ಕರ್ನಾಟಕ

ಸುಮಲತಾ ಹೊಸ ಹೆಜ್ಜೆ; ಮತದಾರರಿಗೆ ಮತ್ತಷ್ಟು ಹತ್ತಿರ!

Pinterest LinkedIn Tumblr


ಮಂಡ್ಯ ಜನರ ಒತ್ತಾಸೆಗೆ ಕಟ್ಟುಬಿದ್ದು ನಟಿ ಸುಮಲತಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧವಾಗಿದ್ದಾರೆ. ರಾಜಕೀಯ ಅನುಭವವಿಲ್ಲದಿದ್ದರೂ ರಾಜಕಾರಣವನ್ನು ಹತ್ತಿರದಿಂದ ನೋಡಿರುವ ಅವರು ಈಗ ಪಕ್ಕಾ ರಾಜಕೀಯ ತಂತ್ರಗಳನ್ನು ಅನುಸರಿಸುವ ಮೂಲಕ ಪೂರ್ಣ ಪ್ರಮಾಣದ ರಾಜಕಾರಣಕ್ಕೆ ಸಿದ್ಧವಾಗುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ತೋರಿದ ಶ್ರದ್ಧೆ, ಬದ್ಧತೆಯನ್ನು ಅವರು ಈಗ ರಾಜಕೀಯ ಕ್ಷೇತ್ರದಲ್ಲೂ ತೋರಲು ಮುಂದಾಗಿದ್ದಾರೆ.

ಗಂಡ ಅಂಬರೀಷ್​ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಇದರಿಂದ ಅಂತರ ಕಾಯ್ದುಗೊಂಡಿದ್ದ ಸುಮಲತಾಗೆ ನಟನೆ ಹಾಗೂ ಕುಟುಂಬಕ್ಕೆ ಮಾತ್ರ ಸೀಮಿತರಾಗಿದ್ದರು. ರಾಜಕೀಯಕ್ಕೆ ಬರುತ್ತೇನೆಂಬ ಕಲ್ಪನೆಯೂ ಇರದ ಅವರು ಇಂದು ಒಬ್ಬ ಸಕ್ರಿಯ ರಾಜಕಾರಣಿಯಾಗಿ ರೂಪುಗೊಳ್ಳುವ ಪ್ರಯತ್ನದಲ್ಲಿದ್ದಾರೆ. ಅಂಬರೀಷ್​ ನಿಧನದ ನಂತರ ಆದ ಬೆಳವಣಿಗೆಗಳು, ಮಂಡ್ಯ ಜನರ ಒತ್ತಾಸೆ ಮೇರೆಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರ ರಾಜಕೀಯ ಪ್ರವೇಶಕ್ಕೆ ಸಮಸ್ಯೆ-ಸವಾಲುಗಳು ಎದುರಾದರೂ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ ಎಂಬ ಅಚಲ ವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾರೆ.

ರಾಜಕೀಯ ಪ್ರವೇಶ ಪಕ್ಕಾ ಆಗುತ್ತಿದ್ದಂತೆ ಸುಮಲತಾ ಮಾಡಿದ ಮೊದಲ ಕೆಲಸ ಜನಾಭಿಪ್ರಾಯ ಸಂಗ್ರಹ. ಮಂಡ್ಯದ ನಂಟು ಇದ್ದರೂ ಹೆಚ್ಚು ಒಡನಾಟವಿಲ್ಲದ ಸುಮಲತಾ ಈಗ ಮಂಡ್ಯದ ಸೊಸೆ ಬದಲಿಗೆ ಮಗಳಾಗಲು ಹೊರಟ್ಟಿದ್ದಾರೆ. ಜಿಲ್ಲೆಯ ಪ್ರತಿ ಗ್ರಾಮಗಳನ್ನು ಸುತ್ತುವ ಮೂಲಕ ಜನರಿಂದ ಅಭಿಪ್ರಾಯ ಸಂಗ್ರಹಿಸುವ ಮೂಲಕ ಆತ್ಮವಿಶ್ವಾಸದಿಂದ ಹೆಜ್ಜೆ ಇಡುತ್ತಿದ್ದಾರೆ.

ಇದಕ್ಕೂ ಮುನ್ನ ಸಹ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಕಾಂಗ್ರೆಸ್​ ನಾಯಕರ ಸಲಹೆಗೆ ಮುಂದಾಗಿದ್ದ ಅವರಿಗೆ ದೊರೆತಿದ್ದು ನಿರಾಸೆ. ಪರೋಕ್ಷವಾಗಿ ಕೆಲವು ನಾಯಕರು ಬೆಂಬಲ ನೀಡಿದರು. ಮೈತ್ರಿ ಕಾರಣ ನೀಡಿ, ಅವರಿಗೆ ಚುನಾವಣ ರಣಕಣದ ಬಗ್ಗೆ ಅವರ ಉತ್ಸಾಹವನ್ನು ಕುಗ್ಗಿಸಿದ್ದರು. ಜೊತೆಗೆ ಜೆಡಿಎಸ್​ ನಾಯಕರ ವೈಯಕ್ತಿಕ ತೇಜೋವಧೆ ಮಾಡುವ ಹೇಳಿಕೆಗಳ ಮೂಲಕ ಅವರನ್ನು ನೈತಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ನಾನು ಕೀಳುಮಟ್ಟದ ಹೇಳಿಕೆ ನೀಡುವುದಿಲ್ಲ. ಈ ರೀತಿ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ದಿಟ್ಟತನ ಪ್ರದರ್ಶಿಸಿದ್ದರು.

