ಕರ್ನಾಟಕ

ಹಾಸನ: ಬಿಜೆಪಿ ಅಭ್ಯರ್ಥಿಯಾಗಿ ಎ.ಮಂಜು ಸ್ಪರ್ಧೆ ಅನುಮಾನ?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಎ.ಮಂಜು ಹಾಸನದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ, ಈಗ ಅವರು ಈ ನಿರ್ಧಾರದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಹಾಸನದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಮೇಗೌಡ ಅವರನ್ನು ನಿಲ್ಲಿಸಲು ಪಕ್ಷ ನಿರ್ಧರಿಸಿದೆ.

ಮಂಜು ಬಿಜೆಪಿ ಸೇರುವ ಮೂಲಕ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ ಎನ್ನುವ ಮಾತಿದೆ. ಈ ವಿಚಾರಕ್ಕೆ ಸಂಬಂಧಿಸಿ ಅವರು ಇಂದು ತವರು ಕ್ಷೇತ್ರ ಅರಕಲಗೂಡು ಕಾರ್ಯಕರ್ತರು ಹಾಗೂ ಹಿತೈಷಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬಿಜೆಪಿ ಸೇರ್ಪಡೆ ಸಾಧ್ಯತೆ ಭಾದ್ಯತೆಗಳ ಬಗ್ಗೆ ಅವರು ಚರ್ಚೆ ಮಾಡಲಿದ್ದಾರಂತೆ. ನಂತರ ಹಿತೈಷಿಗಳು ನೀಡುವ ಸಲಹೆ ಆಧರಿಸಿ ಬಿಜೆಪಿ ಸೇರ್ಪಡೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಈ ವರೆಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಅಲ್ಲದೆ, ಮಂಜು ಸೇರ್ಪಡೆಗೆ ಬಿಜೆಪಿ ಜಿಲ್ಲಾ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ. ಹಾಗಾಗಿ ಈ ನಿರ್ಧಾರದಿಂದ ಅವರು ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಹಾಸನ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎ.ಮಂಜು ಸ್ಪರ್ಧಿಸುವುದು ಅನುಮಾನ ಎನ್ನಲಾಗುತ್ತಿದೆ.

ರಾಮೇಗೌಡ ಹಾಸನ ಅಭ್ಯರ್ಥಿ?:

ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿಯಾಗಿ ರಾಮೇಗೌಡ ಸ್ಪರ್ಧಿಸುವ ಸಾಧ್ಯತೆ ಇದೆಯಂತೆ. ಇವರು ಹಾಸನದಿಂದ ಸ್ಪರ್ಧಿಸಿದರೆ ಉತ್ತಮ ಎನ್ನುವ ನಿರ್ಧಾಕ್ಕೆ ಬಿಜೆಪಿ ಬಂದಿದೆ. ಈಗಾಗಲೇ ಅವರ ಹೆಸರನ್ನು ಹೈಕಮಾಂಡ್​ಗೆ ಶಿಫಾರಸ್ಸು ಮಾಡಿದೆ.

ಕೊನೇ ಕ್ಷಣದಲ್ಲಿ ಅಭ್ಯರ್ಥಿ ಹೆಸರು ಬದಲಾವಣೆ?:

ಸದ್ಯ ಹಾಸನದಿಂದ ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್​ ರೇವಣ್ಣ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಹಾಗಾಗಿ, ಅವರ ಎದುರು ಬಲವಾದ ಅಭ್ಯರ್ಥಿ ಇಳಿಸಬೇಕು ಎಂಬುದು ಬಿಜೆಪಿ ಲೆಕ್ಕಾಚಾರ. ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆಯಾದರೂ ಆಶ್ಚರ್ಯವಿಲ್ಲ ಎಂಬುದು ಮೂಲಗಳ ಮಾಹಿತಿ.

Comments are closed.