ಕರ್ನಾಟಕ

ಮಂಡ್ಯ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾದ ಸೋಷಿಯಲ್​​ ಮೀಡಿಯಾ!

Pinterest LinkedIn Tumblr


ನವದೆಹಲಿ: ಚುನಾವಣೆ ಅಂದರೇ ಒಂದು ಕಾಲ ಇತ್ತು. ಪ್ರಚಾರದ ಆಟೋ ಬರಬೇಕು, ಊರಿಗೆಲ್ಲಾ ಪ್ಲೆಕ್ಸ್, ಬಂಟಿಂಗ್ಸ್ ಕಟ್ಟಬೇಕು. ಅಭ್ಯರ್ಥಿ ಬಂದು ಭಾಷಣ ಮಾಡಬೇಕು. ಆಗ ಮಾತ್ರ ಇವರೇ ಅಭ್ಯರ್ಥಿ ಅಂತ ಗೊತ್ತಾಗುತ್ತಿತ್ತು. ಹೀಗೆ ನಡೆದರೇ ಮಾತ್ರ ಚುನಾವಣೆ ಎಂದಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಆಟೋ ಮೂಲಕ ಪ್ರಚಾರ ಮಾಡುವ ಬದಲಿಗೆ ಇಂದು ಮೊಬೈಲ್​​ನಲ್ಲಿಯೇ ವಿಡಿಯೋ ಹರಿಬಿಟ್ಟು ಪ್ರಚಾರ ಮಾಡಲಾಗುತ್ತಿದೆ. ಸೋಷಿಯಲ್ ಮೀಡಿಯಾ ಬಂದಾಗಿನಿಂದ ಯಾವುದೇ ಮೈಕ್, ಆಟೋ, ಬ್ಯಾನರ್, ಬಂಟಿಗ್ಸ್ ಇಲ್ಲದೇ ಪ್ರಚಾರ ಮಾಡಬಹುದಾಗಿದೆ. ಇಲ್ಲಿ ಸಕ್ರಿಯವಾದರೇ ಸಾಕು ಮತದಾರರ ಬಳಿ ಸುಲಭವಾಗಿ ತಲುಪಬಹುದಾಗಿದೆ. ಇದಕ್ಕೆ ಸಾಕ್ಷಿಯಾಗಿ ನಾವು ಮಂಡ್ಯ ರಾಜಕೀಯ ನೋಡಬಹುದಾಗಿದೆ.

ಹೌದು, ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿಯೇ ಮಂಡ್ಯ ಅಭ್ಯರ್ಥಿಗಳ ಪರ-ವಿರೋಧ ಪ್ರಚಾರ ಭರಾಟೆಯಿಂದ ಸಾಗುತ್ತಿದೆ. ಇಲ್ಲಿನ ಈ ಬಾರಿಯ ಚುನಾವಣಾ ಅಖಾಡ ಈಗ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದೆ. ಜೆಡಿಎಸ್ ಹಾಗೂ ಸುಮಲತಾ ಅಭಿಮಾನಿಗಳ ನಡುವೇ ಇಲ್ಲಿಯೇ ಸಮರ ಶುರುವಾಗಿದ್ದು, ತಮ್ಮ ಅಭ್ಯರ್ಥಿಗಳ ಪ್ರಚಾರದಲ್ಲಿ ತೊಡಗಿದ್ಧಾರೆ.

ಮಂಡ್ಯಕ್ಕೆ ಅಂಬರೀಶ್​​ ಏನು ಮಾಡಿದ್ಧಾರೆ ಎಂದು ಜೆಡಿಎಸ್​​​ ಕಾರ್ಯಕರ್ತರು ಸುಮಲತಾ ಅವರಿಗೆ ಪ್ರಶ್ನೆ ಮಾಡಿದರೇ, ಇದಕ್ಕೆ ಪ್ರತಿಯಾಗಿ ರೆಬೆಲ್​​ ಸ್ಟಾರ್​​​​​ ಅಭಿಮಾನಿಗಳು ಜಿಲ್ಲೆಗೆ ಜೆಡಿಎಸ್​​ ಕೊಡುಗೆ ಏನು? ಎಂದು ಮರುಪ್ರಶ್ನೆ ಕೇಳುತ್ತಿದ್ದಾರೆ. ಈ ಚರ್ಚೆ ಯಾವ ಮಟ್ಟಕ್ಕೆ ಹೋಗಿದೆ ಎಂದರೇ, ನೇರ ಮಾಜಿ ಪ್ರಧಾನಿ ಎಚ್​​.ಡಿ ದೇವೆಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲಾಗುತ್ತಿದೆ. ಅಂಬರೀಶ್​ ಅಭಿಮಾನಿಗಳು ಕೇಳಿತ್ತಿರುವ ಪ್ರಶ್ನೆಗಳಿಗೆ ಜೆಡಿಎಸ್​​​ ಕಾರ್ಯಕರ್ತರು ಸಿಡಿಮಿಡಿಗೊಂಡು ಪ್ರತಿಕ್ರಿಯಿಸುತ್ತಿದ್ದಾರೆ.

