ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ತನ್ನ ಚೊಚ್ಚಲ ಐಎಸ್ಎಲ್ ಟೂರ್ನಿಯಲ್ಲಿ ಫೈನಲ್ ಏರುವಲ್ಲಿ ಸಫಲವಾಗಿದೆ. ಕಂಠೀರವ ಸ್ಟೇಡಿಯಂನಲ್ಲಿ ಇವತ್ತು ನಡೆದ ಸೆಮಿಫೈನಲ್ನ ಎರಡನೇ ಲೆಗ್ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ 3-0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಎರಡು ಲೆಗ್ನ ಸೆಮಿಫೈನಲ್ನಲ್ಲಿ ಬೆಂಗಳೂರಿಗರು 4-2 ಅಂತರದಿಂದ ಗೆಲುವಿನ ಮಂದಹಾಸ ಬೀರಿದರು. ಮೂರು ದಿನಗಳ ಹಿಂದೆ ನಡೆದ ಮೊದಲ ಲೆಗ್ ಪಂದ್ಯದಲ್ಲಿ ನಾರ್ಥ್ ಈಸ್ಟ್ ತಂಡದವರು 2-1 ಗೋಲುಗಳಿಂದ ಗೆಲುವು ಕಂಡಿದ್ದರು.
ಇಂದು ನಡೆದ ಎರಡನೇ ಲೆಗ್ ಪಂದ್ಯದಲ್ಲಿ ಬೆಂಗಳೂರು ತಂಡದ ಪರ ಮೀಕು, ಡಿಮಾಸ್ ಡೆಲ್ಗಾಡೋ ಮತ್ತು ಸುನೀಲ್ ಛೆಟ್ರಿ ಗೋಲು ಗಳಿಸಿದರು.
ಏಷ್ಯನ್ ಕಪ್ ಟೂರ್ನಿಗೆಂದು ನೀಡಿದ್ದ ಅಲ್ಪವಿರಾಮದ ನಂತರ ಮತ್ತೆ ಶುರುವಾದ ಐಎಸ್ಎಲ್ ಟೂರ್ನಿಯಲ್ಲಿ ಬೆಂಗಳೂರಿಗರು ಯಾವ ಪಂದ್ಯದಲ್ಲೂ ಪ್ರಾಬಲ್ಯ ತೋರಲು ವಿಫಲರಾಗಿದ್ದರು. ಅದಾಗಲೇ ಅಗ್ರಸ್ಥಾನದಲ್ಲಿದ್ದ ಬೆಂಗಳೂರು ಎಫ್ಸಿ ತನ್ನ ಎಂದಿನ ಲಯದಲ್ಲಿ ಆಡಲು ವಿಫಲವಾಗಿತ್ತಾದರೂ ಸೆಮಿಫೈನಲ್ ಅವಕಾಶದಿಂದ ವಂಚಿತವಾಗದಂತೆ ಜಾಗ್ರತೆ ವಹಿಸಿತ್ತು. ಸೆಮಿಫೈನಲ್ನ ಮೊದಲ ಲೆಗ್ ಪಂದ್ಯದಲ್ಲೂ ನಾರ್ಥ್ ಈಸ್ಟ್ನವರೇ ಹೆಚ್ಚು ಆಟ ಆಡಿದ್ದರು. ಆದರೆ, ತವರಿನಲ್ಲಿ ನಡೆದ ಎರಡನೇ ಲೆಗ್ನಲ್ಲಿ ಬೆಂಗಳೂರು ಎಫ್ಸಿ ಅಕ್ಷರಶಃ ಎದುರಾಳಿಗಳನ್ನು ಹತ್ತಿಕ್ಕಿದರು. ಆಡಲೇ ಬೇಕಾದ ಪಂದ್ಯದಲ್ಲಿ ಸ್ಫೂರ್ತಿಯುತ ಆಟವಾಡಿ ಗೆದ್ದು ಮರೆದರು.
ಈ ಪಂದ್ಯದಲ್ಲಿ ಮೊದಲ ಅರ್ಧ ಅವಧಿಯಲ್ಲಿ ಯಾವ ತಂಡವೂ ಗೋಲು ಗಳಿಸಲಿಲ್ಲ. ಆದರೆ, ದ್ವಿತೀಯಾರ್ಧದಲ್ಲಿ ಬೆಂಗಳೂರಿಗರು 3 ಗೋಲುಗಳ ಮಳೆ ಸುರಿಸಿದರು. 72ನೇ ನಿಮಿಷದಲ್ಲಿ ಸ್ಟಾರ್ ಆಟಗಾರ ಮೀಕು ಗೋಲು ಗಳಿಸಿದರೆ, ಡೆಲ್ಗಾಡೋ 87ನೇ ನಿಮಿಷದಲ್ಲಿ ಗೋಲು ಗಳಿಸಿದರು. ನಾರ್ಥ್ ಈಸ್ಟ್ ಗಾಯದ ಮೇಲೆ ಬರೆ ಎಳೆದಂತೆ ಸುನೀಲ್ ಛೇಟ್ರಿ ಹೆಚ್ಚುವರಿ ಸಮಯದಲ್ಲಿ ಗೋಲು ಗಳಿಸಿದರು.
