ರಾಷ್ಟ್ರೀಯ

ಬಿಜೆಪಿ ಜೊತೆ ಮೈತ್ರಿ ಘೋಷಣೆ: ಎಜಿಪಿಯಲ್ಲಿ ಬಂಡಾಯ

Pinterest LinkedIn Tumblr


ಗುವಾಹತಿ: ಎನ್​ಆರ್​ಸಿ ವಿಚಾರವಾಗಿ ಬಿಜೆಪಿ ಜೊತೆ ಮುನಿಸಿಕೊಂಡಿದ್ದ ಅಸಾಮ್ ಗಣ ಪರಿಷದ್ (ಎಜಿಪಿ) ಈಗ ಸಿಟ್ಟನ್ನು ಅದುಮಿಟ್ಟು ಬಿಜೆಪಿ ಜೊತೆ ಸಖ್ಯ ಮುಂದುವರಿಸಲು ನಿರ್ಧರಿಸಿದೆ. ಅಸ್ಸಾಮ್​ನಲ್ಲಿ ಬಿಜೆಪಿ ಮತ್ತು ಎಜಿಪಿ ಪಕ್ಷಗಳು ಚುನಾವಣೆಪೂರ್ವ ಮೈತ್ರಿ ಮಾಡಿಕೊಂಡಿವೆ. ನಾರ್ಥ್ ಈಸ್ಟ್ ಡೆಮಾಕ್ರಟಿಕ್ ಅಲಾಯನ್ಸ್ (ಎನ್​ಇಡಿಎ) ಸಂಚಾಲಕ ಹಿಮಂತ ಬಿಸ್ವ ಸರ್ಮಾ ಹಾಗೂ ಬಿಜೆಪಿ ನಾಯಕ ರಾಮ ಮಾಧವ್ ಅವರು ಇವತ್ತು ಈಶಾನ್ಯ ರಾಜ್ಯಗಳ ಎನ್​ಡಿಎ ಪಾಲುದಾರ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಬಿಜೆಪಿ-ಎಜಿಪಿ ಮೈತ್ರಿ ಘೋಷಣೆಯಾಗುತ್ತಿದ್ದಂತೆಯೇ ಎಜಿಪಿಯ ಇಬ್ಬರು ಹಿರಿಯ ಮುಖಂಡರು ಬಂಡಾಯವೆದ್ದಿದ್ದಾರೆ. ಲಾಚಿತ್ ಬಾರ್ದೋಲೋಯ್ ಮತ್ತು ಹೆಮೆನ್ ಬೋರಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಪ್ರಫುಲ್ಲಾ ಕುಮಾರ್ ಮೊಹಂತಾ ಅವರೂ ಎಜಿಪಿ ನಾಯಕತ್ವವನ್ನು ಬಲವಾಗಿ ಟೀಕಿಸಿದ್ದಾರೆ.

ಲಾಚಿತ್ ಬಾರ್ದೋಲೋಯ್ ಅವರು ಎಜಿಪಿ ನಾಯಕರನ್ನು ಸಮಯಸಾಧಕರೆಂದು ಬಣ್ಣಿಸಿದ್ದಾರೆ. “ಸಮಯಸಾಧಕ ಎಜಿಪಿ ನಾಯಕರೇ ನಿಮಗೆ ಅಭಿನಂದನೆಗಳು… ನಿಮ್ಮ ಹಾಗೂ ಪಕ್ಷದ ನಕಲಿ ಪ್ರಾದೇಶಿಕ ಅಸ್ಮಿತೆಯ ಮುಖವಾಡ ಕಳಚಿದೆ. ಇವತ್ತಿನಿಂದ ನೀವು ನಮ್ಮ 855 ಬಲಿದಾನಿಗಳ ಬಗ್ಗೆ ಮಾತನಾಡುವಂತಿಲ್ಲ. ನಮ್ಮ ಹೃದಯದಿಂದ ಎಜಿಪಿಯನ್ನು ಕಿತ್ತೊಗೆಯುತ್ತಿದ್ದೇವೆ. ಪ್ರಾದೇಶಿಕತೆಯ ತತ್ವದ ಬಗ್ಗೆ ನಂಬಿಕೆ ಇದ್ದವರೆಲ್ಲರೂ ಒಂದಾಗುವ ಕಾಲ ಬಂದಿದೆ,” ಎಂದು ಲಾಚಿತ್ ಅವರು ಟ್ವೀಟ್ ಮಾಡಿದ್ದಾರೆ.

ಎಜಿಪಿ ಸಂಸ್ಥಾಪಕ ಹಾಗೂ ಮಾಜಿ ಸಿಎಂ ಪ್ರಫುಲ್ ಕುಮಾರ್ ಮಹಂತಾ ಅವರು ಎನ್​ಆರ್​ಸಿ ಯೋಜನೆಯನ್ನು ಬಲವಾಗಿ ವಿರೋಧಿಸಿದ್ದಾರೆ. ಈ ಮಸೂದೆ ಜಾರಿಗೆ ಬಂದರೆ ಅಸ್ಸಾಮ್​ನಲ್ಲಿ ಬರೀ ಬಾಂಗ್ಲಾದೇಶೀಯರೇ ತುಂಬಿಹೋಗುತ್ತಾರೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಜೊತೆ ಮೈತ್ರಿ ಮುಂದುವರಿಸುವ ಎಜಿಪಿ ನಿರ್ಧಾರದ ಬಗ್ಗೆ ಕಾಂಗ್ರೆಸ್ ಬೇಸರಗೊಂಡಿದೆ. ಎನ್​ಡಿಎಯನ್ನು ಸೋಲಿಸಲು ತನ್ನ ಜೊತೆ ಕೈಜೋಡಿಸುವಂತೆ ಕಾಂಗ್ರೆಸ್ ಪಕ್ಷವು ಎಜಿಪಿಗೆ ಸಾಕಷ್ಟು ಮನವಿ ಮಾಡಿಕೊಂಡಿತ್ತು. ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ-ಎಜಿಪಿ ಸಖ್ಯ ಮುಂದುವರಿಯುತ್ತಿದೆ.

ಎಜಿಪಿ ತನ್ನ ಅಂತ್ಯಕ್ಕೆ ನಾಂದಿ ಹಾಡಿದೆ. ಅಸ್ಸಾಮ್ ಜನರನ್ನು ವಂಚಿಸಿದ್ದಕ್ಕೆ ಆ ಪಕ್ಷದ ಮುಖಂಡರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ಕೆಂಡಕಾರಿದೆ.

ಅಸ್ಸಾಮ್ ಸೇರಿದಂತೆ ಈಶಾನ್ಯ ಪ್ರದೇಶದಲ್ಲಿ ಬಿಜೆಪಿ, ಎಜಿಪಿ ಮೊದಲಾದ ಪಕ್ಷಗಳೆಲ್ಲಾ ಸೇರಿ ನಾರ್ಥ್ ಈಸ್ಟ್ ಡೆಮಾಕ್ರಟಿಕ್ ಆಲಯನ್ಸ್ (ಎನ್​ಇಡಿಎ) ಮೈತ್ರಿಕೂಟ ಮಾಡಿಕೊಂಡಿವೆ. ಈಶಾನ್ಯದಲ್ಲಿ 25 ಲೋಕಸಭಾ ಕ್ಷೇತ್ರಗಳು ಇರುವುದರಿಂದ ಎನ್​ಡಿಎಗೆ ಈ ಮೈತ್ರಿಕೂಟ ಬಹಳ ಮುಖ್ಯವೆನಿಸಿದೆ.

Comments are closed.