ಈ ಎಲ್ಲ ಕಹಿ ಅನುಭವದ ಜೊತೆಗೆ ತಮ್ಮ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಂಡಿರುವ ಸುಮಲತಾ ತಾಳ್ಮೆ, ಶ್ರದ್ಧೆ, ಕಾಳಜಿ, ಜನ ಬೆಂಬಲದೊಂದಿಗೆ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಚುನಾವಣೆ ಪ್ರಚಾರ ಆರಂಭಿಸಿರುವ ಅವರು, ಇದಕ್ಕಾಗಿ ರಾಜಕಾರಣಿಯಂತೆ ಫೋಟೊಶೂಟ್​ ನಡೆಸಿದ್ದಾರೆ.

ಇದರ ಜೊತೆಗೆ ಈ ಕ್ಷೇತ್ರದಲ್ಲಿ ತಾರಾ ವರ್ಚಸ್ಸು ಹೊಂದಿರುವ ದರ್ಶನ್, ಯಶ್​​ ಅವರನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ಇನ್ನು ಚರಣ್​ ರಾಜ್​ ಸೇರಿದಂತೆ ಅನೇಕ ನಟ-ನಟಿಯರು ಹಾಗೂ ತೆಲುಗು ಚಿತ್ರರಂಗ ಕೂಡ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇನ್ನೊಂದು ಕಡೆ, ವಿದ್ಯಾವಂತ ಮತದಾರರಿಗೆ ಹತ್ತಿರವಾಗುವ ಹಾಗೂ ಕಾಲಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಮತ್ತುಷ್ಟು ಹತ್ತಿರವಾಗಲು ಸಿದ್ಧತೆ ನಡೆಸಿದ್ದಾರೆ. ಅದರ ಬೆನ್ನಲ್ಲೇ ಫೇಸ್​ಬುಕ್​ ಹಾಗೂ ಟ್ವಿಟರ್​ನಲ್ಲಿ ಸದಾ ಜನರಿಗೆ ಕೈಗೆಟುಕುವಂತೆ ನಾನಿರುತ್ತೇನೆ. ನಿಮ್ಮೆಲ್ಲರ ಧ್ವನಿಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಧಿಕೃತ ಪುಟವನ್ನು ತೆರೆದಿರುವ ಸುಮಲತಾ, ಅದನ್ನು ಜನರ ಸಂಪರ್ಕದಲ್ಲಿ ಸದಾ ಇರಲು ಬಳಸುವುದಾಗಿ ಟ್ವೀಟ್​ ಮಾಡಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಸುಮಲತಾ, ಸ್ವಯಂ ಸೇವಕರ ದಾಖಲಾತಿ ಶುರು ಮಾಡಿದ್ಧಾರೆ. ‘ಮಂಡ್ಯ ಚುನಾವಣೆ 2019-ಅಂಬಿ ಅಮರ’ ಹೆಸರಲ್ಲಿ ದಾಖಲಾತಿ ಆರಂಭಿಸಿದ್ದಾರೆ. ಆನ್​ಲೈನ್​ ಮೂಲಕ ನೊಂದಣಿ ಪ್ರಾರಂಭಿಸಿದ್ದು, ಹೆಸರು, ಮೊಬೈಲ್​ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅಂಬಿ ಬೆಂಬಲಿಗರು ಮತದಾರರ ದಾಖಲೆ ಸಂಗ್ರಹಿಸಲಿದ್ದಾರೆ. ಈ ಮೂಲಕ ಬೂತ್​ ಮಟ್ಟದ ಕಾರ್ಯಕರ್ತರ ಬಲಪಡಿಸಲು ಅವರು ಮುಂದಾಗಿದ್ದಾರೆ.

ಅನುಕಂಪದ ಅಲೆ ಹೊರತಾಗಿ ತಮ್ಮದೇ ಛಾಪು ಮೂಡಿಸುವ ಮೂಲಕ ಈಗಾಗಲೇ ಮಂಡ್ಯ ಜನರಿಗೆ ಹತ್ತಿರವಾಗಿರುವ ಸುಮಲತಾ, ಮಂಡ್ಯದ ಗೌಡ್ತಿಯಂತೆ ಗಟ್ಟಿತನ ಪ್ರದರ್ಶಿಸಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Comments are closed.