ಈ ಮಧ್ಯೆ ಜೆಡಿಎಸ್​​ನಲ್ಲಿಯೇ ಒಳಜಗಳ ಶುರುವಾಗಿದೆ. ಇನ್ನು ಲಕ್ಷ್ಮೀ ಅಶ್ವಿನ್ ಗೌಡ ಅಭಿಮಾನಿಗಳು ಭಾರೀ ಸಕ್ರಿಯರಾಗಿದ್ದಾರೆ. ಜೆಡಿಎಸ್​​ಗಾಗಿ ಲಕ್ಷ್ಮೀ ಅಶ್ವಿನ್ ಗೌಡ ಅವರು ಅಧಿಕಾರಿ ಬಿಟ್ಟು ಬಂದರೂ ಟಿಕೆಟ್​​ ನೀಡಲಿಲ್ಲ ಎಂದು ಕಿಡಿಕಾರಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಎರಡು ಕಡೆ ಅಭಿಮಾನಿಗಳು ರಾಜಕೀಯ ಕೆಸರೆರಚಾಟಗಳಲ್ಲಿ ತೊಡಗಿದ್ದಾರೆ.

ಜಿಲ್ಲೆಯ ಕಾಂಗ್ರೆಸ್​​ ಕಾರ್ಯಕರ್ತರ ನಿಯೋಗ ಕೂಡ ಸುಮಲತಾ ಅಂಬರೀಶ್​​ ಅವರಿಗೆ ಟಿಕೆಟ್​​ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕಾಗಿ ತಮ್ಮ ಪಕ್ಷದ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​​ ಹಾಕಲಾಗುತ್ತಿದೆ.

ಸೋಷಿಯಲ್​​​​ ಮೀಡಿಯಾದಲ್ಲಿ ಗೋ ಬ್ಯಾಕ್​​​ ನಿಖಿಲ್​​ ಎಂಬ ಕ್ಯಾಂಪೇನ್​​ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಎಚ್​​​.ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್​​, ವರಿಷ್ಠರು ಪಕ್ಷದ ನಾಯಕರ ಜತೆ ಚರ್ಚಿಸಿಯೇ ನನಗೆ ಟಿಕೆಟ್​​ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಮಂಡ್ಯ ಜನತೆ ನಾಡಿಮಿಡಿತ ಅರಿತು ನನಗೆ ಲೋಕಸಭೆಗೆ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ ನೀಡಲಾಗುತ್ತಿದೆ ಎಂದು ಹೇಳಿದ್ಧಾರೆ.

ಒಟ್ಟಾರೆ ಸಕ್ಕರೆನಾಡು ಮಂಡ್ಯದಲ್ಲಿ ಚುನಾವಣೆಗೂ ಮುನ್ನವೇ ಸೋಷಿಯಲ್ ಮೀಡಿಯಾ ಸಖತ್ ಸದ್ದು ಮಾಡುತ್ತಿದೆ. ಸಂಭಾವ್ಯ ಅಭ್ಯರ್ಥಿಗಳ ಪರ-ವಿರೋಧ ಚರ್ಚೆಗೆ ವೇದಿಕೆಯಾಗಿದೆ. ಅದರಲ್ಲೂ ಸಿ.ಎಂ ಎಚ್​​​.ಡಿ ಕುಮಾರಸ್ವಾಮಿಯವರ ಕುಟುಂಬ ರಾಜಕಾರಣದ ವಿರುದ್ದ ಸಮರಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ.

Comments are closed.