ಕರ್ನಾಟಕ

ಮಂಡ್ಯದ ಋಣ ತೀರಿಸಲು ನಿಖಿಲ್ ನನ್ನು ಚುನಾವಣೆಗೆ ನಿಲ್ಲಿಸಿದ್ದೇನೆ: ಕುಮಾರಸ್ವಾಮಿ

Pinterest LinkedIn Tumblr


ಮಂಡ್ಯ: ಮಂಡ್ಯದ ಜನರ ಋಣ ನನ್ನ ಮೇಲಿದೆ. ನಿಮ್ಮ ಋಣ ತೀರಿಸಲು ನಾನು ಮಗನನ್ನು ಚುನಾವಣೆಗೆ ನಿಲ್ಲಿಸುತ್ತಿದ್ದೇನೆ. ಗೆಲ್ಲಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಜಿಲ್ಲೆಯ ಋಣ ನನ್ನ ಹೃದಯದಲ್ಲಿದೆ. ಮಂಡ್ಯದವರು ನನ್ನನ್ನು ಹೆಮ್ಮರವಾಗಿಸಿದ್ದಾರೆ. ಅಂತೆಯೇ ರಾಮನಗರದ ಜನ ನನ್ನನ್ನು ಒಪ್ಪಿಕೊಂಡು ಬೆಳೆಸಿದ್ದರು. ನಾನು ಹಾಸನದಲ್ಲಿ ಹುಟ್ಟಿದವನು ನೀವುಗಳೇ ನನ್ನ ನಿಜವಾದ ಆಸ್ತಿ. ಮಗನಿಗಾಗಿ ನಾನೆಂದು ಆಸ್ತಿ ಮಾಡಲು ಹೊರಟವನಲ್ಲ. ನನ್ನ ಸಂಪೂರ್ಣ ಬದುಕನ್ನು ಬಡವರಿಗೆ ಮೀಸಲಿಡುತ್ತೇನೆ ಎಂದರು.
ನನ್ನ ಮಗ ಬೇರೆಯಲ್ಲ, ಕಾರ್ಯಕರ್ತರು ಬೇರೆಯಲ್ಲ. ಆದರೆ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗ್ತಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆಯೇ ನಿಖಿಲ್​ ಹೆಸರನ್ನು ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಪ್ರಸ್ತಾಪ ಮಾಡಿದ್ದರು. ನಾನು ಆಗಲೇ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದೆ. ಮಗನನ್ನು ಚುನಾವಣೆಗೆ ನಿಲ್ಲಿಸಲು ನಾನು ಇಚ್ಛಿಸಿರಲಿಲ್ಲ ಎಂದರು.
ನಿಖಿಲ್ ದೆಹಲಿಯಲ್ಲಿ ಸಂಸದನಾಗಿ ಮೆರೆಯುವುದಕ್ಕೆ ಬಂದಿಲ್ಲ. ಮಂಡ್ಯದಲ್ಲೇ ಬದುಕುವುದಕ್ಕೆ ನಿಖಿಲ್ ಬಂದಿದ್ದಾನೆ. ಮಂಡ್ಯ ಜಿಲ್ಲೆಯವರು ಒರಟರಲ್ಲ, ಮುಗ್ಧರು. ನಾವಿರುವವರೆಗೂ ನಿಮಗ್ಯಾವ ತೊಂದರೆಯಾಗುವುದಕ್ಕೂ ಬಿಡುವುದಿಲ್ಲ ಎಂದು ಸಿಎಂ ಆಶ್ವಾಸನೆ ನೀಡಿದರು.
ಇದೇ ವೇಳೆ ಅಂಬರೀಷ್ ಅವರ ​ವಿಚಾರ ಪ್ರಸ್ತಾಪಿಸಿದ ಸಿಎಂ, “ನನ್ನ-ಅಂಬರೀಶ್​ ಪ್ರೀತಿ ಬಗ್ಗೆ ನಿಮಗೇನು ಗೊತ್ತಿದೆ? ಅವರ ತಮ್ಮನಾಗಿ ಅಂದು ನಿಮ್ಮ ಜತೆ ಬೆರೆತಿದ್ದೆ. ಅಂದು ರಕ್ಷಣಾ ಸಚಿವರಿಗೆ ಮನವಿ ಮಾಡಿ ಮಂಡ್ಯಕ್ಕೆ ಪಾರ್ಥಿವ ಶರೀರ ತರಲು ಪ್ರಯತ್ನಿಸಿದ್ದೆ. ಈಗ ಅಂಬರೀಶ್ ಆತ್ಮ ಏನು ಹೇಳುತ್ತದೆ ಯೋಚಿಸಿ? ಆದರೆ ಅಂಬಿ ಅಭಿಮಾನಿಗಳು ನಮ್ಮ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ನನಗೆ ನಿಖಿಲ್ ಬೇರೆಯಲ್ಲ, ಅಂಬರೀಷ್ ಮಗ ಬೇರೆಯಲ್ಲ. ಅಂಬರೀಷ್ ನಿಧನದ ಸುದ್ದಿ ನನಗೆ ಮೊದಲು ನೀಡಿದ್ದೇ ನಿಖಿಲ್ ಎಂದರು.

Comments are closed.