ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಷ್ ಆಸೆಗೆ ತಣ್ಣೀರೆರಚಿದಂತಾಗಿದ್ದು, ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸುವುದು ಖಚಿತವಾಗಿದೆ. ಈ ಮೊದಲು ಸುಮಲತಾ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದ ಯಶ್ ಮತ್ತು ದರ್ಶನ್ ವಿರುದ್ಧ ಇದೀಗ ಜೆಡಿಎಸ್ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.
ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸುವುದಾಗಿ ಸ್ಯಾಂಡಲ್ವುಡ್ ನಟರಾದ ದರ್ಶನ್ ಮತ್ತು ಯಶ್ ಈ ಮೊದಲು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಸುಮಲತಾ ಪರ ಪ್ರಚಾರಕ್ಕೆ ಚಿತ್ರರಂಗಕ್ಕೆ ‘ಗೋ ಬ್ಯಾಕ್’ ಎಂಬ ಅಭಿಯಾನ ಶುರುಮಾಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ನಿಂದ ಟಿಕೆಟ್ ಸಿಗದಿದ್ದರೆ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸುಮಲತಾ ಮಂಡ್ಯದಲ್ಲಿ ಪ್ರಚಾರಕಾರ್ಯ ಆರಂಭಿಸಿದ್ದಾರೆ.
ಇಂದು ಮಂಡ್ಯದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಏರ್ಪಡಿಸಲಾಗಿದ್ದು, ನಿಖೀಲ್ ಕುಮಾರಸ್ವಾಮಿ ಅವರನ್ನು ದೇವೇಗೌಡರು ಮೈತ್ರಿ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಸಾವಿರಾರು ಜನರು ಸೇರಲಿರುವ ಈ ಸಮಾವೇಶಕ್ಕೆ ಮಂಡ್ಯದಲ್ಲಿ ಭಾರೀ ಸಿದ್ಧತೆ ನಡೆದಿದೆ. ಆದರೆ, ಇದೇ ದಿನ ಸುಮಲತಾ ಕೂಡ ಮಂಡ್ಯದ ಮೇಲುಕೋಟೆ ಭಾಗದಲ್ಲಿ ಮಗ ಅಭಿಷೇಕ್ ಜೊತೆಗೆ ಪ್ರಚಾರ ನಡೆಸಲಿರುವುದು ಅಚ್ಚರಿ ಮೂಡಿಸಿದೆ. ಸಮಾವೇಶದಲ್ಲಿ ಜೆಡಿಎಸ್ ಕಾರ್ಯಕರ್ತರ ಜೊತೆಗೆ ನಿಖಿಲ್ ಮೈತ್ರಿ ಅಭ್ಯರ್ಥಿಯಾಗಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರೂ ಭಾಗವಹಿಸುವ ಸಾಧ್ಯತೆಯಿದೆ. ಹೀಗಿರುವಾಗ ಇಂದೇ ಸುಮಲತಾ ಕೂಡ ಪ್ರಚಾರ ನಡೆಸುತ್ತಿದ್ದಾರೆ.
ಸುಮಲತಾ ಅಂಬರೀಷ್ ಪರ ಪ್ರಚಾರಕ್ಕೆ ಆಗಮಿಸಲಿರುವ ಚಿತ್ರರಂಗದ ಯಶ್ ಮತ್ತು ದರ್ಶನ್ ಅವರ ವಿರುದ್ಧ ಗೋ ಬ್ಯಾಕ್ ಅಭಿಯಾನ ಶುರು ಮಾಡಿರುವ ಜೆಡಿಎಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಮಂಡ್ಯ ಚುನಾವಣಾ ಪ್ರಚಾರಕ್ಕೆ ಬರಬಾರದು ಎಂದಿದ್ದಾರೆ. ಚಿತ್ರರಂಗದವರು ಒಂದು ಪಕ್ಷದಿಂದ ಅಭ್ಯರ್ಥಿಯಾಗಿ ಬೇಕಾದರೂ ರಾಜಕೀಯ ಅಖಾಡಕ್ಕೆ ಇಳಿಯಲಿ. ಯಾವುದೇ ಕಾರಣಕ್ಕೂ ಸುಮಲತಾ ಪರ ಪ್ರಚಾರ ಮಾಡಬಾರದು ಎಂದು ಸಂದೇಶ ರವಾನಿಸಿದ್ದಾರೆ.
ಏಕಾಏಕಿಯಾಗಿ ಬಂದು ಪ್ರಚಾರ ಮಾಡಿ ನಿಖಿಲ್ ಕುಮಾರಸ್ವಾಮಿಯವರನ್ನು ಸೋಲಿಸಲು ಪ್ರಯತ್ನಿಸುವುದು ಸರಿಯಲ್ಲ. ಬೇಕಾದರೆ ಚುನಾವಣೆಗೆ ನೀವೂ ಸ್ಪರ್ಧಿಸಿ, ನಿಮಗೆ ನೀವೇ ಪ್ರಚಾರ ಮಾಡಿಕೊಳ್ಳಿ. ನೀವು ನಟರೆಂದು ನಮಗೆ ಅಭಿಮಾನವಿದೆ. ನೀವು ರಾಜಕೀಯವಾಗಿ ಪ್ರಚಾರಕ್ಕೆ ಬಂದರೆ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಹಾಗಾಗಿ, ಸುಮಲತಾ ಪರ ಪ್ರಚಾರ ಮಾಡಬೇಡಿ. ಒಂದು ವೇಳೆ ಪ್ರಚಾರಕ್ಕೆ ಬರೋದಾದ್ರೆ ನಿಮ್ಮ ವಿರುದ್ದ ಗೋ ಬ್ಯಾಕ್ ಚಳುವಳಿ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಅಮ್ಮನ ಪರ ಮಗ ಪ್ರಚಾರ:
ಸುಮಲತಾ ಅಂಬರೀಷ್ ಪರವಾಗಿ ಫೇಸ್ಬುಕ್ನಲ್ಲಿ ಪ್ರಚಾರ ನಡೆಸುತ್ತಿರುವ ಮಗ ಅಭಿಷೇಕ್ ತನ್ನ ತಾಯಿ ಯಾಕೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದನ್ನು ಹೇಳಿಕೊಂಡಿದ್ದಾರೆ. ಅಪ್ಪ ತೀರಿಕೊಂಡಾಗ ಮಂಡ್ಯಕ್ಕೆ ಬಂದಾಗ ಜನರ ಪ್ರೀತಿಯನ್ನು ಕಂಡು ಅಮ್ಮ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಪ್ಪನನ್ನು ಪ್ರೀತಿಸುತ್ತಿರೋ ಮಂಡ್ಯ ಜನಕ್ಕೆ ನಾವೇನಾದರೂ ಮಾಡಬೇಕು ಅಂತ ಹೇಳುತ್ತಿದ್ದರು. ಈ ಕಾರಣಕ್ಕೆ ಅಮ್ಮ ಇಂದು ಚುನಾವಣೆಗೆ ನಿಂತಿದ್ದಾರೆ. ಅಮ್ಮನ ಮೌಲ್ಯಗಳಿಗಾಗಿ ನಾವು ಕೆಲಸ ಮಾಡೋಣ ಎಂದು ಬರೆದುಕೊಂಡಿದ್ದಾರೆ.
-ರಾಘವೇಂದ್ರ ಗಂಜಾಂ
Comments are closed.