ಮೊದಲ ಲೆಗ್ನಲ್ಲಿ ಒಂದು ಗೋಲಿನ ಮುನ್ನಡೆ ಹೊಂದಿದ್ದ ನಾರ್ಥ್ ಈಸ್ಟ್ ತಂಡದವರು ಈ ಪಂದ್ಯದಲ್ಲಿ ಒಂದೆರಡು ಗೋಲು ಗಳಿಸಿದ್ದರೆ ಬೆಂಗಳೂರಿಗರ ಹಾದಿ ತೀರಾ ಕಠಿಣವಾಗಿರುತ್ತಿತ್ತು. ಆದರೆ, ಬೆಂಗಳೂರು ಇದಕ್ಕೆ ಆಸ್ಪದ ಕೊಡಲಿಲ್ಲ.
ಮತ್ತೊಂದು ಸೆಮಿಫೈನಲ್ನಲ್ಲಿ ಮುಂಬೈ ಸಿಟಿ ಮತ್ತು ಗೋವಾ ತಂಡಗಳು ಮುಖಾಮುಖಿಯಾಗಿವೆ. ಮೊದಲ ಲೆಗ್ನಲ್ಲಿ ಗೋವಾ ತಂಡ 5-1 ಗೋಲುಗಳಿಂದ ಗೆಲುವು ಕಂಡಿರುವ ಹಿನ್ನೆಲೆಯಲ್ಲಿ ಫೈನಲ್ ಏರಲು ನೆಚ್ಚಿನ ತಂಡವೆನಿಸಿದೆ.
ಮಾರ್ಚ್ 17ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಇಂಡಿಯನ್ ಸೂಪರ್ ಲೀಗ್ನಲ್ಲಿ ಚಾಂಪಿಯನ್ ಆದವರು ಎಎಫ್ಸಿ ಕಪ್ ಟೂರ್ನಿಯಲ್ಲಿ ಆಡುವ ಅರ್ಹತೆ ಗಿಟ್ಟಿಸಲಿದ್ದಾರೆ.
ದೇಶದ ಮತ್ತೊಂದು ಪ್ರಮುಖ ಫುಟ್ಬಾಲ್ ಟೂರ್ನಿಯಾಗಿರುವ ಐ-ಲೀಗ್ನ ಈ ಸೀಸನ್ನಲ್ಲಿ ಮಿನರ್ವಾ ಎಫ್ಸಿ ತಂಡ ತನ್ನ ಪದಾರ್ಪಣೆಯಲ್ಲೇ ಚಾಂಪಿಯನ್ ಎನಿಸಿದೆ. ಈ ಐಲೀಗ್ ಚಾಂಪಿಯನ್ ಕೂಡ ಎಎಫ್ಸಿ ಕಪ್ ಟೂರ್ನಿಗೆ ಅರ್ಹತೆ ಪಡೆದಿದೆ.
ಬೆಂಗಳೂರು ಎಫ್ಸಿ ತಂಡ ಕೂಡ ತನ್ನ ಚೊಚ್ಚಲ ಐಲೀಗ್ ಟೂರ್ನಿಯನ್ನು ಗೆದ್ದು ಭಾರತೀಯ ಫುಟ್ಬಾಲ್ ಲೋಕವನ್ನು ನಿಬ್ಬೆರಗಾಗಿಸಿತ್ತು. ಪಕ್ಕಾ ವೃತ್ತಿಪರ ತಂಡವೆಂದು ಖ್ಯಾತವಾದ ಬೆಂಗಳೂರಿಗರು ಐಲೀಗ್ ಮತ್ತು ಎಎಫ್ಸಿ ಟೂರ್ನಿಯಲ್ಲಿ ಅನೇಕ ಮೈಲಿಗಲ್ಲು ಸೃಷ್ಟಿಸಿ ಇದೀಗ ಐಎಸ್ಎಲ್ ಟೂರ್ನಿಗೆ ಅಡಿ ಇಟ್ಟಿದೆ. ಇದರಲ್ಲೂ ಫೈನಲ್ ತಲುಪಿ ಗಮನ ಸೆಳೆದಿದೆ.
Comments are closed.