದರಲ್ಲಿ ‘ಕೂಡಲ ಸಂಗಮದೇವ’ ವಚನಾಂಕಿತದ ಬದಲಿಗೆ ಏಕೇಶ್ವರವಾದ ಮತ್ತು ಎಕದೇವೋಪಾಸನೆ ಪ್ರತಿನಿದಿಸುವ ‘ಲಿಂಗದೇವ’ ವಚನಾಂಕಿತದ ಸೇರ್ಪಡೆ ದಿನಾಂಕ : 9-8-1996.

*ದೆಹಲಿಯಲ್ಲಿ ಬಸವೇಶ್ವರ ದಿವ್ಯಜ್ಞಾನ ವಿದ್ಯಾಲಯ ಸ್ಥಾಪನೆ ದಿನಾಂಕ : 3-11-1996.

*ಪೂಜ್ಯ ಮಾತಾಜಿಯವರ ಪ್ರೇರಣೆಯಿಂದ ಸಿದ್ದವಾದ ವಿಶ್ವಗುರು ಬಸವಣ್ಣನವರ ಲಿಂಗೈಕ್ಯ ಅಷ್ಟಶತಮಾನೋತ್ಸವ ನಿಮಿತ್ಯ ನವದೆಹಲಿಯಲ್ಲಿ 2 ರೂ ಬೆಲೆಯ ಬಸವಣ್ಣನವರ ಅಂಚೆ ಚೀಟಿ ಬಿಡುಗಡೆ (ದಿನಾಂಕ. 8-8-1997)

* 1997- 5ನೇಯ ಬಸವ ಧರ್ಮ ಸಮ್ಮೇಳನ ದೆಹಲಿಯಲ್ಲಿ.

*1998 – 6ನೇಯ ಬಸವ ಧರ್ಮ ಸಮ್ಮೇಳನ ಮುಂಬಯಿಯಲ್ಲಿ

*2001 ಡಿಸೆಂಬರ್ – ಬಸವ ಕಲ್ಯಾಣದಲ್ಲಿ ಜಾಗ ಖರೀದಿ

* 2002 -ಬಸವ ಕಲ್ಯಾಣದಲ್ಲಿ ಮೊದಲನೆಯ ಕಲ್ಯಾಣ ಪರ್ವ ಕಾರ್ಯಕ್ರಮ. ಐತಿಹಾಸಿಕ ಅಲ್ಲಮ ಪ್ರಭು ಶೂನ್ಯ ಪೀಠ ಸ್ಥಾಪನೆ ದಿನಾಂಕ : 30-4-2002.

*2004 ಬಸವ ಧರ್ಮ ಪ್ರಚಾರಾರ್ಥ 2ನೇಯ ಸಲ ಅಮೇರಿಕ ಪ್ರವಾಸ.

* ಬಸವ ಕಲ್ಯಾಣದಲ್ಲಿ 5ಕೋಟಿ ರೂ. ವೆಚ್ಚದಲ್ಲಿ 108 ಅಡಿ ಬಸವಣ್ಣನವರ ಮೂರ್ತಿಯ ನಿರ್ಮಾಣ ಕಾರ್ಯದ ಪ್ರಾರಂಭೋತ್ಸವ ದಿನಾಂಕ: 1-9-2004.

*2005 ಪ್ರಥಮ ಲಿಂಗಾಯತ ಧರ್ಮ ಸಮ್ಮೇಳನ ದೆಹಲಿಯಲ್ಲಿ.

*2006 ಈಚಲಕರಂಜಿಯ ಅಲ್ಲಮಪ್ರಭು ಗಿರಿಯಲ್ಲಿ 15 ಎಕರೆ ಜಾಗ ಖರೀದಿ

*2006 ಅಲ್ಲಮಪ್ರಭು ಗಿರಿಯಲ್ಲಿ ಪ್ರಥಮ ಲಿಂಗಾಯತ ಗಣಮೇಳ ಪ್ರಾರಂಭ ಯುಗಾದಿಯಂದು ವಿಶೇಷ ಸಮಾವೇಶ.

*ನವದೆಹಲಿಯ ಮಹಾವೀರ ಎನ್​ಕ್ಲೇವ್ದ್ ಬೆಂಗಾಲಿ ಕಾಲೋನಿಯಲ್ಲಿ ಬಸವ ಮಂಟಪ ಉದ್ಘಾಟನೆ ದಿನಾಂಕ : 24-12-2006

*2008ರಲ್ಲಿ ಎಪ್ರಿಲ್ ಚೆನ್ನೈನಲ್ಲಿ 2ನೇ ಲಿಂಗಾಯತ ಧರ್ಮ ಸಮ್ಮೇಳನ

*2011 ಪೂಣಾದಲ್ಲಿ 3ನೇ ಲಿಂಗಾಯತ ಧರ್ಮ ಸಮ್ಮೇಳನ

*2013 ದೆಹಲಿಯಲ್ಲಿ ಲಿಂಗಾಯತ ರ್ಯಾಲಿ

*ಕೂಡಲಸಂಗಮದಲ್ಲಿ ಬಸವ ಕೃಪಾ ಅನಾಥಾಲಯ

*2013 ಕೂಡಲಸಂಗಮ ಬಸವ ಭಾರತಿ ಪ್ರಾಥಮಿಕ ಶಾಲೆ ಆರಂಭ.

* 2014 ಕೂಡಲಸಂಗಮದಲ್ಲಿ ಬಸವ ಭಾರತಿ ಪ್ರೌಢ ಶಾಲೆ ಆರಂಭ

*2015 ಕೂಡಲಸಂಗಮದಲ್ಲಿ ಬಸವ ಭಾರತಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಆರಂಭ

* 2018 ಡಿಸೆಂಬರ್​ನಲ್ಲಿ ದೆಹಲಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಕ್ಕಾಗಿ ಬೃಹತ್ ರ್ಯಾಲಿ, ಆಂದೋಲನ..

* 2019 ಜನವರಿಯಲ್ಲಿ ನಡೆದ ಅನಾರೋಗ್ಯ ಮಧ್ಯೆಯೂ ಕೂಡಲಸಂಗಮದಲ್ಲಿ ನಡೆದ 32 ನೇ ಶರಣ ಮೇಳದಲ್ಲಿ ಭಾಗಿ, ಅಲ್ಲಿಯೇ ಕೊನೆಯ ಬಹಿರಂಗ ಭಾಷಣ

Comments are closed.