ಕರ್ನಾಟಕ

ಕಗ್ಗಂಟಾಗಿ ಉಳಿದ ಜೆಡಿಎಸ್-ಕಾಂಗ್ರೆಸ್ ಟಿಕೆಟ್ ಹಂಚಿಕೆ; ಮಾ. 16ಕ್ಕೆ ಅಭ್ಯರ್ಥಿ ಪಟ್ಟಿ ಪ್ರಕಟ?

Pinterest LinkedIn Tumblr


ನವದೆಹಲಿ: ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ಸಿಗೆ ಈಗ ತಲೆನೋವಾಗಿ ಪರಿಣಮಿಸಿರೋದು ಮಿತ್ರಪಕ್ಷ ಜೆಡಿಎಸ್. ತಮ್ಮ ಪಕ್ಷದ ಕೆಲವು ಹಾಲಿ ಸಂಸದರ ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣು ಹಾಕಿರುವುದರಿಂದ ಈ ವಿಚಾರದಲ್ಲಿ ಏನು ಮಾಡಬೇಕೆಂದು ಗೊತ್ತಾಗದೆ ಕಾಂಗ್ರೆಸ್ ತಬ್ಬಿಬ್ಬಾಗಿದೆ‌.‌ ಇವತ್ತು ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಇದೇ ವಿಷಯ ಗಂಟಗಟ್ಟಲೆ ಚರ್ಚೆಯಾಗಿದೆ. ದಿನೇಶ್ ಗುಂಡೂರಾವ್, ಜಿ. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಮಾರ್ಚ್ 16ಕ್ಕೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಹಾಲಿ ಸಂಸದರ ಪರ ಸಿದ್ದರಾಮಯ್ಯ ಬ್ಯಾಟಿಂಗ್:

ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಹಾಲಿ ಸಂಸದರಿಗೆಲ್ಲಾ ಟಿಕೆಟ್ ನೀಡಲೇಬೇಕೆಂದು ಪಟ್ಟು ಹಿಡಿದರು. ಹಾಲಿ ಸಂಸದರಿಗೆ ಟಿಕೆಟ್ ಕೊಡದಿದ್ದರೆ ಪ್ರತಿಕೂಲವಾಗುವಂತಹ ಸಂದೇಶಗಳು ರವಾನೆಯಾಗುವುದರಿಂದ ಪಕ್ಷ ಈ ನಿಟ್ಟಿನಲ್ಲಿ ಧೃಡ ನಿರ್ಧಾರ ಕೈಗೊಳ್ಳಬೇಕೆಂದರು.

ಕಾಂಗ್ರೆಸ್​ಗೆ ಮೈಸೂರು; ಜೆಡಿಎಸ್​ಗೆ ಬೆಂ. ಉತ್ತರ:

ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಡುವ ಜೊತೆಗೆ ಮೈಸೂರನ್ನೂ ಬಿಟ್ಟುಕೊಟ್ಟರೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸಂಘಟನೆಗೆ ತೊಡಕಾಗಲಿದೆ. ಹಾಗಾಗಿ ಯಾವ ಕಾರಣಕ್ಕೂ ಮೈಸೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಬಾರದು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಬಳಿಕ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರೇ ಸ್ಪರ್ಧಿಸಲು ಬಯಸುತ್ತಿರುವುದರಿಂದ ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟು ಮೈಸೂರು ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿತು ಎನ್ನಲಾಗಿದೆ.

ಜೆಡಿಎಸ್​ಗೆ 6 ಅಥವಾ 7 ಸೀಟು ಕೊಡಲು ಒಪ್ಪಿಗೆ:

ಜೆಡಿಎಸ್ ಪಕ್ಷಕ್ಕೆ ಎಷ್ಟು ಸೀಟು ಬಿಟ್ಟುಕೊಡಬೇಕು ಎಂಬ ಬಗ್ಗೆ ಕೂಡ ಬಹಳ ಹೊತ್ತು ಚರ್ಚೆ ಮಾಡಿ ಕಡೆಗೆ 6 ಅಥವಾ 7 ಸೀಟುಗಳನ್ನು ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ನಿರ್ಧಾರ ಮಾಡಿದೆ. ಎಷ್ಟು ಸೀಟುಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂಬುದಕ್ಕಿಂತ ಎಷ್ಟು ಸೀಟುಗಳನ್ನು ಗೆಲ್ಲುತ್ತೇವೆ ಎಂಬುದು ಮುಖ್ಯ. ಒಟ್ಟಿನಲ್ಲಿ ಮೈತ್ರಿಕೂಟ ಹೆಚ್ಚು ಸೀಟು ಗೆಲ್ಲಬೇಕು. ಅದಕ್ಕನುಗುಣವಾಗಿ ಸೀಟು ಹಂಚಿಕೊಳ್ಳೋಣ ಎಂದು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಾ. ೧೬ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ:

ಕೆಪಿಸಿಸಿ ಚುನಾವಣಾ ಸಮಿತಿ ಕಳುಹಿಸಿದ್ದ ಆಕಾಂಕ್ಷಿಗಳಿಗೆ ಜರಡಿ ಹಿಡಿದು ಈಗ ಕೆಲ ಕ್ಷೇತ್ರಗಳಿಗೆ ಒಬ್ಬರ ಹೆಸರನ್ನು ಹಾಗೂ ಮತ್ತಿನ್ನು ಕೆಲ ಕ್ಷೇತ್ರಗಳಿಗೆ ಇಬ್ಬರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗಿದೆ. ಇದೇ ತಿಂಗಳ 16ರಂದು ಚುನಾವಣಾ ಸಮಿತಿ ಸಭೆ ನಡೆಯಲಿದ್ದು ಅಂದು ಅಭ್ಯರ್ಥಿಗಳ ಹೆಸರು ಅಂತಿಮವಾಗಲಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಒಂದೇ ಹಂತದಲ್ಲಿ ಹೆಸರು ಪ್ರಕಟವಾಗುವ ಸಾಧ್ಯತೆಗಳು ಬಹಳ ಕಡಿಮೆ‌ ಇವೆ.

Comments are closed.